ಕಾಂಗ್ರೆಸ್‌ ಪಕ್ಷದ ವರಿಷ್ಠರು ನೀಡಿದ ಮಾಹಿತಿ ಅನುಸಾರ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್‌ ಗಾಂಧಿ ಅಲ್ಲಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೂಡಿ ಹುಬ್ಬಳ್ಳಿಗೆ ಬರಲಿದ್ದಾರೆಂಬ ಮಾಹಿತಿ ಬಂದಿದೆ.

ಹುಬ್ಬಳ್ಳಿ:

ಇಲ್ಲಿಯ ಮಂಟೂರ ರಸ್ತೆಯಲ್ಲಿ ಜ. 24ರಂದು ಬೆಳಗ್ಗೆ ನಡೆಯಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಿಸಿದ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠ ಹಾಗೂ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಖಚಿತ ಪಡಿಸಿದೆ.

ಈ ನಡುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿದ್ದು, ಕಾರ್ಯಕ್ರಮದ ಸಿದ್ಧತೆಗೆ ಅಂತಿಮ ರೂಪದ ಸ್ಪರ್ಶ ನೀಡಲಾಗುತ್ತಿದೆ.

ಪಕ್ಷದ ವರಿಷ್ಠರು ನೀಡಿದ ಮಾಹಿತಿ ಅನುಸಾರ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್‌ ಗಾಂಧಿ ಅಲ್ಲಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೂಡಿ ಹುಬ್ಬಳ್ಳಿಗೆ ಬರಲಿದ್ದಾರೆಂಬ ಮಾಹಿತಿ ಬಂದಿದೆ. ಅಧಿಕೃತ ಪ್ರವಾಸ ಕಾರ್ಯಕ್ರಮ ಪಟ್ಟಿ ಬಂದ ನಂತರವೇ ಅವರ ಕಾರ್ಯಕ್ರಮಗಳ ಸಂಪೂರ್ಣ ವಿವರ ಗೊತ್ತಾಗಲಿದೆ ಎಂದು ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ತಿಳಿಸಿದ್ದಾರೆ.

ಮತ್ತೆ ಯಾರ್ಯಾರು:

ಕಾಂಗ್ರೆಸ್ ವರಿಷ್ಠರ ಜತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ವಹಿಸಲಿದ್ದು, ಸ್ಥಳೀಯ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆ ಜತೆಗೆ ಅಗತ್ಯ ರೂಟ್ ಮ್ಯಾಪ್, ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಭರದ ಸಿದ್ಧತೆ:

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಿಸಿದ ಮನೆಗಳ ಹಸ್ತಾಂತರ ಮತ್ತು ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ವರಿಷ್ಠರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ಧತೆಯೂ ಭರದಿಂದ ಸಾಗಿದೆ. ಈಗಾಗಲೇ ವಸತಿ ಸಚಿವ ಜಮೀರ್ ಅಹ್ಮದ್‌ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಪೂರಕ ರೂಪರೇಷೆ ಹಾಕಲಾಗುತ್ತಿದೆ.

ಅಂದಾಜು 2 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ಈಗಾಗಲೇ ಅಂದಾಜು 18 ಎಕರೆ ಪ್ರದೇಶದಲ್ಲಿ ಜರ್ಮನ್ ಮಾದರಿ ಶಾಮಿಯಾನಾ ಹಾಕಲಾಗಿದೆ. ಇದರಲ್ಲಿ ಬೃಹತ್ ವೇದಿಕೆ, ಎಲ್‌ಇಡಿ ಅಳವಡಿಕೆ, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಖ್ಯ ವೇದಿಕೆ ಬಲಬದಿಯಲ್ಲಿ ಪಾಲ್ಗೊಳ್ಳುವ ಜನರಿಗೆ ಪೂರಕ ಊಟದ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕ ಶಾಮಿಯಾನಾ ಕೂಡ ಹಾಕಲಾಗಿದೆ. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಯೋಜಿಸಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ 5 ಕೌಂಟರ್‌ ತೆರೆಯಲಾಗಿದೆ. ಆ ಮೂಲಕ ಅದ್ಧೂರಿ ಕಾರ್ಯಕ್ರಮ ನೆರವೇರಿಸಲು ಪೂರಕ ಸಿದ್ಧತೆ ನಡೆಸಲಾಗಿದೆ ಎಂದು ಕಾಂಗ್ರೆಸ್‌ನ ಮುಖಂಡರು ತಿಳಿಸಿದ್ದಾರೆ.

ನಗರವೆಲ್ಲ ಸಿಂಗಾರ:

ಈ ನಡುವೆ ಮನೆಗಳ ಹಸ್ತಾಂತರ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತವೆ. ನವವಧುವಿನಂತೆ ನಗರವನ್ನು ಸಿಂಗರಿಸಲಾಗುತ್ತಿದೆ. ಗಣ್ಯಾತಿಗಣ್ಯರು ತೆರಳುವ ಮಾರ್ಗದ ರಸ್ತೆಯ ದುರಸ್ತಿ ಕಾರ್ಯವೂ ಭರದಿಂದ ನಡೆದಿದೆ. ನಗರದ ಗೋಕುಲ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬೃಹತ್ ಕಟೌಟ್ ಹಾಕಿದ್ದರೆ, ಉಳಿದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಭಾವಚಿತ್ರವುಳ್ಳ ಆಕರ್ಷಕ ಹೋಲ್ಡಿಂಗ್ಸ್‌ಗಳು, ಪ್ಲೆಕ್ಸ್ ಬೋರ್ಡ್‌ಗಳು ಗಮನ ಸೆಳೆಯುತ್ತವೆ.ನಾಳೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯಕಾರ್ಯಕ್ರಮಕ್ಕೆ ವಾಯವ್ಯ ಸಾರಿಗೆ ಸಂಸ್ಥೆಯಿಂದ ಪ್ರಾಸಂಗಿಕ ಕರಾರಿನ ಮೇರೆಗೆ ಸಾವಿರಕ್ಕೂ ಅಧಿಕ ಬಸ್‌ಗಳನ್ನು ಒದಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂದು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಪ್ರಯಾಣಿಕರು ಸಂಸ್ಥೆಯೊಂದಿಗೆ ಸಹಕರಿಸುವಂತೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.