ಸಾರಾಂಶ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಸಂಜೆ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ ದಾಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಲ್ಲಿನ ಭಿನ್ನಮತ ಶಮನ ಕುರಿತು ಮಾತುಕತೆ ನಡೆಸಲಾಯಿತು.
ನಾಗರಾಜ ಎಸ್.ಬಡದಾಳ್
ಕನ್ನಡಪ್ರಭ ವಾರ್ತೆ ದಾವಣಗೆರೆಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಸಂಜೆ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ ದಾಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಲ್ಲಿನ ಭಿನ್ನಮತ ಶಮನ ಕುರಿತು ಮಾತುಕತೆ ನಡೆಸಲಾಯಿತು.
ಮಾಜಿ ಕೇಂದ್ರ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದ ಗುಂಪು, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯರ ಬಣಗಳ ಜೊತೆ ಪ್ರತ್ಯೇಕವಾಗಿ ತಲಾ ಒಂದೊಂದು ಗಂಟೆ ಮಾತುಕತೆ ನಡೆಸಿದ ದಾಸ್, ಎರಡೂ ಕಡೆಯವರ ಅಹವಾಲು ಆಲಿಸಿದರು. ನಂತರ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅವರನ್ನು ಪ್ರತ್ಯೇಕವಾಗಿ ಕರೆಸಿ, ಕೆಲವೊಂದು ಸೂಚನೆ ನೀಡಿದ್ದಾರೆ. ಇನ್ನು 5-6 ದಿನದಲ್ಲೇ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ. ಕೋರ್ ಕಮಿಟಿ ಸಭೆಯಲ್ಲಿ ಆದ ಚರ್ಚೆ, ಬೆಳವಣಿಗೆಗಳ ಬಗ್ಗೆ ವರದಿ ಕೊಡಿ ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದವರೊಂದಿಗಿನ ಒಡನಾಟ ನಮ್ಮ ಸೋಲಿಗೆ ಕಾರಣವಾಯಿತು ಎಂಬುದಾಗಿ ಎರಡೂ ಗುಂಪುಗಳು ಪರಸ್ಪರರ ಮೇಲೆ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ದಾವಣಗೆರೆಯಲ್ಲಿ ಶನಿವಾರ ನಡೆದ ಆರೆಸ್ಸೆಸ್‌ನ ಶತಮಾನೋತ್ಸವದ ಪಥ ಸಂಚಲನದ ವೇಳೆ ಹೈಸ್ಕೂಲ್ ಮೈದಾನದಲ್ಲಿ ಎರಡೂ ಗುಂಪಿನ ಬಹುತೇಕ ನಾಯಕರು ಭಾಗವಹಿಸಿದ್ದರು. ಅದನ್ನು ಕಂಡ ಪಕ್ಷದ ಕಾರ್ಯಕರ್ತರ ಮನದಲ್ಲೂ ದೀಪಾವಳಿ ಹಬ್ಬದ ವೇಳೆಗೆ ಎಲ್ಲವೂ ಸರಿ ಆಗಬಹುದೆಂಬ ನಿರೀಕ್ಷೆ ಚಿಗುರೊಡೆದಿದೆ.