ಜೀವಿತದ ಕೊನೆವರೆಗೂ ಅರಿವಿನ ದಾಸೋಹ ನೀಡಿದ ಶಿಕ್ಷಕಿ ರಹಮತ್ ಖಾತೂನ್: ಕೆ.ಟಿ. ಎಲ್ದೋ

| Published : Nov 15 2025, 01:45 AM IST

ಜೀವಿತದ ಕೊನೆವರೆಗೂ ಅರಿವಿನ ದಾಸೋಹ ನೀಡಿದ ಶಿಕ್ಷಕಿ ರಹಮತ್ ಖಾತೂನ್: ಕೆ.ಟಿ. ಎಲ್ದೋ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಜೀವನ್ ಜ್ಯೋತಿ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕಿಯಾಗಿದ್ದ ರಹಮತ್ ಖಾತೂನ್ ತಮ್ಮ ಜೀವಿತದ ಕೊನೆ ಅವಧಿವರೆಗೂ ಮಕ್ಕಳಿಗೆ ಅರಿವಿನ ದಾಸೋಹ ನೀಡಿದ್ದರು ಎಂದು ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಟಿ.ಎಲ್ದೋ ತಿಳಿಸಿದರು.

- ಜೀವನ್ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಅಗಲಿದ ಶಿಕ್ಷಕಿ ದಿ. ರಹಮತ್ ಖಾತೂನ್ ನುಡಿನಮನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜೀವನ್ ಜ್ಯೋತಿ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕಿಯಾಗಿದ್ದ ರಹಮತ್ ಖಾತೂನ್ ತಮ್ಮ ಜೀವಿತದ ಕೊನೆ ಅವಧಿವರೆಗೂ ಮಕ್ಕಳಿಗೆ ಅರಿವಿನ ದಾಸೋಹ ನೀಡಿದ್ದರು ಎಂದು ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಟಿ.ಎಲ್ದೋ ತಿಳಿಸಿದರು.

ಗುರುವಾರ ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಇತ್ತೀಚಿಗೆ ನಿಧನರಾದ ಜೀವನ್ ಜ್ಯೋತಿ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕಿ ರಹಮತ್ ಖಾತೂನ್ ಅವರಿಗೆ ನುಡಿ ನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕಿ ರಹಮತ್ ಖಾತೂನ್ ಅವರಿಗೆ ಜೀವನ್ ಜ್ಯೋತಿ ಶಾಲೆಯೇ ಸರ್ವಸ್ವವೂ ಆಗಿತ್ತು. ಅವರು ಕೇವಲ ಶಿಕ್ಷಕಿಯಾಗಿ ಮಾತ್ರ ಕೆಲಸ ಮಾಡುತ್ತಿರಲಿಲ್ಲ. ಶಿಕ್ಷಕ ವೃತ್ತಿಯನ್ನು ಮಕ್ಕಳೊಂದಿಗೆ ಆನಂದದಿಂದ ಅನುಭವಿಸುತ್ತಿದ್ದರು. ವಿಜ್ಞಾನ ಶಿಕ್ಷಕರಾಗಿ ತಮ್ಮ ವೃತ್ತಿಗೆ ಹಾಗೂ ಜೀವನ್ ಜ್ಯೋತಿ ಶಾಲೆಗೂ ಕೀರ್ತಿ ತಂದಿದ್ದಾರೆ. ಮುಂದೆ ಜೀವನ್ ಜ್ಯೋತಿ ಪ್ರೌಢ ಶಾಲೆಯಿಂದ ರಹಮತ್ ಕಾತೂನ್ ಅವರ ಒಬ್ಬ ಮಗಳಿಗೆ 2 ವರ್ಷ ಉಚಿತ ಶಿಕ್ಷಣ ನೀಡುತ್ತೇವೆ ಎಂದು ತಿಳಿಸಿದರು.

ಜಾಮೀಯ ಮಸೀದಿ ಕಾರ್ಯದರ್ಶಿ ಸೈಯ್ಯದ್ ಸಾದಿಕ್ ಬಾಷಾ ಮಾತನಾಡಿ, ರಹಮತ್ ಖಾತೂನ್ ತಾನು ಶಿಕ್ಷಕಿ ಯಾಗಿದ್ದ ಜೀವನ್ ಜ್ಯೋತಿ ಪ್ರೌಢ ಶಾಲೆ ಜಿಲ್ಲಾ, ರಾಜ್ಯ ಮಟ್ಟದಲ್ಲೂ ಹೆಸರ ಗಳಿಸಬೇಕೆಂಬ ಕನಸು ಹೊತ್ತಿದ್ದರು. ಅವರ ಕನಸು ಸಾಕಾರವಾಗಬೇಕಾದರೆ ಜೀವನ್ ಜ್ಯೋತಿ ಪ್ರೌಢ ಶಾಲೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು.

ಜೀವನ್ ಜ್ಯೋತಿ ಪ್ರೌಢ ಶಾಲೆ ಪ್ರಾಂಶುಪಾಲ ಪೀಟರ್ ಬಾಬು ಮಾತನಾಡಿ, ಶಿಕ್ಷಕಿ ರಹಮತ್ ಖಾತೂನ್ ನಿಧನದಿಂದ ಶಾಲೆ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇವೆ. ಶಿಕ್ಷಕಿ ರಹಮತ್ ಕಾತೂನ್ ಶಿಸ್ತು ಬದ್ದ ಜೀವನ ನಡೆಸಿದ್ದರು. ಅವರು ಜೀವನ್ ಜ್ಯೋತಿ ಶಾಲೆ ಹೆಮ್ಮೆಯ ಶಿಕ್ಷಕಿಯಾಗಿದ್ದರು. ಅವರ ಮೌಲ್ಯಯುತ ಜೀವನ ನಡೆಸಿ ಕುಟುಂಬದವರಿಗೆ, ಶಾಲೆಗೂ ಗೌರವ ತಂದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ದಿ. ಶ್ರೀಮತಿ ರಹಮತ್ ಕಾತೂನ್ ಅವರ ತಂದೆ ಖಾಸಿಂ ಖಾನ್ ಜೀವನ್ ಜ್ಯೋತಿ ಪ್ರೌಢ ಶಾಲೆಗೆ ₹1 ಲಕ್ಷ ರು. ನೀಡುವುದಾಗಿ ಘೋಷಿಸಿದರು. ಜೀವನ್ ಜ್ಯೋತಿ ಶಾಲೆ ಮಕ್ಕಳ ಯೂನಿಯನ್ ಕಮಿಟಿಯಿಂದ ರಹಮತ್ ಕಾತೂನ್ ಭಾವಚಿತ್ರವನ್ನು ಶಾಲೆ ಆಡಳಿತ ಮಂಡಳಿಯವರಿಗೆ ಕೊಡುಗೆಯಾಗಿ ನೀಡಿದರು.

ಸಭೆಯಲ್ಲಿ ಪೋಷಕರ ಶಿಕ್ಷಣ ಸಮಿತಿ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಶಾಲೆಯ ಶಿಕ್ಷಕರು,ಜಾಮೀಯ ಮಸೀದಿ ಗುರುಗಳು, ಅಲ್ನೂರು ಮಸೀದಿ ಗುರುಗಳು, ದಿ.ರಹಮತ್ ಖಾತೂನ್ ಕುಟುಂಬದವರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಾಲೆ ಮಕ್ಕಳು ಪಾಲ್ಗೊಂಡು ದಿ. ರಹಮತ್ ಖಾತೂನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

2 ನಿಮಿಷ ಮೌನಾಚರಣೆ ಮಾಡಲಾಯಿತು. ಅನ್ನಮ್ಮ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಫಾತೀಮ ವಂದಿಸಿದರು.