- ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನ ಕರೆ ತಂದ ಕಾಂಗ್ರೆಸ್‌ - ಸಮರ್ಥ ಪರ ಪ್ರಚಾರಕ್ಕೆ ಬಂದಿದ್ದೇನೆ, ನನ್ನ ರನ್ ಔಟ್ ಮಾಡಬೇಡಿ: ಮೊಹಮ್ಮದ್‌ ಅಜ಼ರುದ್ದೀನ್‌ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದ್ದ ಮಂಗಳವಾರ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆ ತೆಲಂಗಾಣ ಸಚಿವ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್ ಅಜ಼ರುದ್ದೀನ್ ಸಹ ಹಳೇ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ರೋಡ್ ಶೋ ಮೂಲಕ ಮತಯಾಚಿಸಿದರು.

ನಗರದ ಕಾಯಿಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಅಭ್ಯರ್ಥಿ ಸಮರ್ಥ ಎಂ. ಶಾಮನೂರು ಜೊತೆಗೆ ಮೊಹಮ್ಮದ್ ಅಜ಼ರುದ್ದೀನ್‌, ನಾಸೀರ್ ಹುಸೇನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ವಿಪ ಮುಖ್ಯ ಸಚೇತಕ ಸಲೀಂ ಅಹಮ್ಮದ್, ಅರ್ಷದ್ ರಿಜ್ವಾನ್, ಹ್ಯಾರೀಸ್ ಸೇರಿದಂತೆ ಅನೇಕರು ರೋಡ್ ಶೋನಲ್ಲಿ ಸಮರ್ಥ ಪರ ಮತಯಾಚಿಸುತ್ತಾ ಸಾಗಿದರು.


ಕಾಯಿಪೇಟೆ ಮಾರ್ಗವಾಗಿ ಹಳೆ ಭಾಗದಲ್ಲಿ ಸಂಚರಿಸಿದ ರೋಡೋ ಶೋ ಅಲ್ಪಸಂಖ್ಯಾತರು ಬಹುಸಂಖ್ಯಾತರಾಗಿರುವ ಆಜಾದ್ ನಗರ, ಬಾಷಾ ನಗರ, ಅಕ್ತರ್ ರಜಾ ವೃತ್ತದ ಮಾರ್ಗವಾಗಿ ಸಾಗಿ, ಎಸ್ಸೆಸ್ಸೆಂ ನಗರದ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆದ ಬಹಿರಂಗ ಸಭೆಯಲ್ಲಿ ಸಮರ್ಥ ಶಾಮನೂರುಗೆ ಮತ ನೀಡುವಂತೆ ಕ್ಷೇತ್ರದ ಮತದಾರರು, ವಿಶೇಷವಾಗಿ ಆ ಭಾಗದ ಅಲ್ಪಸಂಖ್ಯಾತರಿಗೆ ಒಕ್ಕೊರಲಿನಿಂದ ಮನವಿ ಮಾಡಿದರು.

ಇದೇ ವೇಳೆ ಡಿ.ಕೆ.ಶಿವಕುಮಾರ ಮಾತನಾಡಿ, ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 5 ಗಂಟೆಗೆ ತೆರೆಬೀಳಲಿದೆ. ಉಪ ಚುನಾವಣೆಗೆ ಇನ್ನೂ 2 ದಿನಗಳಿವೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ, ನಮ್ಮ ಅಭ್ಯರ್ಥಿ ಸಮರ್ಥನ ಪರ ಮತಯಾಚನೆ ಮಾಡಬೇಕು. ದಿವಂಗತ ಶಾಮನೂರು ಶಿವಶಂಕರಪ್ಪನವರು ಕ್ಷೇತ್ರಕ್ಕೆ ಕೊಟ್ಟ ಕೊಡುಗೆ, ಎಲ್ಲ ಧರ್ಮೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರ, ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಿದ್ದನ್ನು ಜನತೆ ಸ್ಮರಿಸುತ್ತಾರೆ. ಇದೀಗ ಅಜ್ಜನ ಹಾದಿಯಲ್ಲೇ ಮೊಮ್ಮಗ ಸಮರ್ಥ ಸಹ ಸಾಗುತ್ತಾನೆಂಬ ವಿಶ್ವಾಸ ತಮಗಿದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಂತೆ ಬಿಜೆಪಿಯವರು ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಗ್ಯಾರಂಟಿಗಳನ್ನು ಕೊಡದಂತೆ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ. ನಾವು ಸಹ ಏನು ಉತ್ತರ ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಬಿಜೆಪಿಯ ನಿಜ ಬಣ್ಣ ಇದರೊಂದಿಗೆ ಬಯಲಾಗಿದೆ. ಯಾವ ಸರ್ಕಾರ ಬಂದರೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಆಗುವುದಿಲ್ಲ. ದಾವಣಗೆರೆ ದಕ್ಷಿಣದಲ್ಲಿ ಸಮರ್ಥ ಗೆದ್ದೇ ಗೆಲ್ಲುತ್ತಾನೆ ಎಂದು ಅವರು ತಿಳಿಸಿದರು.

ಮಾಜಿ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವಾಗಿದೆ. ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಜಾತಿ, ಧರ್ಮೀಯರನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದೆ. ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಶೇ.99 ಭರವಸೆಗಳನ್ನು ಇಲ್ಲಿ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಎಂ.ಶಾಮನೂರುಗೆ ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಮನವಿ ಮಾಡಿದರು.

ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ತೆರಳಿ, ಪ್ರಚಾರ ಕೈಗೊಂಡಿದ್ದಾರೆ. ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಕೇಂದ್ರದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ದಾವಣಗೆರೆ ಕ್ಷೇತ್ರಕ್ಕೆ ಸಮರ್ಥನ ಪರ ಪ್ರಚಾರಕ್ಕೆ ಬಂದಿದ್ದೇನೆ. ಇಲ್ಲಿ ನನ್ನನ್ನು ರನ್‌ ಔಟ್ ಮಾಡಬೇಡಿ, ಮ್ಯಾಚ್ ಗೆಲ್ಲಿಸುವ ಮೂಲಕ ನಮ್ಮ ಮನವಿಗೆ ಸ್ಪಂದಿಸಿ. ಕಾಂಗ್ರೆಸ್ ಇಲ್ಲಿ ಗೆಲ್ಲುತ್ತದೆ. ಸಮರ್ಥನೂ ಭಾರೀ ಬಹುಮತದೊಂದಿಗೆ ಗೆಲ್ಲುತ್ತಾನೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.

ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ, ಕೆ.ಎಚ್. ಮುನಿಯಪ್ಪ, ಎಂ.ಸಿ.ಸುಧಾಕರ, ಶಾಸಕರಾದ ಬೇಲೂರು ಗೋಪಾಲಕೃಷ್ಣ, ಎಚ್.ಸಿ. ಬಾಲಕೃಷ್ಣ, ವೀರೇಂದ್ರ ಪಪ್ಪಿ, ಮಂಜುನಾಥ ಭಂಡಾರಿ ಇತರರು ಇದ್ದರು. ಇದರೊಂದಿಗೆ ಬಹಿರಂಗ ಪ್ರಚಾರ ಮುಕ್ತಾಯದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ, ಮಹಮ್ಮದ್ ಅಜರುದ್ದೀನ್ ಸೇರಿದಂತೆ ಕಾಂಗ್ರೆಸ್ಸಿನ ಸಚಿವರು, ಶಾಸಕರು ಬಾಪೂಜಿ ಗೆಸ್ಟ್‌ ಹೌಸ್‌ಗೆ ತೆರಳಿದರು. ಅಲ್ಲಿ ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

- - -

-(ಫೋಟೋವಳಿವೆ):