ನಿಷೇಧವಿದ್ದರೂ ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಸಂಚಾರ

| Published : Jul 30 2025, 12:47 AM IST

ಸಾರಾಂಶ

ಕಳೆದ ಎರಡ್ಮೂರು ದಿನಗಳಿಂದ ನದಿ ನೀರಿನ ಮಟ್ಟ ಏರುಗತಿಯಲ್ಲಿದ್ದರೂ ತೆಪ್ಪಗಳ ಮಾಲೀಕರು ಅದನ್ನು ಲೆಕ್ಕಿಸದೆ, ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ದುಡ್ಡಿನ ಆಸೆಗಾಗಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇದನ್ನು ತಡೆಯಬೇಕಾದ ಸ್ಥಳೀಯ ಅಧಿಕಾರಿಗಳು ಸಹ ಕಣ್ಮುಚ್ಚಿ ಕುಳಿತಿದ್ದಾರೆ.

ಗಂಗಾವತಿ:

ತುಂಗಭದ್ರಾ ಜಲಾಶಯದಿಂದ ನದಿಗೆ 1.30 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿದ್ದು ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ತೆಪ್ಪ, ಬೋಟಿಂಗ್‌ ನಡೆಸುವುದು, ಮೀನು ಹಿಡಿಯುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೂ ಸಹ ನಿಷೇಧ ಉಲ್ಲಂಘಿಸಿ ನದಿಯಲ್ಲಿ ತೆಪ್ಪಗಳ ಸಂಚಾರ ಶುರುವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಕಳೆದ ಎರಡ್ಮೂರು ದಿನಗಳಿಂದ ನದಿ ನೀರಿನ ಮಟ್ಟ ಏರುಗತಿಯಲ್ಲಿದ್ದರೂ ತೆಪ್ಪಗಳ ಮಾಲೀಕರು ಅದನ್ನು ಲೆಕ್ಕಿಸದೆ, ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ದುಡ್ಡಿನ ಆಸೆಗಾಗಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇದನ್ನು ತಡೆಯಬೇಕಾದ ಸ್ಥಳೀಯ ಅಧಿಕಾರಿಗಳು ಸಹ ಕಣ್ಮುಚ್ಚಿ ಕುಳಿತಿದ್ದಾರೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಅಧಿಕ ಹಣ ವಸೂಲಿ:ಪ್ರವಾಸಿಗರ ಹುಚ್ಚಾವೂ ಮುಂದುವರಿದ್ದು ನದಿ ಅಪಾಯದ ಮಟ್ಟದಲ್ಲಿ ಇದ್ದರೂ ತೆಪ್ಪದಲ್ಲಿ ಸಂಚರಿಸಲು ಮುಗಿಬೀಳುತ್ತಿದ್ದಾರೆ. ತಮ್ಮ ಪ್ರಾಣಕ್ಕೆ ಕಂಟಕವಾಗುತ್ತದೆ ಎಂಬ ಅರಿವು ಇದ್ದರೂ ಸಹ ಅದನ್ನು ಲೆಕ್ಕಸದೆ ತಾ ಮುಂದು ನಾ ಮುಂದು ಎಂದು ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ತೆಪ್ಪದ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ನದಿಯಲ್ಲಿ ತೆಪ್ಪ ಹಾಕಲು ನಿಷೇಧವಿದೆ. ಒಂದು ವೇಳೆ ಅಧಿಕಾರಿಗಳು ಬಂದು ದಂಡ ವಿಧಿಸಿ ತೆಪ್ಪ ವಶಕ್ಕೆ ಪಡಿದರೆ ಸಾಕಷ್ಟು ನಷ್ಟವಾಗಲಿದೆ. ಹೀಗಾಗಿ ನೀವು ಇಂತಿಷ್ಟು ಹಣ ನೀಡಿದರೆ ಮಾತ್ರ ಕರೆದುಕೊಂಡು ಹೋಗುತ್ತೇವೆಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ. ವಿವಿಧೆಡೆಯಿಂದ ಆಗಮಿಸಿದ ಪ್ರವಾಸಿಗರು ಸಹ ತಮ್ಮ ಜೀವದ ಹಂಗು ತೊರೆದು ಮೋಜಿನಲ್ಲಿ ಮುಳುಗಿದ್ದಾರೆ.

ಎಲ್ಲಿ ನಿಯಮ ಉಲ್ಲಂಘನೆ:

ಸಾಣಾಪುರದ ಸಮಾಂನತರ ಜಲಾಶಯ, ಪ್ರವಾಸಿ ಮಂದಿರ, ಹನುಮನಹಳ್ಳಿ, ಋಷ್ಯಮುಖ ಪರ್ವತ, ಕಡೆಬಾಗಿಲಿನ ಜಾಲಿ ಬಳಿ ತೆಪ್ಪಗಳನ್ನು ಹಾಕುವುದು ಅವ್ಯಾಹತವಾಗಿ ನಡೆದಿದೆ. ಈ ಹಿಂದೆ ನಿಷೇಧವಿದ್ದಾ ತೆಪ್ಪ ನಡೆಸಿದ ಪರಿಣಾಮ ಹಲವು ಅವಘಡಗಳು ಸಹ ಸಂಭವಿಸಿವೆ. ಆದರೂ ಪ್ರವಾಸಿಗರು, ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.

ಬಂದೋಬಸ್ತ್‌ ಒದಗಿಸಿ:

ನದಿಯಲ್ಲಿ ತೆಪ್ಪ, ಬೋಟಿಂಗ್‌ ನಿಷೇಧಿಸಲಾಗಿದೆ ಎಂದು ಬ್ಯಾನರ್‌ ಅಳವಡಿಸಿ ತೆಪ್ಪದ ಮಾಲೀಕರಿಗೆ ಸೂಚಿಸಿದರೇ ಸಾಲದು. ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ಬಂದಾಗ ನದಿಯಲ್ಲಿ ತೆಪ್ಪ ಹಾಕದಂತೆ ಮಾಲೀಕರಿಗೆ ಹೇಳಿ ಹೋಗುತ್ತಾರೆ. ಬಳಿಕ ಹಣದಾಸೆಗೆ ಅವರು ತೆಪ್ಪ ಹಾಕುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.ತುಂಗಭದ್ರಾ ನದಿಯಲ್ಲಿ ಪ್ರವಾಸಿಗರಿಗೆ ತೆಪ್ಪ ಹಾಕಿದ್ದಾರೆಂಬ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ತೆಪ್ಪದ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಕೆಲವು ತೆಪ್ಪಗಳನ್ನು ಜಪ್ತಿ ಮಾಡಲಾಗಿದೆ. ಒಂದು ವೇಳೆ ಪುನಃ ತೆಪ್ಪಗಳ ಸಂಚಾರ ನಡೆಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಹಸೀಲ್ದಾರ್‌ ರವಿ ಅಂಗಡಿ ಹೇಳಿದರು.