ಬಾಣಂತಿ ಸಾವು ಪ್ರಕರಣ-ಜಿಲ್ಲಾಸ್ಪತ್ರೆಗೆ ಆರ್‌. ಅಶೋಕ್ ಭೇಟಿ

| Published : Dec 02 2024, 01:18 AM IST

ಸಾರಾಂಶ

ಹೆರಿಗೆಗೆಂದು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದು ಯಾವಾಗ? ಬರುವಾಗ ಅವರ ಆರೋಗ್ಯ ಸ್ಥಿತಿ ಹೇಗಿತ್ತು?

ಬಳ್ಳಾರಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಆರ್‌. ಅಶೋಕ್ ಭಾನುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಹೆರಿಗೆಗೆಂದು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದು ಯಾವಾಗ? ಬರುವಾಗ ಅವರ ಆರೋಗ್ಯ ಸ್ಥಿತಿ ಹೇಗಿತ್ತು? ಪ್ರಾಥಮಿಕವಾಗಿ ನೀಡಿದ ಚಿಕಿತ್ಸೆ ಏನು? ಶಸ್ತ್ರಚಿಕಿತ್ಸೆ ನಂತರವೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ. ಶಸ್ತ್ರಚಿಕಿತ್ಸೆ ಬಳಿಕ ಅವರಿಗೆ ನೀಡಿದ ಚಿಕಿತ್ಸೆ ಏನೇನು? ಎಂಬಿತ್ಯಾದಿ ಮಾಹಿತಿಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ ಅವರಿಂದ ಮಾಹಿತಿ ಪಡೆದರು. ಬ್ಯಾನ್ ಮಾಡಿದ ಗ್ಲುಕೋಸ್ ನೀಡಿಕೆಯಿಂದ ಅವಘಡ ಸಂಭವಿಸಿದ್ದು, ಕಳಪೆ ಗುಣಮಟ್ಟದ ಬಳಕೆ ಹೇಗೆ ಮಾಡಿದಿರಿ ಎಂದು ಅಧಿಕಾರಿಗಳನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡ ಅಶೋಕ್, ವೈದ್ಯಾಧಿಕಾರಿಗಳು ಹಾಗೂ ವೈದ್ಯರಿಂದ ಘಟನೆಯ ಕುರಿತು ಮಾಹಿತಿ ಪಡೆದರು.

ಘಟನೆಯಲ್ಲಿ ವೈದ್ಯರು ಹಾಗೂ ವೈದ್ಯಾಧಿಕಾರಿಗಳ ಯಾವುದೇ ಪಾತ್ರವಿಲ್ಲ ಎಂದು ಗೊತ್ತಾಗುತ್ತಿದೆ. ಸರ್ಕಾರ ಸರಬರಾಜು ಮಾಡಿರುವ ಕಳಪೆ ಔಷಧಿಯಿಂದಾಗಿಯೇ ಈ ಎಲ್ಲ ಅವಘಡಕ್ಕೆ ಕಾರಣವಾಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.

ಬಳಿಕ ಹೆರಿಗೆ ವಾರ್ಡ್‌ಗಳಿಗೆ ಭೇಟಿ ನೀಡಿದ ಅಶೋಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಿಳೆಯರಿಂದ ಸ್ಥಳೀಯ ವೈದ್ಯಕೀಯ ಸೇವೆ ಕುರಿತು ಮಾಹಿತಿ ಪಡೆದರು. ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿಯ ನಾಯಕರು ಇದ್ದರು.

ಬಳಿಕ ಬಿಮ್ಸ್‌ ಆಸ್ಪತ್ರೆಗೆ ತೆರಳಿದ ಅಶೋಕ್ ಅವರು ಘಟನೆ ಕುರಿತು ಬಿಮ್ಸ್‌ ನಿರ್ದೇಶಕರಿಂದ ಮಾಹಿತಿ ಪಡೆದರು.

ಬಾಣಂತಿ ಸಾವು ಪ್ರಕರಣ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ವೈದ್ಯಾಧಿಕಾರಿಗಳ ಜತೆ ಚರ್ಚಿಸಿದರು.