ಸಾರಾಂಶ
ಸಂವಿಧಾನದತ್ತವಾದ ಮೀಸಲಾತಿಗೆ ಚ್ಯುತಿ ತರಲು ಬಿಜೆಪಿ ಬಿಡುವುದಿಲ್ಲ. ರಾಹುಲ್ ಹೇಳಿಕೆ ಬಗ್ಗೆ ಬಿಜೆಪಿ ಜನಜಾಗೃತಿ ಮೂಡಿಸಲಿದೆ. ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೋಣೆಮನೆ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ‘ಸೂಕ್ತ ಸಂದರ್ಭ ಬಂದಾಗ ಭಾರತದಲ್ಲಿ ಮೀಸಲಾತಿ ತೆಗೆಯಲಾವುದು’ ಎಂದು ಹೇಳಿಕೆ ನೀಡಿರುವುದು ಖಂಡನೀಯ. ರಾಹುಲ್ ಅವರು ದಲಿತರು ಹಾಗೂ ಹಿಂದುಗಳಿದ ವರ್ಗದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಈ ಹೇಳಿಕೆಯ ಮೂಲಕ ಕಾಂಗ್ರೆಸ್‌ನ ಮುಖವಾಡ ಕಳಚಿದೆ. ಅವರ ದಲಿತಪರ ಎನ್ನುವ ಮೊಸಳೆಗಣ್ಣೀರು ಸಾಬೀತಾಗಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದರು.
ಮೀಸಲಾತಿ ತೆಗೆದುಹಾಕುವ ಕಾಂಗ್ರೆಸ್‌ನ ಕನಸು ಈಡೇರಲು ನಾವು ಬಿಡಲ್ಲ. ಸಂವಿಧಾನದತ್ತವಾದ ಮೀಸಲಾತಿಗೆ ಚ್ಯುತಿ ತರಲು ಬಿಜೆಪಿ ಬಿಡುವುದಿಲ್ಲ. ರಾಹುಲ್ ಹೇಳಿಕೆ ಬಗ್ಗೆ ಬಿಜೆಪಿ ಜನಜಾಗೃತಿ ಮೂಡಿಸಲಿದೆ. ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೋಣೆಮನೆ ಹೇಳಿದರು.ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚಿಸಿದ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನವನ್ನು ರಾಹುಲ್ ಅವರು ಅನಿವಾರ್ಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಸರಿಗೆ ಮಾತ್ರ ನೀಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ದೇಶದ ಗಡಿಗಳ ಬಗ್ಗೆ ಅರಿವಿಲ್ಲ, ಸೇನೆ ಬಗ್ಗೆ ಗೌರವವಿಲ್ಲ. ಸಂವಿಧಾನದ ಕುರಿತು ಮಾತನಾಡುವ ಅವರು ದೇಶದ ಹೊರಗೆ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರಮೇಶ್ ರತನ್ ಪೂಜಾರಿ, ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ, ಸತೀಶ ಪ್ರಭು, ಅರುಣ್ ಶೇಟ್, ಮೋಹನ್‌ರಾಜ್ ಕೆ.ಆರ್., ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಪೂಜಾರಿ, ಸಹ ಸಂಚಾಲಕ ಮನೋಹರ ಶೆಟ್ಟಿ ಇದ್ದರು.