ರಾವಣಿಗೆ ರಾಗಾ ಹೋಲಿಕೆ, ಕಾಂಗ್ರೆಸ್ ಪ್ರತಿಭಟನೆ
KannadaprabhaNewsNetwork | Published : Oct 08 2023, 12:00 AM IST
ರಾವಣಿಗೆ ರಾಗಾ ಹೋಲಿಕೆ, ಕಾಂಗ್ರೆಸ್ ಪ್ರತಿಭಟನೆ
ಸಾರಾಂಶ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣನಿಗೆ ಹೋಲಿಸಿ ಬಿಜೆಪಿ ಐಟಿ ವಿಭಾಗ ಪೋಸ್ಟರ್ ಹಾಕಿದ್ದನ್ನು ಖಂಡಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವಕರ ಹಾಗೂ ಮಾಜಿ ಶಾಸಕ ವಿ.ಎಸ್. ಪಾಟೀಲ ನೇತೃತ್ವದಲ್ಲಿ ಶನಿವಾರ ಮುಂಡಗೋಡದಲ್ಪಲಿ ಪ್ರತಿಭಟನೆ ನಡೆಸಲಾಯಿತು.
ಮುಂಡಗೋಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣನಿಗೆ ಹೋಲಿಸಿ ಬಿಜೆಪಿ ಐಟಿ ವಿಭಾಗ ಪೋಸ್ಟರ್ ಹಾಕಿದ್ದನ್ನು ಖಂಡಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವಕರ ಹಾಗೂ ಮಾಜಿ ಶಾಸಕ ವಿ.ಎಸ್. ಪಾಟೀಲ ನೇತೃತ್ವದಲ್ಲಿ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ಹುಬ್ಬಳ್ಳಿ-ಶಿರಸಿ ರಸ್ತೆಯ ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ಈ ವೇಳೆ ಮಾತನಾಡಿದ ಸಾಯಿನಾಥ ಗಾಂವಕರ, ೧೦ ತಲೆಗಳಿರುವ ರಾಹುಲ್ ಗಾಂಧಿ ಪೋಸ್ಟರನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದು, ಇಂಡಿಯಾ ಒಕ್ಕೂಟ ರಚನೆಯಿಂದ ಬಿಜೆಪಿಗರು ಭಯಭೀತರಾಗಿದ್ದಾರೆ. ರಾವಣ ಎಂದು ಕರೆಯುವುದು ಅವರ ಹತಾಶೆ ತೋರಿಸುತ್ತಿದ್ದು, ಇದು ನಾಚಿಕೆಗೇಡಿನ ಸಂಗತಿ. ರಾಹುಲ್ ಗಾಂಧಿ ಏನೆಂಬುದು ದೇಶದ ಜನರಿಗೆ ಗೊತ್ತಿದೆ. ಬಿಜೆಪಿ ಎಷ್ಟು ಭಯಪಡುತ್ತಿದೆ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತದೆ ಎಂದರು. ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಜನಬೆಂಬಲ ಸಿಗುತ್ತಿರುವುದರಿಂದ ಮತ್ತು ರಾಹುಲ್ ಗಾಂಧಿ ಜನಪ್ರಿಯತೆ ಸಹಿಸದ ಬಿಜೆಪಿ ಇನ್ನಷ್ಟು ಹತಾಶವಾಗಿದೆ. ಪ್ರಧಾನಿ ಇಂಡಿಯಾ ಒಕ್ಕೂಟವನ್ನು ತುಕ್ಕು ಹಿಡಿದ ಕಬ್ಬಿಣ, ಘಮಾಂಡಿಯಾ (ಅಹಂಕಾರಿ) ಮೈತ್ರಿ ಎಂದು ಕರೆಯಲು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಸಲು ಇದು ಕೂಡ ಒಂದು ಕಾರಣವಾಗಿದೆ. ಇದೆಲ್ಲವೂ ಬಿಜೆಪಿ ಮತ್ತು ಪ್ರಧಾನಿ ಆತಂಕವನ್ನು ತೋರಿಸುತ್ತದೆ ಎಂದು ಕಿಡಿ ಕಾರಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ರಾಹುಲ್ ಗಾಂಧಿ ಜನಪ್ರಿಯತೆಗೆ ಧಕ್ಕೆ ತರುವ ದೃಷ್ಟಿಯಿಂದ ಇಂತಹ ಪೋಸ್ಟ್ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ವರ್ಗದವರನ್ನು ಸಮಾನವಾಗಿ ಕರೆದೊಯ್ಯುವ ಪಕ್ಷ ಕಾಂಗ್ರೆಸ್ ಮಾತ್ರ. ಈ ಹಿಂದೇ ಕೇಂದ್ರದಲ್ಲಿ ಮನಮೋಹನ ಸಿಂಗ್ ಸರ್ಕಾರವಿದ್ದಾಗ ೧೦ ವರ್ಷ ₹ ೪೦೦ ಇದ್ದ ಅಡುಗೆ ಅನಿಲವನ್ನು ₹ ೧೨೦೦ಕ್ಕೆ ಏರಿಸಿದ ಬಿಜೆಪಿ ಸರ್ಕಾರ ಈಗ ಚುನಾವಣೆ ಸಮೀಸುತ್ತಿದ್ದಂತೆ ಸಿಲಿಂಡರ್ ಬೆಲೆ ಕಡಿಮೆ ಮಾಡಿ ಗಿಮಿಕ್ ಮಾಡುತ್ತಿದೆ. ಕೊನೆ ಗಳಿಗೆಯಲ್ಲಿ ಕೋಮುಗಲಭೆ ಮಾಡಿಸಿ ಮತ್ತೆ ಅಧಿಕಾರಕ್ಕೆ ಬರುವ ಕುತಂತ್ರ ಅವರದ್ದಾಗಿದೆ. ಮತದಾರರು ಅತಿ ಬುದ್ಧಿವಂತರಿದ್ದು, ಕಾಂಗ್ರೆಸ್ ಗೆ ಬೆಂಬಲಿಸಲಿದ್ದಾರೆ ಎಂದು ಹೇಳಿದರು. ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಎಂ.ಎನ್. ದುಂಡಸಿ, ಧರ್ಮರಾಜ ನಡಗೇರಿ, ಬಸವರಾಜ ಸಂಗಮೇಶ್ವರ ಮುಂತಾದವರಿದ್ದರು.