ವೀರ ಬಲ್ಲಾಳರಾಯನ ಕೆರೆಯಲ್ಲಿ ತೆಪ್ಪೋತ್ಸವ

| Published : Nov 17 2025, 02:15 AM IST

ಸಾರಾಂಶ

ತಾಲೂಕಿನಲ್ಲಿಯೇ ಅತ್ಯಂತ ಬೃಹದಾಕಾರ ಕೆರೆ ಎಂದು ಹೆಸರಾಗಿರುವ ವೀರ ಬಲ್ಲಾಳರಾಯ ನಿರ್ಮಿಸಿದ್ದು ಎನ್ನಲಾದ ಶ್ರೀರಾಂಪುರ ಹೋಬಳಿಯ ಬಲ್ಲಾಳ ಸಮುದ್ರದ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಲ್ಲಾಳ ಸಮುದ್ರ ಗ್ರಾಮದ ಭಕ್ತರೆಲ್ಲ ಸೇರಿ ಅಕ್ಕಪಕ್ಕದ ಆಲಘಟ್ಟ, ಮತ್ತೂರು, ಮಲ್ಲೇನಹಳ್ಳಿ ಕಲ್ಕೆರೆ, ಮಾರುತಿ ನಗರ, ಗೊಲ್ಲರಹಟ್ಟಿ, ಲಂಬಾಣಿಹಟ್ಟಿ ಈ ಊರಿನ 14 ಗ್ರಾಮ ದೇವತೆಗಳನ್ನು ಬಾಳೆ ದಿಂಡುಗಳಿಂದ ಅಲಕೃತಗೊಂಡ ಮಂಟಪದಲ್ಲಿ ಕೂರಿಸಿ ವೈಭವದ ತೆಪ್ಪೋತ್ಸವ ನೆರವೇರಿಸಿದರು.

ಹೊಸದುರ್ಗ: ತಾಲೂಕಿನಲ್ಲಿಯೇ ಅತ್ಯಂತ ಬೃಹದಾಕಾರ ಕೆರೆ ಎಂದು ಹೆಸರಾಗಿರುವ ವೀರ ಬಲ್ಲಾಳರಾಯ ನಿರ್ಮಿಸಿದ್ದು ಎನ್ನಲಾದ ಶ್ರೀರಾಂಪುರ ಹೋಬಳಿಯ ಬಲ್ಲಾಳ ಸಮುದ್ರದ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಲ್ಲಾಳ ಸಮುದ್ರ ಗ್ರಾಮದ ಭಕ್ತರೆಲ್ಲ ಸೇರಿ ಅಕ್ಕಪಕ್ಕದ ಆಲಘಟ್ಟ, ಮತ್ತೂರು, ಮಲ್ಲೇನಹಳ್ಳಿ ಕಲ್ಕೆರೆ, ಮಾರುತಿ ನಗರ, ಗೊಲ್ಲರಹಟ್ಟಿ, ಲಂಬಾಣಿಹಟ್ಟಿ ಈ ಊರಿನ 14 ಗ್ರಾಮ ದೇವತೆಗಳನ್ನು ಬಾಳೆ ದಿಂಡುಗಳಿಂದ ಅಲಕೃತಗೊಂಡ ಮಂಟಪದಲ್ಲಿ ಕೂರಿಸಿ ವೈಭವದ ತೆಪ್ಪೋತ್ಸವ ನೆರವೇರಿಸಿದರು.

ಈ ಸಂಬಂಧ ಶನಿವಾರ ಸಂಜೆ ಬಲ್ಲಾಳಸಮುದ್ರದ ಶ್ರೀ ಕರಿಯಮ್ಮ ದೇವಿ, ಆಂಕಾಲಾ ಪರಮೇಶ್ವರಿ ಶ್ರೀ ಆಂಜನೇಯ ಸ್ವಾಮಿ ಕೊಲ್ಲಾಪುರದಮ್ಮ, ಕಲ್ಕೆರೆ ಆಂಜನೇಯ ಸ್ವಾಮಿ, ಶ್ರೀರಾಮ ದೇವರು, ಶ್ರೀ ವೆಂಕಟೇಶ್ವರ ಸ್ವಾಮಿ ಯವರನ್ನು ಕೆರೆಯ ಪ್ರಾಂಗಣಕ್ಕೆ ಕರೆತಂದು ರಾತ್ರಿ ಇಡೀ ಹೋಮ ಹವನ ವಿಧಿ- ವಿಧಾನದ ಮೂಲಕ ಪೂಜೆ ನೆರವೇರಿಸಿ ಬೆಳಿಗ್ಗೆ ಗ್ರಾಮದ ಕರಿಯಮ್ಮ ದೇವಿ, ಅಂಕಲಪರಮೇಶ್ವರಿ, ಕೊಲ್ಲಾಪುರದಮ್ಮ ದೇವರುಗಳಿಗೆ ಪೂಜೆ ನೈವೇದ್ಯ ಮಂಗಳಾರತಿ ಮಾಡಿ ನಂತರ ಗಂಗಾದೀಪ ನೈವೇದ್ಯ ಎಡೆಯೊಂದಿಗೆ ಸೇರಿದಂತೆ ತೆಪ್ಪದಲ್ಲಿ ಕೂರಿಸಿ ಕೆರೆಯಲ್ಲಿ ಪ್ರದಕ್ಷಿಣೆ ಮಾಡಿಸಲಾಯಿತು.

ವಿಜಯನಗರ ಸಾಮಂತ ದೊರೆ ಬಲ್ಲಾಳರಾಯ ಈ ಪ್ರಾಂತ್ಯವನ್ನು ಆಳ್ವಿಕೆ ನಡೆಸುತ್ತಿರುವಾಗ ಇಲ್ಲಿಯ ಜನರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕೆರೆಯ ಕೆಳಭಾಗದಲ್ಲಿರುವ ಜಮೀನುಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಿ ಭತ್ತವನ್ನು ಬೆಳೆದು ರೈತರ ಆರ್ಥಿಕ ಸುಧಾರಣೆಗೆ ಕಾರಣರಾಗಿದ್ದರು. ವೀರ ಬಲ್ಲಾಳ ರಾಯರು ಕಟ್ಟಿಸಿದ ಕೆರೆಗೆ ಯಾವುದೇ ವಿಜ್ಞ ಬಾರದೆಂದು ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳ ಮೂಲಕ ಪೂಜೆ ನಡೆಸಿದ್ದೇವೆ ಎಂದು ಗ್ರಾಮಸ್ಥರಾದ ತಾರನಾಥ್ ರಮೇಶ್ ಬಾಬು, ಲಕ್ಷ್ಮಿಪತಿ ನಾಯ್ಡು, ರಂಗಸ್ವಾಮಿ ನಾಯ್ಡು, ಸೀತಾರಾಮು, ನಾರಾಯಣಸ್ವಾಮಿ, ಹರೀಶ್ ಬಾಬು, ಹಾಗೂ ಗ್ರಾಮಸ್ಥರು ವಿವರಿಸಿದರು.

ಈ ವೇಳೆ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಸುತ್ತಮುತ್ತ ಗ್ರಾಮಸ್ಥರು ಭಾಗವಹಿಸದ್ದರು.

ಭಾಗೀರಥಿ ಆತ್ಮ ಶಾಂತಿಗೆ

ಗಂಗಾರತಿ: ಜ್ಯೋತಿಶ್ ಚೌದರಿ

ಬಲ್ಲಾಳ ರಾಯರು ನಿರ್ಮಿಸಿದ ಬಲ್ಲಾಳಸಮುದ್ರ ಕೆರೆ ಒಮ್ಮೆ ಪೂರ್ಣ ಪ್ರಮಾಣದಲ್ಲಿ ತುಂಬಿ ಕೆರೆ ಮಧ್ಯ ಭಾಗದಲ್ಲಿ ಹೊಡೆದು ನೀರು ಹರಿದು ಪ್ರವಾಹವನ್ನೇ ಸೃಷ್ಟಿ ಮಾಡಿತ್ತು. ನೀರು ನಿಲ್ಲಬೇಕೆಂದರೆ ಕೆರೆಗೆ ಕನ್ಯೆಯನ್ನು ಆಹುತಿಯನ್ನು ನೀಡಬೇಕೆಂದು ಎರಡನೇ ವೀರ ಬಲ್ಲಾಳರಾಯನ ಕನಸಿನಲ್ಲಿ ಬಂದು ಗಂಗಾಮಾತೆ ಕೇಳಿದ್ದಳಂತೆ, ಆಗ ಗ್ರಾಮದ ಯಾರು ಕೆರೆಗೆ ಆಹುತಿಯಾಗಲು ಒಪ್ಪದ ಕಾರಣ ಅಂದಿನ ರಾಜ ವೀರ ಬಲ್ಲಾಳರಾಯರ ಮಗಳು ಭಾಗೀರಥಿ ತಾನೇ ಆಹುತಿಯಾಗಲು ಒಪ್ಪಿ ಕೆರೆಯ ಏರಿಯ ಬಳಿ ಬನ್ನಿ ಪೂಜೆ ಮಾಡುತ್ತಿರುವಾಗ ಅಲ್ಲಿರುವ ಜನರೆಲ್ಲ ಆಕೆಯ ಮೇಲೆ ಮಣ್ಣನ್ನು ಹಾಕಿದರು ನಂತರ ಅವರು ಕೆರೆಗೆ ಆಹುತಿಯಾದರು. ಭಾಗೀರಥಿ ಆಹುತಿ ನಂತರ ಕೆರೆ ಮತ್ತೆ ಒಡೆಯದೆ ನೀರು ನಿಂತಿತು, ಭಾಗಿರಥಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೆರೆ ತುಂಬಿದಾಗ ಗಂಗಾರತಿ ಪ್ರಸಾದವನ್ನು ಕೆರೆಗೆ ಬಿಡುವ ಪದ್ಧತಿ ಇದೆ ಎಂದು ಬಲ್ಲಾಳಸಮುದ್ರ ಗ್ರಾಮಸ್ಥ ಜ್ಯೋತಿಶ್ ಚೌದರಿ ತಿಳಿಸಿದರು.