ರೇಬಿಸ್ ಚಿಕಿತ್ಸೆ ಇಲ್ಲದ ರೋಗ, ಪ್ರಾಣಹಾನಿ ನಿಶ್ಚಿತ: ಡಾ.ಆಂಜಿನಪ್ಪ

| Published : Oct 07 2025, 01:02 AM IST

ರೇಬಿಸ್ ಚಿಕಿತ್ಸೆ ಇಲ್ಲದ ರೋಗ, ಪ್ರಾಣಹಾನಿ ನಿಶ್ಚಿತ: ಡಾ.ಆಂಜಿನಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಬೇಕು. ಒಮ್ಮೆ ರೇಬಿಸ್‌ಗೆ ತುತ್ತಾದರೆ ಚಿಕಿತ್ಸೆ ಕಷ್ಟ, ಪ್ರಾಣಹಾನಿ ನಿಶ್ಚಿತ ಎಂದು ಕಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಆಂಜಿನಪ್ಪ ತಿಳಿಸಿದರು.

ದಾಬಸ್‍ಪೇಟೆ: ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಬೇಕು. ಒಮ್ಮೆ ರೇಬಿಸ್‌ಗೆ ತುತ್ತಾದರೆ ಚಿಕಿತ್ಸೆ ಕಷ್ಟ, ಪ್ರಾಣಹಾನಿ ನಿಶ್ಚಿತ ಎಂದು ಕಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಆಂಜಿನಪ್ಪ ತಿಳಿಸಿದರು.

ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಸಹಯೋಗದಲ್ಲಿ ವಿಶ್ವ ರೇಬಿಸ್ ದಿನದ ಪ್ರಯುಕ್ತ ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೇಬಿಸ್ ಚಿಕಿತ್ಸೆ ಇಲ್ಲದ ರೋಗ, ಶೇ.90ರಷ್ಟು ನಾಯಿಗಳಿಂದಲೇ ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ತುಂಬಾ-ಅವಶ್ಯಕ ಎಂದು ಸಲಹೆ ನೀಡಿದರು.

ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಜಗದೀಶ್ ಮಾತನಾಡಿ, ಮುಂದಿನ ದಿನಗಳಲ್ಲಿ ರೇಬಿಸ್ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಪಶು ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಶಿವರಾಮು ಮಾತನಾಡಿ, ನಾಯಿಗೆ ರೇಬಿಸ್ ರೋಗವಿದೆ ಎಂದು ತಿಳಿಯಲು ಅವುಗಳ ಚಲನವಲನಗಳಿಂದ ಗೊತ್ತಾಗುತ್ತದೆ. ಬಾಯಲ್ಲಿ ಜೊಲ್ಲು, ನಿರಂತರ ಬೊಗಳುವುದು, ಬೆಳಕಿಗೆ ಬರಲು ಹೆದರುವುದು, ಮಂಕು ಬಡಿದಂತೆ ಕೂರುವುದು, ರೋಗದ ಪ್ರಮುಖ ಲಕ್ಷಣ. ನಿಯಮಿತವಾಗಿ ಲಸಿಕೆ ಹಾಕಿಸಿದರೆ ಇದನ್ನು ನಿಯಂತ್ರಿಸಬಹುದು ಎಂದರು.

ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪೃಥ್ವಿರಾಜ್ ಮಾತನಾಡಿ, ನಾಯಿ ಕಡಿತದ ಜಾಗದಲ್ಲಿ ಸ್ವಚ್ಛ ನೀರಿನಿಂದ 10ರಿಂದ 15 ನಿಮಿಷಗಳ ಕಾಲ ಸೋಪಿನಿಂದ ಚೆನ್ನಾಗಿ ತೊಳೆದು ಕೂಡಲೇ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.

ಈ ವೇಳೆ ಜಿಲ್ಲಾ ಮಟ್ಟದ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು, ತಾಲೂಕು ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಪೋಟೋ 1 :

ದಾಬಸ್‍ಪೇಟೆಯ ಪಶು ಆಸ್ಪತ್ರೆ ಆವರಣದಲ್ಲಿ ವಿಶ್ವ ರೇಬಿಸ್ ದಿನದ ಪ್ರಯುಕ್ತ ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ವಿರುದ್ಧ ಲಸಿಕೆ ಕಾರ್ಯಕ್ರಮಕ್ಕೆಡಾ.ಆಂಜಿನಪ್ಪ ಚಾಲನೆ ನೀಡಿದರು.