ನನ್ನ ಬಗ್ಗೆ ಮಾತನಾಡಲು ರಘುಪತಿ ಭಟ್‌ಗೆ ಏನೂ ವಿಚಾರ ಇಲ್ಲ: ಸರ್ಜಿ

| Published : May 29 2024, 12:48 AM IST

ನನ್ನ ಬಗ್ಗೆ ಮಾತನಾಡಲು ರಘುಪತಿ ಭಟ್‌ಗೆ ಏನೂ ವಿಚಾರ ಇಲ್ಲ: ಸರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ನೈಋತ್ಯ ಪದವಿಧರರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ ನನ್ನ ಕುರಿತು ಟೀಕಿಸಲು ಬೇರೆ ಏನು ವಿಚಾರ ಇಲ್ಲ. ಉಡುಪಿಯ ಮನೆಗೆ ಹೋದಾಗ ಕೂಡ ಸೌಜನ್ಯಕ್ಕೂ ಮನೆಯ ಒಳೆಗೆ ಕರೆದಿಲ್ಲ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಧನಂಜಯ ಸರ್ಜಿ ಮಂಗಳವಾರ ಮಡಿಕೇರಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನನ್ನ ಬಗ್ಗೆ ಮಾತನಾಡಲು ನೈಋತ್ಯ ಪದವಿಧರರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ ಬೇರೆ ಏನು ವಿಚಾರ ಇಲ್ಲ. ಉಡುಪಿಯ ಮನೆಗೆ ಹೋದಾಗ ಕೂಡ ಸೌಜನ್ಯಕ್ಕೂ ಮನೆಯ ಒಳೆಗೆ ಕರೆದಿಲ್ಲ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಧನಂಜಯ ಸರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.ವಿಧಾನ ಪರಿಷತ್ ಚುನಾವಣಾ ಸಂಬಂಧ ಮಡಿಕೇರಿಗೆ ಆಗಮಿಸಿದ ಧನಂಜಯ್ ಸರ್ಜಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು.

ಸಂಘ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ರಘುಪತಿ ಭಟ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಧನಂಜ್ ಸರ್ಜಿ, ಕಾಂಗ್ರೆಸ್‌ನಿಂದ ಟಿಕೆಟ್ ನೀಡುತ್ತೇವೆ ಅಂತ ಬಹಳ ಒತ್ತಡ ಇತ್ತು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದಕ್ಕೂ ಮಣಿಯದೆ ಬಿಜೆಪಿಯಲ್ಲಿ ಇದ್ದೇನೆ. ನನ್ನ ಬಗ್ಗೆ ಹೇಳಲು ಬೇರೆ ಏನು ಇಲ್ಲ, ಹೀಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಘುಪತಿ ಭಟ್‌ಗೆ ಟಾಂಗ್ ನೀಡಿದರು.

ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ ಎಂಬ ಭಟ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತರ ಬಲದಿಂದ ನಿಂತಿದೆ. ಬಿಜೆಪಿಗೆ ನಾನು ಹೊಸಬನಲ್ಲ. ೧೦ನೇ ವಯಸಿನಿಂದಲೇ ಸ್ವಯಂ ಸೇವಕನಾಗಿದ್ದು, ಜೀವ ಇರುವ ತನಕ ನಾನು ಸ್ವಯಂ ಸೇವಕನಾಗಿಯೇ ಇರುತ್ತೇನೆ ಎಂದು ತಿರುಗೇಟು ನೀಡಿದರು. ಬಿಜೆಪಿಗೆ ಇರುವುದು ಒಬ್ಬರೆ ಅಭ್ಯರ್ಥಿ. ಸೂಕ್ತ ಅಭ್ಯರ್ಥಿಯನ್ನು ಸಂಘಟನೆಯ ಹಿರಿಯರು ಸೂಚಿಸಿದ್ದಾರೆ. ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ದುಡಿದ ಒಳ್ಳೆಯ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ರಘುಪತಿ ಭಟ್‌ಗೆ ಮೂರು ಬಾರಿ ಎಂ.ಎಲ್.ಎ. ಸೀಟ್ ಕೊಟ್ಟಿರೋದು ಬಿಜೆಪಿ ಎಂಬುದು ಗೊತ್ತಿದೆಯಾ ಎಂದು ಪ್ರಶ್ನಿಸಿದರು.

ಪಕ್ಷದಲ್ಲಿ ಹಿರಿಯರ ತೀರ್ಮಾನ ಅಂತಿಮ. ಅದರಂತೆ ಚುನಾಚಣಾ ಕೆಲಸ ನಡೆಯುತ್ತೆ ಎಂದು ಧನಂಜಯ್ ಸರ್ಜಿ ಸ್ಪಷ್ಟಪಡಿಸಿದರು. ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಾಲಯಕ್ಕೆ ತೆರಳಿ ಪಕ್ಷ ಪ್ರಮುಖರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಡಿಕೇರಿಯಲ್ಲಿರುವ ಬಿಜೆಪಿ ಕಚೇರಿಗೆ ತೆರಳಿ ತಮ್ಮ ಗೆಲವಿಗೆ ಶ್ರಮಿಸುವಂತೆ ಪಕ್ಷ ಪ್ರಮುಖರಲ್ಲಿ ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ಕಾಳಪ್ಪ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಪಕ್ಷ ಪ್ರಮುಖರಾದ ಡಾ. ಬಿ.ಸಿ ನವೀನ್, ಮಹೇಶ್ ಜೈನಿ ಮತ್ತಿತರರು ಹಾಜರಿದ್ದರು.