ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳನ್ನು ಜೋಡಿಸುವ ₹೫೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ವೇಗ ಪಡೆದುಕೊಂಡಿದ್ದು, ಎರಡೂ ಜಿಲ್ಲೆಗಳ ಗಡಿಗ್ರಾಮಗಳ ಜನರ ಬಹುದಿನಗಳ ಕನಸು ನನಸಾಗುವ ಭರವಸೆ ಮೂಡಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳನ್ನು ಜೋಡಿಸುವ ₹೫೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ವೇಗ ಪಡೆದುಕೊಂಡಿದ್ದು, ಎರಡೂ ಜಿಲ್ಲೆಗಳ ಗಡಿಗ್ರಾಮಗಳ ಜನರ ಬಹುದಿನಗಳ ಕನಸು ನನಸಾಗುವ ಭರವಸೆ ಮೂಡಿದೆ. 7-8 ವರ್ಷಗಳಿಂದ ಕುಂಟುತ್ತ ಸಾಗಿದ್ದ ಕಾಮಗಾರಿ ೩ ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಹೆಚ್ಚುವರಿಯಾಗಿ ₹೧೦ ಕೋಟಿಯೊಂದಿಗೆ ಒಟ್ಟು ₹೫೫ ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿದೆ.

ಬೇಸಿಗೆಯೊಳಗಾಗಿ ನದಿಯೊಳಗಿನ ಎಲ್ಲ ಫಿಲ್ಲರ್‌ಗಳ ಕಾರ್ಯ ಸಂಪೂರ್ಣಗೊಳ್ಳಬೇಕಿದೆ. ಈಗಾಗಲೇ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದತ್ತ ಸೇತುವೆಗೆ ಸಂಬಣಧಿಸಿದ ಕಾರ್ಯ ವೇಗ ಪಡೆದಿದೆ. ಮುಂದಿನ ದಿನಗಳಲ್ಲಿ ರಬಕವಿ, ಮದನಮಟ್ಟಿ ಭಾಗದ ಜಮೀನು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಶೀಘ್ರ ಕಾಮಗಾರಿ ನಡೆಯಲಿದೆ.

ಸದ್ಯ ನದಿಯೊಳಗೆ ಎರಡು ಪಿಲ್ಲರ್ ಅಳವಡಿಕೆ ಕಾರ್ಯ ನಡೆಯಬೇಕಿದೆ. ನದಿಯೊಳಗೆ ನೀರಿನ ಪ್ರಮಾಣ ಕಡಿಮೆಯಿದ್ದು, ಈಗಲೇ ಕಾರ್ಯ ಚುರುಕುಗೊಳಿಸಬೇಕಿದೆ. ಮಳೆಗಾಲ ಆರಂಭವಾದರೆ ಮಹಾರಾಷ್ಟ್ರದ ನೀರು ಕೃಷ್ಣೆಗೆ ಹರಿದು ಬರುವುದರಿಂದ ನದಿಯೊಳಗಿನ ಕಾಮಗಾರಿಗೆ ಸಮಸ್ಯೆ ಎದುರಾಗಲಿದ್ದು, ತಕ್ಷಣವೇ ಪಿಲ್ಲರ್ ಅಳವಡಿಕೆ ಕಾರ್ಯ ನಡೆಯಬೇಕೆಂಬುದು ಅವಳಿ ನಗರದ ಜನರ ಒತ್ತಾಯವಾಗಿದ್ದು, ಯೋಜನೆಯ ಕ್ರೆಡಿಟ್‌ ಪಡೆಯಲು ಪೈಪೋಟಿ ನಡೆಸಿರುವ ರಾಜಕೀಯ ಮುಖಂಡರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.