ನರಗುಂದ ತಾಲೂಕಿನ ರಡ್ಡೇರನಾಗನೂರ ಯೋಧ ಹೃದಯಾಘಾತದಿಂದ ಸಾವು

| Published : Feb 07 2024, 01:49 AM IST

ಸಾರಾಂಶ

ಚಂಢೀಗಡದ ಐಟಿಬಿಪಿಯಲ್ಲಿ (ಇಂಡೋ ಟಿಬೇಟಿಯನ್‌ ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌) ಕರ್ತವ್ಯದಲ್ಲಿದ್ದ ತಾಲೂಕಿನ ರಡ್ಡೇರನಾಗನೂರಿನ ಯೋಧ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ನರಗುಂದ: ಚಂಢೀಗಡದ ಐಟಿಬಿಪಿಯಲ್ಲಿ (ಇಂಡೋ ಟಿಬೇಟಿಯನ್‌ ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌) ಕರ್ತವ್ಯದಲ್ಲಿದ್ದ ತಾಲೂಕಿನ ರಡ್ಡೇರನಾಗನೂರಿನ ಯೋಧ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಮೃತನನ್ನು ರಾಮನಗೌಡ ಚಂದ್ರಗೌಡ ಕರಬಸನಗೌಡ್ರ ಎಂದು ಗುರುತಿಸಲಾಗಿದೆ. ಆಸ್ಸಾಂ ಮತ್ತು ಸಿಕ್ಕಿಂ ನಡುವಿನ ಬಾಂಗ ಡೊಂಗ್ಸ ಎಂಬಲ್ಲಿ ಹಿಮಪಾತದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಾಗ ರಕ್ತದೊತ್ತಡದಲ್ಲಿ ಏರುಪೇರಾಗಿ ಫೆ. 4ರಂದು ಹೃದಯಾಘಾತವಾಗಿದೆ. ತಕ್ಷಣವೇ ಸಹದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಭಾನುವಾರ ಮೃತಪಟ್ಟಿದ್ದಾನೆ.

ಮೃತ ಯೋಧನಿಗೆ ಪತ್ನಿ, ಓರ್ವ ಪುತ್ರ, ಅಣ್ಣ, ಅಕ್ಕ ಇದ್ದಾರೆ. 2006ರಲ್ಲಿ ಜಯಶ್ರೀ ಎಂಬುವರ ಜತೆ ಅವರು ವಿವಾಹವಾಗಿದ್ದರು. 17 ವರ್ಷದ ಪುತ್ರನಿದ್ದು, (ನಿಂಗನಗೌಡ) ಪಿಯುಸಿ ಮೊದಲನೆ ವರ್ಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಉತ್ತರಖಂಡದ ಜೋಶಿಮಠ, ಆಸ್ಸಾಂ, ಸಿಕ್ಕಿಂ, ಮಿಜೋರಾಂ, ಚಂಢೀಗಡ ಸೇರಿ ದೇಶದ ವಿವಿಧೆಡೆ 22 ವರ್ಷ ಸೇವೆ ಸಲ್ಲಿಸಿರುವ ರಾಮನಗೌಡ ಈ ವರ್ಷ ಏಪ್ರಿಲ್‌ನಲ್ಲಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳುವ ಇರಾದೆ ಹೊಂದಿದ್ದರು. ಫೆ. 7ರಂದು ಪ್ರಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಅಂದೇ ಯೋಧನ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಾಲೂಕಾಡಳಿತ ತಿಳಿಸಿದೆ. ತಹಸೀಲ್ದಾರ್‌ ಶ್ರೀಶೈಲ ತಳವಾರ ಅವರು ಮೃತ ಯೋಧನ ಮನೆಗೆ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದರು.

ಗ್ರಾಪಂ ಆವರಣದಲ್ಲಿ ಅಂತ್ಯಕ್ರಿಯೆ ಮಾಡುವ ಜಾಗೆಯನ್ನು ಪರಿಶೀಲನೆ ಮಾಡಲಾಗಿದೆ. ಬುಧವಾರ ಬೆಳಗಿನ ಜಾವ 3 ಗಂಟೆಗೆ ಯೋಧನ ಪ್ರಾರ್ಥಿವ ಶರೀರ ಗ್ರಾಮಕ್ಕೆ ಬರಲಿದೆ. ಆನಂತರ ಗ್ರಾಮದ ಆವರಣದಲ್ಲಿ ಯೋಧನ ಪ್ರಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ನಂತರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಹಸೀಲ್ದಾರ್‌ ಕನ್ನಡಪ್ರಭಕ್ಕೆ ತಿಳಿಸಿದರು.