ಸಾರಾಂಶ
ಭಟ್ಕಳದಲ್ಲಿ ಪಟ್ಟಣದಲ್ಲಿ ಅರಣ್ಯ ವಾಸಿಗಳ ಸಮಸ್ಯೆಗಳನ್ನು ರವೀಂದ್ರ ನಾಯ್ಕ ಆಲಿಸಿದರು.
ಭಟ್ಕಳ: ಅನಧಿಕೃತ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಮಾನದಂಡ ೨೦೧೫ಕ್ಕೆ ನಿಗದಿಗೊಳಿಸಿ ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೊರಡಿಸಿದ ಟಿಪ್ಪಣಿಯ ಆದೇಶವು ಸುಪ್ರೀಂ ಕೋರ್ಟಿನ ತೀರ್ಪಿನ ಮತ್ತು ಕಾನೂನಿನ ಉಲ್ಲಂಘನೆ ಆಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಭಾನುವಾರ ಪಟ್ಟಣದಲ್ಲಿ ಅರಣ್ಯ ವಾಸಿಗಳ ಸಮಸ್ಯೆಗಳನ್ನು ಆಲಿಸಿದ ನಂತರ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ರ ಅಡಿಯಲ್ಲಿ, ೧೯೭೮ರ ನಂತರ ಹಾಗೂ ಅರಣ್ಯ ಹಕ್ಕು ಕಾಯ್ದೆಯಂತೆ 2005ರ ಡಿ. ೧೩ರ ನಂತರ ಅತಿಕ್ರಮಣ ಮಂಜೂರಿಗೆ ಕಾನೂನು ಜಾರಿಯಲ್ಲಿ ಇಲ್ಲ. ಅಲ್ಲದೇ ನಿರ್ಬಂಧವಿದೆ. ಇದನ್ನು ಸುಪ್ರೀಂ ಕೋರ್ಟ್ ಸಹಿತ ನಿರ್ಬಂಧಿಸಿದೆ. ಆದರೆ ಆ. ೨ರ ಅರಣ್ಯ ಸಚಿವರ ಆದೇಶದಲ್ಲಿ ನಿಗದಿಗೊಳಿಸಿದ ೨೦೧೫ ರವರೆಗಿನ ಅವಧಿಗೆ ಯಾವುದೇ ಅತಿಕ್ರಮಣ ಮಾಡಲು ಕಾನೂನಲ್ಲಿ ಮಾನ್ಯತೆ ಇಲ್ಲ ಎಂದು ಹೇಳಿದರು. ಅರಣ್ಯ ಸಚಿವರ ಆದೇಶಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ಈ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸಲಾಗಿದೆ ಎಂದರು.ಸಭೆಯಲ್ಲಿ ಪದಾಧಿಕಾರಿಗಳಾದ ಪಾಂಡುರಂಗ ನಾಯ್ಕ ಬೆಳಕೆ, ದೇವರಾಜ ಗೊಂಡ, ಮಂಜುನಾಥ ಮರಾಠಿ, ಶಬ್ಬೀರ್, ಚಂದ್ರು ನಾಯ್ಕ ಗೊರಟೆ, ದೇವೇಂದ್ರ ಮರಾಠಿ ಹೆಜ್ಜಿಲು, ಖಯ್ಯೂಂ ಕೋಲಾ, ಎಸ್.ಕೆ. ಮನ್ಸೂರ್, ಚೇತನ ಮರಾಠಿ ಮುಂತಾದವರು ಅರಣ್ಯ ವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಅರಣ್ಯ ವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ೩೩ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಅರಣ್ಯವಾಸಿಗಳ ಪರವಾಗಿ ಮತ್ತಷ್ಟು ಹೋರಾಟ ನಡೆಸಲು ಸಂಘಟನಾ ಬಲ ಹೆಚ್ಚಿಸುವ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಯಿತು.