ನಮ್ಮಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಪರಿಸ್ಥಿತಿಯಲ್ಲಿ ಇರುವ ನೀರನ್ನೇ ತಮಿಳುನಾಡಿಗೆ ಹರಿಸಿದರೆ ನಮ್ಮ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇರುವ ನೀರನ್ನು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಒಂದು ವೇಳೆ ನೀರು ಬಿಟ್ಟಲ್ಲಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನದಿ ನೀರಿನ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂಧಾನ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸಲಹೆ ನೀಡಿದರು.ತಮ್ಮನ್ನು ಭೇಟಿಯಾದ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ತಮಿಳುನಾಡಿನಲ್ಲೂ ಕಾಂಗ್ರೆಸ್ ಬೆಂಬಲಿತ ಸರ್ಕಾರವಿದೆ. ಹೀಗಿರುವಾಗ ಕಾಂಗ್ರೆಸ್‌ನ ರಾಹುಲ್‌ಗಾಂಧಿ ಅವರು ಎರಡೂ ರಾಜ್ಯದ ಮುಖ್ಯಮಂತ್ರಿಗಳನ್ನು ಒಟ್ಟಿಗೆ ಕೂರಿಸಿ ಸಂಧಾನ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಪರಿಸ್ಥಿತಿಯಲ್ಲಿ ಇರುವ ನೀರನ್ನೇ ತಮಿಳುನಾಡಿಗೆ ಹರಿಸಿದರೆ ನಮ್ಮ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇರುವ ನೀರನ್ನು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಒಂದು ವೇಳೆ ನೀರು ಬಿಟ್ಟಲ್ಲಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ತಮಿಳುನಾಡಿಗೆ ನೀರು ಬಿಡುವವರು ನಾವು. ಒಂದು ವೇಳೆ ನೀರು ಕೇಳುವವರು ನಾವಾಗಿದ್ದರೆ ಆಗ ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೂ ಜವಾಬ್ದಾರಿ ಇರುತ್ತದೆ. ಆದರೆ, ನಾವೇ ನೀರು ಬಿಡುವ ಸ್ಥಾನದಲ್ಲಿದ್ದೇವೆ. ಹೀಗಾಗಿ ಸಂಸದರು ಏಕೆ ಮಾತನಾಡಬೇಕು ಎಂದು ಶಾಸಕ ಪಿ. ರವಿಕುಮಾರ್ ಅವರಿಗೆ ತಿರುಗೇಟು ನೀಡಿದರು.
ಪ್ರಧಾನಿ ಮೋದಿಯವರಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಇದರಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಏಕೆಂದರೆ ಜಲವಿವಾದಗಳನ್ನು ಬಗೆಹರಿಸುವ ಸಲುವಾಗಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರಗಳನ್ನು ರಚಿಸಲಾಗಿದೆ. ಅಲ್ಲಿಗೆ ಈ ಭಾಗದ ಎಲ್ಲ ವೈಜ್ಞಾನಿಕ ಮಾಹಿತಿಗಳನ್ನು ನೀಡಬೇಕು. ಅದರ ನಂತರದ ಸ್ಥಾನದಲ್ಲಿ ಸುಪ್ರೀಂ ಕೋರ್ಟ್ ಇದೆ. ಅಲ್ಲಿ ಮೇಲ್ಮನವಿ ಸಲ್ಲಿಸಿ ಸಮರ್ಥವಾಗಿ ವಾದ ಮಂಡಿಸಬೇಕು. ಅದು ಬಿಟ್ಟು ಪ್ರಧಾನಿ ಅಥವಾ ಕೇಂದ್ರ ಸರ್ಕಾರ ಬಗೆಹರಿಸಲಿ ಎನ್ನುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.ಈ ಹಿಂದೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಜಲ ತಜ್ಞರು, ತಂತ್ರಜ್ಞರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಂತಹ ಮಹನೀಯರನ್ನು ಸಂಪರ್ಕಿಸಿ ಚರ್ಚೆ ನಡೆಸಬೇಕಿತ್ತು. ಯಾವುದೇ ಕ್ರಮಗಳನ್ನು ಅನುಸರಿಸದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಪಕ್ಷದವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಈಗ ನಮ್ಮ ಮೇಲೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ತಿಳಿಸಿದ್ದಾರೆ. ಕಾವೇರಿ ಹಾಗೂ ಮೇಕೆದಾಟು ವಿಚಾರವಾಗಿ ಅವರೊಂದಿಗೆ ಚರ್ಚೆ ನಡೆಸುವುದಾದರೂ ಏಕೆ ಎಂದು ಪ್ರಶ್ನಿಸಿದರು.ನಾಡಿನ ಜಲ, ನೆಲ, ಭಾಷೆ ವಿಚಾರವಾಗಿ ಯಾವುದೇ ಸಂಘಟನೆಗಳು ಹೋರಾಟ ನಡೆಸಿದರೆ ನಮ್ಮ ಸಂಪೂರ್ಣ ಬೆಂಬಲವಿದೆ. ಮಂಡ್ಯ ಬಂದ್‌ಗೆ ಕರೆ ನೀಡಿರುವ ಸಂಘಟನೆಗೂ ನಮ್ಮ ಬೆಂಬಲ ಇರುವುದಾಗಿ ಘೋಷಿಸಿದರು.
ಈ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಯುವ ನಾಯಕ ಸಚ್ಚಿದಾನಂದ, ಮುಖಂಡರಾದ ಎಚ್.ಆರ್. ಅಶೋಕ್‌ಕುಮಾರ್, ಶಿವಣ್ಣ ಇತರರು ಇದ್ದರು.