ವೈಟ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಡಾ.ಎಂ.ಎಚ್.ಅಂಬರೀಶ್ ರಸ್ತೆಯನ್ನು (ರೇಸ್ ಕೋರ್ಸ್ ರಸ್ತೆ) ಆಕರ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಟ್‌ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಡಾ.ಎಂ.ಎಚ್.ಅಂಬರೀಶ್ ರಸ್ತೆಯನ್ನು (ರೇಸ್ ಕೋರ್ಸ್ ರಸ್ತೆ) ಆಕರ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.

ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಮಾತನಾಡಿದರು. ಮೌರ್ಯ ಹೊಟೇಲ್ ವೃತ್ತದಿಂದ ಹರೇಕೃಷ್ಣ ಜಂಕ್ಷನ್‌ವರೆಗಿನ ಸುಮಾರು 900 ಮೀ. ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಮೌರ್ಯ ಹೊಟೇಲ್ ವೃತ್ತ ಬಳಿ ರೇಸ್ ಕೋರ್ಸ್ ಗೋಡೆ ಕಡೆ ಸಾಕಷ್ಟು ಸ್ಥಳಾವಕಾಶವಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಸಿರು ಕಾರಿಡಾರ್ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಪ್ರದೇಶದಲ್ಲಿ ಆಕರ್ಷಕ ಬೀದಿ ದೀಪಗಳನ್ನು ಅಳವಡಿಸುವುದರ ಜೊತೆಗೆ ಸಸಿಗಳನ್ನು ನೆಡಬೇಕು. ಸಾರ್ವಜನಿಕರು ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಆಸನಗಳ ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು. ಪಾದಚಾರಿ ಮಾರ್ಗದ ಪಕ್ಕದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಅವರು ಸೂಚನೆ ನೀಡಿದರು. ಲಿಂಕ್ ರಸ್ತೆ ಪರಿಶೀಲನೆ: ಮಲ್ಲೇಶ್ವರದ ಲಿಂಕ್ ರಸ್ತೆ ಹಾಗೂ 5ನೇ ಕ್ರಾಸ್ ರಸ್ತೆ ಸೇರಿದಂತೆ ಒಟ್ಟು 780 ಮೀ. ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿ ಪರಿಶೀಲಿಸಿದ ಆಯುಕ್ತರು, ಸ್ಮಾರ್ಟ್ ಬಜಾರ್ ಎದುರಿನ ಖಾಲಿ ಜಾಗದಲ್ಲಿ ಜನರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸಲು ಸೂಚಿಸಿದರು.

ಪ್ಲಾಟ್‌ಫಾರ್ಮ್ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಸಮರ್ಪಕವಾಗಿ ನಿರ್ಮಿಸುವಂತೆ ಸೂಚಿಸಿದರು. ಮಂತ್ರಿ ಮಾಲ್ ಪಕ್ಕದಲ್ಲಿರುವ 2 ಬಹುಮಹಡಿ ಕಟ್ಟಡಗಳ ಮೇಲ್ಭಾಗದಲ್ಲಿ ಕಾಮಗಾರಿಗೆ ಬಳಸಿದ್ದ ಕ್ರೇನ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

ಓಕಳಿಪುರ ಕಾರಿಡಾರ್‌ಗೆ ಬಂಡೆ ಅಡ್ಡಿ: ಓಕಳಿಪುರ ಅಷ್ಟಪಥ ಕಾರಿಡಾರ್‌ನಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಅಡ್ಡಿಯಾಗಿರುವ ಬೃಹತ್ ಬಂಡೆಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ನೀರು ನಿಲುಗಡೆಯಾಗುವುದನ್ನು ತಪ್ಪಿಸಲು ಮಳೆನೀರು ಕಾಲುವೆಗಾಗಿ ಕೈಗೊಂಡಿರುವ ಪೈಪ್‌ಲೈನ್ ಪುಶಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.