ರೇಬಿಸ್ ಒಂದು ಮರಣಾಂತಿಕ ರೋಗವಾಗಿದ್ದು, ರೇಬಿಸ್ ಸೋಂಕು ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ರೇಬಿಸ್ ಮಾರಣಾಂತಿಕವಾಗಿದ್ದರೂ ತಡೆಗಟ್ಟಬಹುದಾದ ರೋಗವಾಗಿದೆ.
ತಾಲೂಕು ಮಟ್ಟದ ವಿಶ್ವ ರೇಬಿಸ್ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗದಗರೇಬಿಸ್ ಒಂದು ಮರಣಾಂತಿಕ ರೋಗವಾಗಿದ್ದು, ರೇಬಿಸ್ ಸೋಂಕು ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ರೇಬಿಸ್ ಮಾರಣಾಂತಿಕವಾಗಿದ್ದರೂ ತಡೆಗಟ್ಟಬಹುದಾದ ರೋಗವಾಗಿದೆ. ರೇಬಿಸ್ ವೈರಸ್ಸಿನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು, ನಾಯಿ ಕಡಿತ ಹಾಗೂ ಇತರ ಪ್ರಾಣಿಗಳ ಕಡಿತವನ್ನು ಅಲಕ್ಷ ಮಾಡದೆ ಕೂಡಲೇ ಅತ್ಯಗತ್ಯವಾಗಿ ರೇಬಿಸ್ ಲಸಿಕೆ ಕಡ್ಡಾಯವಾಗಿ ಪಡೆಯಬೇಕು ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ಹೇಳಿದರು.
ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಸಭಾ ಭವನದಲ್ಲಿ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ರೇಬಿಸ್ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾಕು ನಾಯಿಗಳಿಗೆ ಆಯಾ ಮಾಲೀಕರು ಕಾಲ ಕಾಲಕ್ಕೆ ಲಸಿಕೆಗಳನ್ನು ಹಾಕಿಸುವುದು ಕೂಡ ತುಂಬಾ ಅತ್ಯಗತ್ಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ಮಧುಮತಿ ಪಂಚಮುಖಿ ಮಾತನಾಡಿ, ಬೀದಿಯಲ್ಲಿರುವ ನಾಯಿಗಳಿಂದ ಮಕ್ಕಳು ಮತ್ತು ಸಾರ್ವಜನಿಕರು ಅಂತರವನ್ನು ಕಾಯ್ದುಕೊಳ್ಳಬೇಕು. ನಾಯಿ, ಬೆಕ್ಕು ಇತರ ಪ್ರಾಣಿಗಳ ಕಡಿತವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ರೇಬಿಸ್‌ನಿಂದಾಗುವ ಸಾವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದ್ದು ಇದಕ್ಕೆ ಇತರ ಇಲಾಖೆಗಳ ಸಹಭಾಗಿತ್ವ ಅವಶ್ಯವಿದೆ ಎಂದರು.
ಈ ವೇಳೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು. ಆಶಾ ಕಾರ್ಯಕರ್ತೆ ಶಾಂತಾ ಹೊಟ್ಟಿ ಪ್ರಾರ್ಥಿಸಿದರು. ಯಾಸ್ಮಿನ್ ಬಾನು ವಡ್ಡಟ್ಟಿ ಸ್ವಾಗತಿಸಿದರು. ಶೃತಿ ಪವಾರ ನಿರೂಪಿಸಿದರು. ಸ್ವಪ್ನಾ ಕೋಳುರ ವಂದಿಸಿದರು.