ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟದಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ಬಮೂಲ್‌ನಲ್ಲಿ ಕೆಲಸ ನೀಡುವಾಗ ಹಾಲು ಉತ್ಪಾದಕರ ಮಕ್ಕಳಿಗೆ ಶೇ.೨೫ ಮೀಸಲಾತಿ ಕಲ್ಪಿಸಲಾಗುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟದಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ಬಮೂಲ್‌ನಲ್ಲಿ ಕೆಲಸ ನೀಡುವಾಗ ಹಾಲು ಉತ್ಪಾದಕರ ಮಕ್ಕಳಿಗೆ ಶೇ.೨೫ ಮೀಸಲಾತಿ ಕಲ್ಪಿಸಲಾಗುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ತಾಲೂಕಿನ ಬೈರಾಪಟ್ಟಣ ಬಳಿಯ ಬಮೂಲ್ ಶಿಬಿರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಚೆಕ್ ವಿತರಿಸಿ ಮಾತನಾಡಿದ ಅವರು, ಅದೇ ರೀತಿ ಬಮೂಲ್ ಸಿಬ್ಬಂದಿಯ ಮಕ್ಕಳಿಗೂ ಶೇ.೧೦ ಮೀಸಲಾತಿ ನೀಡಲಾಗುವುದು. ನಾನು ಅಧಿಕಾರ ವಹಿಸಿಕೊಂಡಾಗ ೧೪ ಕೋಟಿ ನಷ್ಟದಲ್ಲಿದ್ದ ಸಂಸ್ಥೆ ಇಂದು ೭೧ ಕೋಟಿ ಲಾಭ ಗಳಿಸಿದೆ. ಅದರಲ್ಲಿ ರೈತರಿಗೆ ಪ್ರೋತ್ಸಾಹ ಧನ ವಿತರಿಸಲಾಗಿದೆ. ಬಮೂಲ್ ಕಲ್ಯಾಣ ಟ್ರಸ್ಟ್‌ನಲ್ಲಿ ಕೆಲವು ಯೋಜನೆಗಳನ್ನು ರಚಿಸಲಾಗಿದೆ. ಅತಿ ಹೆಚ್ಚು ಅಂಕಗಳಿಸಿದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಖಾಸಗಿ ಪೈಪೋಟಿ: ಬಮೂಲ್ ರೈತರ ಸಂಸ್ಥೆ. ಒಂದು ಕಡೆ ರೈತರು ಒಂದು ಕಡೆ ಗ್ರಾಹಕರು, ಇಬ್ಬರ ಹಿತ ಕಾಯಬೇಕು. ಬಮೂಲ್‌ನಿಂದ ನಿತ್ಯ ೧೭ ಲಕ್ಷ ಲೀಟರ್‌ ಹಾಲು ಪೂರೈಸುತ್ತಿದ್ದು, ಮುಂದೆ ೨೦ ಲಕ್ಷ ಲೀಟರ್ ತಲುಪುವ ಗುರಿ ಇದೆ. ಸಂಸ್ಥೆ ಬೆಳೆಸಲು ಹಾಗು ಖಾಸಗಿಯವರಿಗೆ ಪೈಪೋಟಿ ನೀಡಲು ಗುಣಮಟ್ಟ ಕಾಪಾಡಬೇಕು ಎಂದರು.

ರೀಲ್ಸ್ ಗೀಳು ಬಿಡಿ:

ಪೋಷಕರು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ನೀವು ಚೆನ್ನಾಗಿ ಓದಬೇಕು. ಮಕ್ಕಳು ಪೋಷಕರಿಗೆ ಸಹಾಯಕರಾಗಿ ನಿಲ್ಲಬೇಕು. ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಮಕ್ಕಳು ರೀಲ್ಸ್ ನೋಡುವ ಮಾಡುವ ಗೀಳು ಬಿಟ್ಟು ಉತ್ತಮ ಚಿಂತನೆ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಾಸಕ ಯೋಗೇಶ್ವರ್ ಮಾತನಾಡಿ, ಸುರೇಶ್ ಬಮೂಲ್ ಅಧ್ಯಕ್ಷರಾದ ಬಳಿಕ ಕ್ರಾಂತಿಕಾರಿ ಬದಲಾವಣೆ ಆಗಿದೆ. ಅವರು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲೇ ಹೆಚ್ಚು ಹಾಲು ಪೂರೈಸುವ ತಾಲೂಕು ನಮ್ಮದು. ರೈತರಿಗೆ ಪೂರಕ ಕೆಲಸಗಳನ್ನು ಬಮೂಲ್ ಮಾಡುತ್ತಿದೆ. ಫೀಡ್ಸ್ ಗುಣಮಟ್ಡವನ್ನು ಸರಿಪಡಿಸಲು ತಾಲೂಕಿನಲ್ಲೇ ಫೀಡ್ಸ್ ಕಾರ್ಖಾನೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಮಾತನಾಡಿ, ನಮ್ಮ ಒಕ್ಕೂಟಕ್ಕೆ ಡಿ.ಕೆ. ಸುರೇಶ್ ಅಧ್ಯಕ್ಷರಾದ ಮೇಲೆ ಸಮಸ್ಯೆ ಕಡಿಮೆ ಅಗಿದೆ. ತಾಲೂಕಿನ ರೈತರಿಗೆ ೧೦ ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ. ಹಾಲು ಸಂಗ್ರಹ ಸೇರಿದಂತೆ ಎಲ್ಲವನ್ನು ಆನ್‌ಲೈನ್ ಮಾಡಲಾಗಿದೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾದರೆ, ಇನ್ನಷ್ಟು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಮೂಲ್ ಉಪಾಧ್ಯಕ್ಷ ರಾಜಣ್ಣ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್, ಹಾಪ್‌ಕಾಮ್ಸ್ ನಿರ್ದೇಶಕ ಪ್ರದೀಪ್ ಕುಮಾರ್, ನಗರಸಭೆ ಅಧ್ಯಕ್ಷ ನಾಗೇಶ್, ನಗರಸಭೆ ಮಾಜಿ ಅಧ್ಯಕ್ಷ ವಾಸೀಲ್ ಅಲಿಕಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಇತರರಿದ್ದರು.

(ಲೀಡ್‌ ಬಾಕ್ಸ್‌)

ಬಿಜೆಪಿಯಿಂದ ರಾಜ್ಯಪಾಲರ ಕಚೇರಿ ದುರ್ಬಳಕೆ

ಚನ್ನಪಟ್ಟಣ: ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆ ಮಾಡಲಿಕ್ಕೆ ಸಾಂವಿಧಾನಿಕ ಅವಕಾಶ ಇದೆ. ಟಿವಿಕೆ ಶಾಸಕರ ಬಲವೂ ಹೆಚ್ಚಾಗಿಯೇ ಇದೆ. ಆದರೂ ವಿಳಂಬ ಮಾಡುತ್ತಿರೋ ರಾಜ್ಯಪಾಲರ ನಡೆ ಮೇಲೆ ಅನುಮಾನ ಬರುತ್ತಿದ್ದು, ಇದರ ಹಿಂದೆ ಬಿಜೆಪಿಯ ಕೇಂದ್ರ ಸರ್ಕಾರ ಇದ್ದು, ರಾಜ್ಯಪಾಲರ ಮೂಲಕ ಬೆದರಿಕೆ ತಂತ್ರ ಅನುಸರಿಸುತ್ತಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೊದಲು ಐಟಿ, ಇಡಿ ಹಾಗೂ ಸಿಬಿಐ ಬಳಸುತ್ತಿತ್ತು. ಈಗ ರಾಜ್ಯಪಾಲರ ಕಚೇರಿ ಕೂಡಾ ದುರ್ಬಳಕೆ ಆಗುತ್ತಿದೆ. ಬಿಜೆಪಿಯೇತರ ಸರ್ಕಾರ ರಚನೆ ಮಾಡಲಿಕ್ಕೆ ಕೇಂದ್ರ ತೊಂದರೆ ಕೊಡುತ್ತಿದೆ. ಇನ್ನಾದರೂ ಬಿಜೆಪಿ ಸಾಂವಿಧಾನಿಕ ಹುದ್ದೆಗಳ ದುರ್ಬಳಕೆಯನ್ನ ನಿಲ್ಲಿಸಲಿ ಎಂದರು.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಡಿಎಂಕೆ ಬಿಟ್ಟು ಟಿವಿಕೆಗೆ ಬೆಂಬಲ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನಿಲ್ಲ, ನಾವು ಅಲ್ಲಿಯ ನಾಯಕರ ಗಮನಕ್ಕೆ ತಂದಮೇಲೆ ನಮ್ಮ ಪಕ್ಷ ಈ ತೀರ್ಮಾನ ತೆಗೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ರಚನೆಗೆ ಬೆಂಬಲ ಕೊಡೋದು ಸಾಮಾನ್ಯ. ಡಿಎಂಕೆ ಕೂಡ ನಾವು ಸೈಲೆಂಟ್ ಆಗಿ ಇರ್ತೀವಿ ಅನ್ನೋದನ್ನ ಸ್ಪಷ್ಟಪಡಿಸಿದೆ. ಹಾಗಾಗಿ ಏನಾಗುತ್ತೋ ಕಾದು ನೋಡೋಣ ಎಂದರು.

ಪಶ್ಚಿಮ ಬಂಗಾಳದ ಮಾಜಿ ಸಿಎಂ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಶ್ಚಿಮ ಬಂಗಾಳದಲ್ಲಿ ಹಣಬಲ, ತೋಳ್ಬಲ ಪ್ರದರ್ಶನ ಆಗಿದೆ. ಕಳೆದ ಒಂದು ವರ್ಷದಿಂದ ಅಲ್ಲಿಯ ಸರ್ಕಾರ ತೆಗೆಯಲು ಬಿಜೆಪಿ ಪ್ರಯತ್ನ ಮಾಡಿದೆ. ಸುಮಾರು ೯೭ ಲಕ್ಷ ಮತದಾರರನ್ನ ಹೊರ ಹಾಕಿದ್ದಾರೆ. ಬಿಜೆಪಿ ವ್ಯವಸ್ಥಿತ ರಾಜಕೀಯ ಪಿತ್ತೂರಿ ಮಾಡಿ ಟಿಎಂಸಿಗೆ ಹಿನ್ನಡೆ ಆಗಿದೆ ಎಂದರು.

ಪೊಟೋ೨೬ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಬಳಿಯ ಬಮೂಲ್ ಶಿಬಿರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.