ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್‍ ಪಠಣ ಖಂಡನೀಯ: ಶಾಸಕ ಅರವಿಂದ ಬೆಲ್ಲದ

| Published : Oct 08 2025, 01:01 AM IST

ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್‍ ಪಠಣ ಖಂಡನೀಯ: ಶಾಸಕ ಅರವಿಂದ ಬೆಲ್ಲದ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಸಮುದಾಯದ ಓಲೈಕೆಯಲ್ಲೇ ನಿರತವಾಗಿರುವ ರಾಜ್ಯ ಸರ್ಕಾರ ಇದೀಗ ಸರ್ಕಾರಿ ಕಾರ್ಯಕ್ರಮದಲ್ಲೇ ಕುರಾನ್‍ ಪಠಣಕ್ಕೆ ಅವಕಾಶ ನೀಡುವ ಮೂಲಕ ಮುಸ್ಲಿಂ ತುಷ್ಟೀಕರಣವೇ ನಮ್ಮ ಧ್ಯೇಯ ಎಂಬುದನ್ನು ಮತ್ತೆ ಜಗಜ್ಜಾಹೀರು ಮಾಡಿದೆ.

ಧಾರವಾಡ:

ಮುಸ್ಲಿಂ ಸಮುದಾಯದ ಓಲೈಕೆಯಲ್ಲೇ ನಿರತವಾಗಿರುವ ರಾಜ್ಯ ಸರ್ಕಾರ ಇದೀಗ ಸರ್ಕಾರಿ ಕಾರ್ಯಕ್ರಮದಲ್ಲೇ ಕುರಾನ್‍ ಪಠಣಕ್ಕೆ ಅವಕಾಶ ನೀಡುವ ಮೂಲಕ ಮುಸ್ಲಿಂ ತುಷ್ಟೀಕರಣವೇ ನಮ್ಮ ಧ್ಯೇಯ ಎಂಬುದನ್ನು ಮತ್ತೆ ಜಗಜ್ಜಾಹೀರು ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರದ ಪ್ರತಿ ಕಾರ್ಯಕ್ರಮಕ್ಕೂ ಒಂದು ಗೌರವ, ನಿಯಮ ಇದೆ. ಆದರೆ, ಹುಬ್ಬಳ್ಳಿ ವಿಶಾಲ್ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಾನಗರ ಪಾಲಿಕೆ, ಲೋಕೋಪಯೋಗಿ, ಹೆಸ್ಕಾಂ ಇಲಾಖೆಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಸರ್ಕಾರದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆ ಮಾಡಲು ಕಾರ್ಯಕ್ರಮ ನಡೆಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಸಮಾರಂಭಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಕುರಾನ್‍ ಪಠಣಕ್ಕೆ ಅವಕಾಶ ನೀಡಿದ್ದು ಸರಿಯಲ್ಲ. ಒಂದು ಸಮುದಾಯದ ಖಾಸಗಿ ಕಾರ್ಯಕ್ರಮವಾಗಿದ್ದರೆ, ಯಾರ ಅಭ್ಯಂತರವೂ ಇರಲಿಲ್ಲ. ಆದರೆ, ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್‍ ಪಠಣಕ್ಕೆ ಅವಕಾಶ ನೀಡಿದ ಅಧಿಕಾರಿಗಳ ಮೇಲೆ ಸಚಿವರು ಕ್ರಮ ವಹಿಸಬೇಕಿತ್ತು. ಇದನ್ನು ಬಿಟ್ಟು ಇವರೇ ಕುಮ್ಮಕ್ಕು ನೀಡಿದ್ದು ಖೇದಕರ ಎಂದಿರುವ ಬೆಲ್ಲದ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳು, ಬಿಜೆಪಿ ನಾಯಕರನ್ನು ಟೀಕೆ ಮಾಡುವ ಸಚಿವ ಸಂತೋಷ ಲಾಡ್‍, ಸಮಾರಂಭದಲ್ಲಿ ಭಾಷಣ ಮಾಡುವಾಗ ಆಜಾನ್‍ (ನಮಾಜ್‍) ಕೇಳಿ ಬರುತ್ತಿದ್ದಂತೆ ಭಾಷಣ ನಿಲ್ಲಿಸಿದ್ದಾರೆ. ಆಜಾನ್‍ ಮುಗಿದ ಬಳಿಕ ಮತ್ತೆ ಭಾಷಣ ಆರಂಭಿಸಿದ್ದಾರೆ. ಇದು ರಾಜ್ಯ ಸರ್ಕಾರದ ಮುಸ್ಲಿಂ ತುಷ್ಟೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಜನರ ಹಿತ ಕಾಪಾಡಬೇಕಿರುವ ಸರ್ಕಾರವೇ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ದುರದೃಷ್ಟಕರ. ಇನ್ನಾದರೂ ಸರ್ಕಾರಿ ಕಾರ್ಯಕ್ರಮಗಳನ್ನು ಸರ್ಕಾರ ನಿಯಮದ ಪ್ರಕಾರವೇ ನಡೆಸಲಿ, ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.