ನಾಲ್ವರು ಮೂರು, ತಲಾ ಆರು ಮಂದಿ ಎರಡು, ಒಂದೇ ಮನೆ ಸದಸ್ಯರು.!

| Published : Apr 04 2024, 01:00 AM IST

ಸಾರಾಂಶ

ಎನ್. ರಾಚಯ್ಯ ಅವರು ಮೈಸೂರಿನಿಂದ ಒಮ್ಮೆ ಲೋಕಸಭೆ, ಹುಣಸೂರಿನಿಂದ ಒಮ್ಮೆ ವಿಧಾನಸಭೆ, ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಸಂಸತ್‌ನಲ್ಲಿ ರಾಜ್ಯಸಭೆಯನ್ನು ಮೇಲ್ಮನೆ, ಲೋಕಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಅದೇ ರೀತಿ ರಾಜ್ಯದಲ್ಲಿ ವಿಧಾನ ಪರಿಷತ್ ಮೇಲ್ಮನೆಯಾದರೆ, ವಿಧಾನಸಭೆ ಕೆಳಮನೆ. ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಈವರೆಗೆ ಆಯ್ಕೆಯಾಗಿರುವ ಹದಿನಾರು ಮಂದಿ ಪೈಕಿ ಕೆಲವರು ಮೂರು ಮನೆ, ಕೆಲವರು ಎರಡು ಮನೆ, ಕೆಲವರು ಒಂದೇ ಮನೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಕೆಲವರು ನೇರವಾಗಿ ಲೋಕಸಭೆಗೆ ಹೋದರೆ ಮತ್ತೆ ಕೆಲವರು ಅಲ್ಲಿಂದ ವಿಧಾನಸಭೆ, ವಿಧಾನ ಪರಿಷತ್ಗೆ ಬಂದಿದ್ದಾರೆ. ಮತ್ತೆ ಕೆಲವರು ವಿಧಾನಸಭೆಯಿಂದ ಲೋಕಸಭೆಗೆ ಹೋಗಿದ್ದಾರೆ. ಕೆಲವರು ನಂತರ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಮೂರು ಮನೆ: ಎನ್. ರಾಚಯ್ಯ ಅವರು ಮೈಸೂರಿನಿಂದ ಒಮ್ಮೆ ಲೋಕಸಭೆ, ಹುಣಸೂರಿನಿಂದ ಒಮ್ಮೆ ವಿಧಾನಸಭೆ, ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು. ಡಿ. ದೇವರಾಜ ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು.

ಎಂ. ರಾಜಶೇಖರಮೂರ್ತಿ ಅವರು ಆರು ಬಾರಿ ವಿಧಾನಸಭೆಗೆ, ಒಮ್ಮೆ ಲೋಕಸಭೆಗೆ, ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಜ್ಯ ಹಾಗೂ ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

ಸಿ.ಎಚ್. ವಿಜಯಶಂಕರ್ ಅವರು ಒಂದು ಸಲ ವಿಧಾನಸಭೆ, ಎರಡು ಸಲ ಲೋಕಸಭೆ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ರಾಜ್ಯದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.

ಎಚ್. ವಿಶ್ವನಾಥ್ ಅವರು ನಾಲ್ಕು ಬಾರಿ ವಿಧಾನಸಭೆ, ಒಮ್ಮೆ ಲೋಕಸಭೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ವಿಧಾನ ಪರಿಷತ್ ಸದಸ್ಯರು.

ಎರಡು ಮನೆ:

ಎಂ.ಎಸ್. ಗುರುಪಾದಸ್ವಾಮಿ ಅವರು ಒಮ್ಮೆ ಲೋಕಸಭೆ ಹಾಗೂ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಕೇಂದ್ರದಲ್ಲಿ ಇಂದಿರಾಗಾಂಧಿ, ವಿ.ಪಿ. ಸಿಂಗ್ ಸರ್ಕಾರದಲ್ಲಿ ಮಂತ್ರಿ, ರಾಜ್ಯಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದರು.

ಎಂ. ಶಂಕರಯ್ಯ ಅವರು ಮೈಸೂರಿನಿಂದ ಎರಡು ಬಾರಿ ಲೋಕಸಭೆ ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಬಿ. ರಾಚಯ್ಯ ಅವರು ಆರು ಬಾರಿ ವಿಧಾನಸಭೆ, ಒಂದು ಬಾರಿ ಚಾಮರಾಜನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಜ್ಯ ಹಾಗೂ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ವಿ. ಶ್ರೀನಿವಾಸಪ್ರಸಾದ್ ಅವರು ಚಾಮರಾಜನಗರದಿಂದ ಆರು ಬಾರಿ ಲೋಕಸಭೆ, ನಂಜನಗೂಡಿನಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿದ್ದರು.

ಚಂದ್ರಪ್ರಭಾ ಅವರು ಹುಣಸೂರಿನಿಂದ ಎರಡು ಬಾರಿ ವಿಧಾನಸಭೆ, ಮೈಸೂರಿನಿಂದ ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆರ್. ಧ್ರುವನಾರಾಯಣ ಅವರು ಸಂತೇಮರಹಳ್ಳಿ ಹಾಗೂ ಕೊಳ್ಳೇಗಾಲದಿಂದ ಒಟ್ಟು ಎರಡು ಬಾರಿ ವಿಧಾನಸಭೆ, ಚಾಮರಾಜನಗರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಒಂದೇ ಮನೆ:

ಎಸ್.ಎಂ. ಸಿದ್ದಯ್ಯ ಅವರು ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಒಮ್ಮೆ, ಚಾಮರಾಜನಗರ ಮೀಸಲು ಕ್ಷೇತ್ರದಿಂದ ಮೂರು ಬಾರಿ ಒಟ್ಟಾರೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ವಿಧಾನಸಭೆಗೆ ಆಯ್ಕೆಯಾಗುವ ಅವರ ಪ್ರಯತ್ನ ಕೈಗೂಡಲಿಲ್ಲ.

ಎಚ್.ಡಿ.ತುಳಸಿದಾಸ್ ಅವರು ಸತತ ಮೂರು ಬಾರಿ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನೇರವಾಗಿ ಲೋಕಸಭೆ ಪ್ರವೇಶಿಸಿದವರು. ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಎ. ಸಿದ್ದರಾಜು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಕಾಗಲವಾಡಿ ಎಂ. ಶಿವಣ್ಣ ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಪ್ರತಾಪ್ ಸಿಂಹ ನೇರವಾಗಿ ಲೋಕಸಭೆ ಪ್ರವೇಶಿಸಿದವರು. ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.