ಕನ್ನಡಪ್ರಭ ವಾರ್ತೆ ಮಂಡ್ಯ
ಬಡವರ ಧಾನ್ಯವೆಂದೇ ಖ್ಯಾತಿ ಪಡೆದಿರುವ ರಾಗಿ ಬೆಳೆಯ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ಕೃಷಿ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ. ಅವರ ಸಂಶೋಧನೆ, ಸರಳ ವ್ಯಕ್ತಿತ್ವ, ಮಾನವೀಯತೆ ಹಾಗೂ ರೈತರ ಮೇಲಿನ ಅಪಾರ ಕಾಳಜಿ ಇಂದಿನ ಕೃಷಿ ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ರೈತರಿಗೆ ಶಾಶ್ವತ ಮಾರ್ಗದರ್ಶಿಯಾಗಿವೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಅಭಿಪ್ರಾಯಿಸಿದರು.ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ತಾಲೂಕಿನ ವಿ.ಸಿ.ಫಾರಂನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಗಿ ಲಕ್ಷ್ಮಣಯ್ಯ ಅವರು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ತಮ್ಮ ಪರಿಶ್ರಮ, ಬದ್ಧತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಮೂಲಕ ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ರಾಗಿ ಬೆಳೆಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಅಭಿವೃದ್ಧಿಪಡಿಸಿದ ಇಂಡಾಫ್ ಸರಣಿಯ ತಳಿಗಳು ರಾಗಿ ಸಂಶೋಧನೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. ಹಿಂದೆ ಪ್ರತಿ ಎಕರೆಗೆ ಕೇವಲ ೨ ರಿಂದ ೩ ಕ್ವಿಂಟಲ್ ಉತ್ಪಾದನೆಯಷ್ಟೇ ದೊರೆಯುತ್ತಿದ್ದ ರಾಗಿ ಬೆಳೆಯನ್ನು ೮ ರಿಂದ ೧೨ ಕ್ವಿಂಟಲ್ ಉತ್ಪಾದನೆಯ ಮಟ್ಟಕ್ಕೆ ಏರಿಸುವಲ್ಲಿ ಅವರ ಸಂಶೋಧನೆ ಮಹತ್ವದ ಪಾತ್ರ ವಹಿಸಿದೆ ಎಂದರು.ಭಾರತ ಮತ್ತು ಆಫ್ರಿಕಾದ ರಾಗಿ ತಳಿಗಳ ಸಂಯೋಜನೆಯಿಂದ ಅಭಿವೃದ್ಧಿಪಡಿಸಿದ ಇಂಡಾಫ್ ಸರಣಿಯ ತಳಿಗಳು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರಿಗೆ ಅಪಾರ ಪ್ರಯೋಜನ ತಂದಿದ್ದು, ರಾಗಿ ಬೆಳೆಯ ಅಭಿವೃದ್ಧಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿವೆ. ವಿಶೇಷವಾಗಿ ಅವರ ಬಹುತೇಕ ಸಂಶೋಧನಾ ಕಾರ್ಯಗಳು ಮಂಡ್ಯದ ವಿ.ಸಿ. ಫಾರಂನಲ್ಲಿ ನಡೆದಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯದ ಬೆಳವಣಿಗೆ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಲೆಸ್ಲಿ ಕೋಲ್ಮನ್ ಹಾಗೂ ರಾಗಿ ಲಕ್ಷ್ಮಣಯ್ಯ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಈ ಮೂವರು ಮಹನೀಯರ ದೂರದೃಷ್ಟಿ, ತ್ಯಾಗ ಮತ್ತು ಕಾರ್ಯಚಟುವಟಿಕೆಗಳು ವಿಶ್ವವಿದ್ಯಾಲಯದ ಬೆಳವಣಿಗೆಗೆ ಬಲವಾದ ಅಡಿಪಾಯ ಹಾಕಿವೆ ಎಂದು ಅವರು ಸ್ಮರಿಸಿದರು.
ಕರ್ನಾಟಕ ಸರ್ಕಾರವು ರಾಗಿ ಲಕ್ಷ್ಮಣಯ್ಯ ಅವರ ಜೀವನ ಮತ್ತು ಸಾಧನೆಗಳನ್ನು ಆಧರಿಸಿ ಸಾಕ್ಷ್ಯಚಿತ್ರ ನಿರ್ಮಿಸಿರುವುದು ಅವರ ಅಸಾಧಾರಣ ಕೊಡುಗೆಗಳಿಗೆ ದೊರೆತ ಗೌರವವಾಗಿದೆ. ಅವರು ಕೇವಲ ಶ್ರೇಷ್ಠ ವಿಜ್ಞಾನಿಯಷ್ಟೇ ಅಲ್ಲದೇ, ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ, ಶಿಸ್ತು, ಸರಳತೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.
ಸಸ್ಯತಳಿ ಕೃಷಿ ವಿಜ್ಞಾನಿ ಡಾ.ಶರಣ ಬಸವೇಶ್ವರ ಅಂಗಡಿ ಅವರು ಬೆಳೆ ಸುಧಾರಣೆ ಮತ್ತು ರೈತ ಸಮೃದ್ಧಿ ವಿಷಯದ ಕುರಿತು ಉಪನ್ಯಾಸ ನೀಡಿ, ಸುಧಾರಿತ ತಳಿಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು ಹಾಗೂ ಹವಾಮಾನ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆಯಿಂದ ರೈತರ ಆದಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬಹುದೆಂದು ಸಲಹೆ ನೀಡಿದರು.ಸಾಹಿತಿ ಪ್ರೊ.ಎಂ.ನಾರಾಯಣಸ್ವಾಮಿ ಮಾತನಾಡಿ, ರಾಗಿ ಲಕ್ಷ್ಮಣಯ್ಯ ಅವರ ವ್ಯಕ್ತಿತ್ವ, ಸರಳತೆ ಹಾಗೂ ಕೃಷಿ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟಿ.ಎಂ.ಅಪರ್ಣ ಹಾಗೂ ಆರ್.ಸ್ಫೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಿತಿ ಅಧ್ಯಕ್ಷ ಕೆ.ಬೋರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡೀನ್ (ಕೃಷಿ) ಡಾ.ಪಿ.ಎಸ್. ಫಾತಿಮಾ, ಸಹ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್.ಬಸವರಾಜು, ರೈತ ಮುಖಂಡರಾದ ಸುನಂದ ಜಯರಾಮ್, ಎಚ್.ಎಲ್. ವಸಂತಕುಮಾರ್, ನಿವೃತ್ತ ಸಹ ಪ್ರಾಧ್ಯಾಪಕ ಕೆ.ಆರ್.ಜಯರಾಮು, ಎಸ್.ಯೋಗಾನಂದ, ಮುರುಳಿಧರ್ ಎಸ್. ಬೆಳ್ಳೂರು, ಹಾಗೂ ಸೈಯದ್ ಗನಿ ಖಾನ್ ಸೇರಿದಂತೆ ಸ್ಮಾರಕ ಸಮಿತಿಯ ಪದಾಧಿಕಾರಿಗಳು, ವಿಜ್ಞಾನಿಗಳು, ರೈತ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.