ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ, ಮಾಧ್ಯಮಗಳ ಮುಂದೆ ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ, ಮಾಧ್ಯಮಗಳ ಮುಂದೆ ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ, ಅದಕ್ಕೆ ಈಗ ಸಮಯವಲ್ಲ. ಇನ್ನೂ ಚುನಾವಣೆಗಳು ನಡೆಯುತ್ತಿವೆ. ಮೊದಲು ಚುನಾವಣೆ ಮುಗಿಯಲಿ, ನಂತರ ಅದರ ಬಗ್ಗೆ ಯೋಚಿಸೋಣ ಎಂದರು.
ಗೌರವ ಹಾಳು ಮಾಡಬಾರದು:
ಜತೆಗೆ, ಎಲ್ಲ ಶಾಸಕರು ಪಕ್ಷದ ಶಿಸ್ತನ್ನು ಕಾಪಾಡಬೇಕು. ಪಕ್ಷಕ್ಕೆ ಗೌರವ ನೀಡಬೇಕು. ಮಾಧ್ಯಮಗಳ ಎದುರು ಪಕ್ಷದ ಗೌರವ ಹಾಳು ಮಾಡಬಾರದು. ಸಿಎಂ ಅವರೂ ಈಗಾಗಲೇ ಶಾಸಕರಿಗೆ ಈ ವಿಚಾರ ಹೇಳಿದ್ದಾರೆ. ಎಲ್ಲರೂ ಪಕ್ಷದಲ್ಲೇ ಭವಿಷ್ಯ ರೂಪಿಸಿಕೊಳ್ಳಬೇಕೇ ಹೊರತು ಮಾಧ್ಯಮಗಳ ಮುಂದೆ ಅಲ್ಲ ಎಂದರು.
ಕೆಲವರು ಚರ್ಚಿಸಿದ್ದಾರೆ ಎಂದರು
ಶಾಸಕರು ದೆಹಲಿಗೆ ತೆರಳುವ ಮುನ್ನ ನಿಮ್ಮ ಬಳಿ ಚರ್ಚೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕೆಲವರು ಚರ್ಚಿಸಿದ್ದಾರೆ ಎಂದರು. ಖರ್ಗೆ ಅವರ ಭೇಟಿ ಕುರಿತು ಮಾತನಾಡಿ, ಪಕ್ಷದಿಂದ ತಮಿಳುನಾಡಿಗೆ ತೆರಳುವಂತೆ ಸೂಚನೆ ನೀಡಿದ್ದರು. ತಮಿಳುನಾಡಿಗೆ ಹೋಗಿ ಬಂದಿದ್ದು, ಆ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ವರದಿ ನೀಡಬೇಕಿತ್ತು, ನೀಡಿದ್ದೇನೆ. ಮತ್ತೆ ತಮಿಳುನಾಡಿಗೆ ಹೋಗಬೇಕಾಗಿದೆ ಎಂದರು.
