ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ಇನ್ನೆರಡು ವಾರ ಮಾತ್ರ ನೀರು

| Published : Apr 03 2024, 01:31 AM IST

ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ಇನ್ನೆರಡು ವಾರ ಮಾತ್ರ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಹಿಪ್ಪರಗಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಗೋಚರವಾಗುತ್ತಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಜೀವಜಲ ಸಂಜೀವನಿಯಾಗಿರುವ ಹಿಪ್ಪರಗಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಗೋಚರವಾಗುತ್ತಿದೆ.

೪ ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಇಂದು ಕೇವಲ ೦.೭ ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಿದೆ. ಜಲಾಶಯದಿಂದ ದಿನಂಪ್ರತಿ ೦.೦೭ ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿದೆ. ಇದಕ್ಕೆ ಜನತೆಯ ನೀರಿನ ಬಳಕೆ ಕಾರಣವಾದರೆ, ಮತ್ತೊಂದೆಡೆ ಬಿರುಬಿಸಿಲಿನ ತಾಪಕ್ಕೆ ನೀರು ಬಾಷ್ಪೀಕರಣಗೊಂಡು ನೀರಿನ ಮಟ್ಟ ತೀವ್ರ ಕುಸಿಯುತ್ತಿದೆ.

ಹಲವು ತಿಂಗಳಿಂದ ನೀರಲ್ಲಿ ಮುಳಗಿದ್ದ ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ನಿರ್ಮಿಸಿರುವ ಮಹಿಷವಾಡಗಿ ಬ್ಯಾರೇಜ್ ಪೂರ್ಣ ಗೋಚರಿಸುತ್ತಿದ್ದು, ನದಿ ಮಧ್ಯದಲ್ಲಿರುವ ಬಾಳಪ್ಪನ ದೇಗುಲದ ಅರ್ಧಕ್ಕೂ ಹೆಚ್ಚಿನ ಭಾಗ ಕಾಣುತ್ತಿದೆ. ನೀರಿನ ಮಟ್ಟ ಕೆಲ ದಿನಗಳಲ್ಲಿ ದಿಢೀರ್ ಆಗಿ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಜನರಿಗೆ ಬೇಸಿಗೆಯಲ್ಲಿ ಕೃಷ್ಣೆಯ ನೀರು ಮರೀಚಿಕೆಯಾಗುವ ಆತಂಕ ಶುರುವಾಗಿದೆ. ಇದೇ ಪ್ರಮಾಣದಲ್ಲಿ ನೀರು ಪ್ರತಿ ದಿನ ಖಾಲಿಯಾದರೆ ಏಪ್ರಿಲ್ ಎರಡನೇ ವಾರದಲ್ಲಿ ನೀರು ಸಂಪೂರ್ಣ ಬರಿದಾಗಬಹುದಾದ ಸಾಧ್ಯತೆ ಇದೆ. ಈಗಾಗಲೇ ಬ್ಯಾರೇಜ್‌ನ ಗೇಟ್‌ಗಳು ಕಾಣುತ್ತಿದ್ದು, ಸೇತುವೆ ಮೇಲೆ ರಸ್ತೆ ಸಂಚಾರ ಪ್ರಾರಂಭವಾಗಿದೆ. ರಾಜ್ಯ ಸರ್ಕಾರ ಚುನಾವಣೆ ಕಾರಣ ನೀಡದೆ ಮಹಾರಾಷ್ಟ್ರದಿಂದ ನೀರು ಹರಿಸಲು ತಕ್ಷಣ ಕ್ರಮ ಜರುಗಿಸದಿದ್ದರೆ, ನದಿತೀರದ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಏಪ್ರಿಲ್ ೧೫ರವರೆಗೆ ಮಾತ್ರ ಕೃಷ್ಣಾ ನದಿ ನೀರು ಬರಬಹುದು. ಆದರೂ ಮುಂಜಾಗ್ರತಾ ಕ್ರಮವಾಗಿ ನಗರಸಭೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಕಾರಣ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಕೆ ಮಾಡಬೇಕು. ಕೃಷ್ಣಾ ನದಿಯಲ್ಲಿನ ನೀರು ನಿಂತ ನೀರಾಗಿರುವುದರಿಂದ ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಸೋಸಿ ಕಾಯಿಸಿ ಆರಿಸಿ ಕುಡಿಯಬೇಕು.

- ಜಗದೀಶ ಈಟಿ, ಪೌರಾಯುಕ್ತ ನಗರಸಭೆ ರಬಕವಿ-ಬನಹಟ್ಟಿ.

ಹಿಪ್ಪರಗಿ ಜಲಾಶಯದಲ್ಲಿ ನೀರಿನ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇನ್ನೆರಡು ವಾರ ಮಾತ್ರ ನೀರು ದೊರಕಬಹುದು.ನೀರನ್ನು ಕಾಳಜಿಪೂರ್ವಕ ಬಳಕೆ ಮಾಡುವ ಮೂಲಕ ಜನತೆ ತಮ್ಮ ಬದ್ಧತೆ ತೋರಬೇಕು..

-ವಿ.ಎಸ್. ನಾಯಕ, ಸಹಾಯಕ ಅಭಿಯಂತರ, ಹಿಪ್ಪರಗಿ.