ರಾಹುಲ್‌ರದ್ದು ಟುಸ್‌ ಪಟಾಕಿ : ಬಿಜೆಪಿಗರ ವ್ಯಂಗ್ಯ

| N/A | Published : Aug 09 2025, 12:00 AM IST / Updated: Aug 09 2025, 10:26 AM IST

rahul gandhi
ರಾಹುಲ್‌ರದ್ದು ಟುಸ್‌ ಪಟಾಕಿ : ಬಿಜೆಪಿಗರ ವ್ಯಂಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮತಗಳ್ಳತನ ಕುರಿತ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ರಾಜ್ಯ ಬಿಜೆಪಿ ನಾಯಕರು ತೀಕ್ಷ್ಣವಾಗಿ ತಿರುಗೇಟು 

  ಬೆಂಗಳೂರು :  ಮತಗಳ್ಳತನ ಕುರಿತ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ರಾಜ್ಯ ಬಿಜೆಪಿ ನಾಯಕರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಮೋದಿ ಅಥವಾ ಪಕ್ಷದ ನಾಯಕರ ಪಾತ್ರವೇ ಇಲ್ಲ ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಅವದ್ದು ಆಟಂ ಬಾಂಬ್‌ ಅಲ್ಲ, ಟುಸ್‌ ಪಟಾಕಿ ಎಂದೂ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.

ಶುಕ್ರವಾರ ವಿವಿಧೆಡೆ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಹುಲ್ ಗಾಂಧಿ ಆರೋಪಗಳನ್ನು ಬಲವಾಗಿ ಅಲ್ಲಗಳೆದರು.ಪರಿಷ್ಕರಣೆಗೆ ವಿರೋಧ ಯಾಕೆ?:

ವಿಜಯೇಂದ್ರ ಮಾತನಾಡಿ, ಮತದಾನದಲ್ಲಿ ಅಕ್ರಮದ ಆರೋಪ ಮಾಡುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಯಾಕೆ ವಿರೋಧಿಸುತ್ತಾರೆ? ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶ-ರಾಜ್ಯದಲ್ಲಿ ಅಕ್ರಮಗಳು ನಡೆದಿವೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ರಾಹುಲ್ ಗಾಂಧಿ ಹೇಳಿಕೆ ನಂತರ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ಸಿನ ಹಿರಿಯ ನಾಯಕರು ಮೂರ್ಖರಂತೆ ಮಾತನಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 16 ಸೀಟ್ ಪಡೆಯಲಿದೆ ಎಂದು ಯಾವ ಸರ್ವೇಗಳೂ ಹೇಳಿರಲಿಲ್ಲ. 16 ಸೀಟು ಗೆಲ್ಲಲಿದೆ ಎಂಬುದಾಗಿ ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ಸಿನ ಮೂರ್ಖರು ಹೇಳಿರಬೇಕು ಎಂದರು.

ಟುಸ್‌ ಪಟಾಕಿ:

ಆರ್‌.ಅಶೋಕ್ ಮಾತನಾಡಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಮೋದಿ ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಇದನ್ನು ಅಧಿಕಾರಿಗಳೇ ತಯಾರು ಮಾಡುತ್ತಾರೆ. ಆದ್ದರಿಂದ ರಾಹುಲ್‌ ಗಾಂಧಿ ಆರೋಪ ಟುಸ್‌ ಪಟಾಕಿ ಆಗಿದೆ ಎಂದು ಹೇಳಿದರು.

ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕರು ಬೋಗಸ್‌ ವೋಟ್‌ಗಳ ಅಕ್ರಮ ಮಾಡಿದ್ದಕ್ಕೆ ಬಂಧಿತರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರದ ಒಂದು ಚಿಕ್ಕ ಮನೆಯಲ್ಲಿ 18 ಮುಸ್ಲಿಂ ಮತದಾರರಿದ್ದಾರೆ. ಒಂದೇ ಮನೆಯಲ್ಲಿ ಇಷ್ಟೊಂದು ವೋಟು ಇರಲು ಹೇಗೆ ಸಾಧ್ಯ? ಸರ್ವಜ್ಞನಗರ ಕ್ಷೇತ್ರದ ನಾಗವಾರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಶಾಸಕರಿಗಿಂತಲೂ ಸಂಸದರಿಗೆ 5,965 ಹೆಚ್ಚುವರಿ ಮತ ಸಿಕ್ಕಿದೆ. ಹಾಗಾದರೆ ಕಾಂಗ್ರೆಸ್‌ಗೆ ಹೆಚ್ಚು ಮತ ಸಿಕ್ಕಿದ್ದು ಹೇಗೆ? ಎಚ್‌ಬಿಆರ್‌ ಲೇಔಟ್‌ನಲ್ಲಿ ಶಾಸಕರಿಗಿಂತಲೂ ಸಂಸದರಿಗೆ 3,646 ಮತ ಹೆಚ್ಚಾಗಿ ಸಿಕ್ಕಿದೆ. ಕಾಡುಗೊಂಡನಹಳ್ಳಿಯಲ್ಲಿ 3432 ಹೆಚ್ಚು ಮತ ಸಿಕ್ಕಿದೆ. ಹಾಗಾದರೆ ಇವೆಲ್ಲವನ್ನೂ ಸೇರಿಸಿದ್ದು ಯಾರು ಎಂದು ಪ್ರಶ್ನಿಸಿದರು.

ವೈಫಲ್ಯ ಮುಚ್ಚಲು ಯತ್ನ:

ಬಸವರಾಜ ಬೊಮ್ಮಾಯಿ ಮಾತನಾಡಿ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡಿ ಲೋಕತಂತ್ರ ನಿಷ್ಕ್ರಿಯ ಮಾಡಲು ಹೊರಟಿದ್ದಾರೆ. ತಾವು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡದೇ ಪಲಾಯನ ಮಾಡಿದ್ದಾರೆ ಎಂದು ಹೇಳಿದರು.

ಚುನಾವಣಾ ಆಯೋಗ ಯಾವ ರೀತಿ ಕರ್ತವ್ಯ ಮಾಡುತ್ತದೆ. ಜನಪ್ರತಿನಿಧಿ ಕಾಯ್ದೆ ಏನು ಹೇಳುತ್ತದೆ ಎನ್ನುವುದು ರಾಹುಲ್ ಗಾಂಧಿಯವರಿಗೆ ಗೊತ್ತಿದೆಯೋ, ಗೊತ್ತಿಲ್ಲವೊ‌ ಅಥವಾ ಗೊತ್ತಿದ್ದು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆಯೋ ಗೊತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಬಾರಿ ಸೋತಿದ್ದರಿಂದ ರಾಹುಲ್ ಗಾಂಧಿ ನಾಯಕತ್ವದ ಮೇಲೆ ಕಾಂಗ್ರೆಸ್ ನಲ್ಲಿ ಅಪಸ್ವರ ಇದೆ. ಅದನ್ನು ಮರೆಮಾಚಲು ರಾಹುಲ್ ಗಾಂಧಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಡೇಂಜರಸ್ ಗೇಮ್ ಆಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತಹ ಆಟ ಆಡುತ್ತಿದ್ದಾರೆ ಜನರಿಗೆ ಇದು ಗೊತ್ತಾಗುತ್ತಿದೆ ಎಂದರು. 

ವೃಥಾ ಆರೋಪ:

ಪ್ರಹ್ಲಾದ್ ಜೋಶಿ ಮಾತನಾಡಿ, ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ ಎಂಬ ಗಾದೆ ಮಾತಿನಂತೆ ರಾಹುಲ್‌ ಗಾಂಧಿ ಸಹ ಅದೇ ವರ್ತನೆ ತೋರುತ್ತಿದ್ದಾರೆ. ಚುನಾವಣಾ ಆಯೋಗದಂತಹ ಸಾಂಸ್ಥಿಕ ಸಂಸ್ಥೆಗಳ ಮೇಲೆ ವೃಥಾ ಆರೋಪ ಮಾಡುವ ಇವರದ್ದು ಮೂರ್ಖತನವೇ ಸರಿ ಎಂದು ಕಿಡಿಕಾರಿದರು.

ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದ ಮಾಹಿತಿ ಪಡೆದುಕೊಳ್ಳಲು ಆಯೋಗ ಕರೆದರೂ ತೆರಳಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಇವರ ಆರೋಪಗಳೆಲ್ಲ ನಿರಾಧಾರ ಎಂಬುದು. ರಾಹುಲ್‌ ಗಾಂಧಿ ಅವರದ್ದು ಒಂದು ರೀತಿ ಹಿಟ್‌ ಆಂಡ್‌ ರನ್‌ ಕೇಸ್‌ ಇದ್ದಂತೆ. ಮನಬಂದಂತೆ ಮಾತನಾಡುತ್ತಾರೆ. ಉತ್ತರ ಕೇಳಿದರೆ ನಾಪತ್ತೆಯಾಗುತ್ತಾರೆ. ಯಾವುದೇ ಪ್ರಕರಣ ಸಹ ದಾಖಲಿಸುವುದಿಲ್ಲ ಎಂದು ಚಾಟಿ ಬೀಸಿದರು.

ಹುಡಗಾಟದ ಹುಡುಗ:

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬಹುಶಃ ಒಬ್ಬ ಹುಡುಗಾಟದ ಹುಡುಗ. ಹೀಗೆ ಹುಡುಗಾಟ ಆಡುತ್ತಿದ್ದರೆ ಜನರು ನಿಮ್ಮನ್ನು ಪ್ರಬುದ್ಧ ನಾಯಕ ಎಂದು ತಿಳಿದುಕೊಳ್ಳುವುದಿಲ್ಲ. ಒಂದೇ ವ್ಯಕ್ತಿಯ ಭಾವಚಿತ್ರವುಳ್ಳ ಹೆಸರು ಬೇರೆ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ಇದ್ದರೆ ಅಂಥ ವ್ಯಕ್ತಿಯ ವಾಸ ಪ್ರದೇಶ ಹೊರತುಪಡಿಸಿ ಎರಡನೇ ಅಥವಾ ಮೂರನೇ ಪ್ರದೇಶದ ಹೆಸರು ರದ್ದು ಮಾಡಲು ನಾವೇ ಹೋರಾಟ ಮಾಡಿದ್ದೆವು. ಇದೆಲ್ಲ ಕಾಂಗ್ರೆಸ್ ತಂತ್ರಗಳು ಎಂದು ಟೀಕಿಸಿದರು. 

ರಾಹುಲ್‌ಗೆ ದಾಖಲೆ ಸಹಿತ ಲಿಂಬಾವಳಿ ಉತ್ತರ:

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮತ ಪ್ರಮಾಣದ ಗ್ರಾಫ್‍ನಲ್ಲಿ ಏರಿಕೆಯಾಗಿದೆ. ಆದರೆ, ರಾಹುಲ್‌ ಗಾಂಧಿಗೆ ಅಸಮಾಧಾನ ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ರಾಹುಲ್‌ ಗಾಂಧಿ ಕುರಿತು ‘ಮೈಂಡ್‌ ಫುಲ್‌ ಆಫ್‌ ಇಮ್ಮೆಚ್ಯೂರಿಟಿ’ ಎಂದು ಹೇಳಿದ್ದರು. ಅಂದರೆ, ರಾಹುಲ್‌ ಅವರ ಯೋಚನೆ ಸಂಪೂರ್ಣ ಅಪಕ್ವವಾಗಿದೆ ಎಂದರ್ಥ. ಈಗ ರಾಹುಲ್‌ ಅವರು ಅದನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ ಎಂದೂ ಲಿಂಬಾವಳಿ ಟಾಂಗ್‌ ನೀಡಿದ್ದಾರೆ.ಕಳೆದ ಲೋಕಸಭಾ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಆಗಿದೆ ಎಂಬ ರಾಹುಲ್‌ ಗಾಂಧಿ ಆರೋಪಗಳಿಗೆ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಬಾವಳಿ ಅವರು ದಾಖಲೆ ಸಮೇತ ತಿರುಗೇಟು ನೀಡಿದರು.

ನಾವು ಮಹದೇವಪುರದಲ್ಲಿ ಸಕ್ರಮವಾಗಿಯೇ ಚುನಾವಣೆ ಮಾಡಿದ್ದೇವೆ. ನಾಲ್ಕು ಲೋಕಸಭಾ ಮತ್ತು ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ ಗಳಿಕೆ ಹೆಚ್ಚಳವಾಗಿದೆ. ಅಂದರೆ, ಕ್ಷೇತ್ರದಲ್ಲಿ ಬಿಜೆಪಿ ಬೆಳವಣಿಗೆ ಸಹಜವಾಗಿದೆ. ಇದನ್ನು ರಾಹುಲ್‌ ಗಾಂಧಿ ಅವರು ಅರ್ಥ ಮಾಡಿಕೊಳ್ಳಬೇಕು. ಇಷ್ಟು ದಿನ ಇವಿಎಂ ಕುರಿತು ಬೈಯ್ಯುತ್ತಿದ್ದ ರಾಹುಲ್‌ ಈಗ ಮತದಾರರ ಪಟ್ಟಿಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. 

ಬಿಜೆಪಿಯವರು ಚುನಾವಣಾ ಆಯೋಗದೊಂದಿಗೆ ಸೇರಿ ಚುನಾವಣಾ ಅಕ್ರಮ ಎಸಗುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅದರಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಉದಾಹರಣೆ ತೆಗೆದುಕೊಂಡು ಪಿಪಿಟಿ ಪ್ರಾತ್ಯಕ್ಷಿಗೆ ನೀಡಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ 40,009 ನಕಲಿ ಮತ್ತು ಅಸಿಂಧು ಮತಗಳಿವೆ. ಒಂದೇ ವಿಳಾಸದ 10,45 ಬಲ್ಕ್‌ ಮತದಾರರು ಇದ್ದಾರೆ. ಫಾರ್ಮ್‌-6ರ(ಹೊಸ ಮತದಾರ) ದುರ್ಬಳಕೆ 33,692, ಡುಪ್ಲಿಕೇಟ್‌ ಮತದಾರರ ಸಂಖ್ಯೆ 11,965 ಇದೆ. 4,132 ಮಂದಿ ಅಸಮರ್ಪಕ ಫೋಟೋ ಇರುವ ಮತದಾರರು 4,132 ಮಂದಿ ಇದ್ದಾರೆ ಎಂದು ಏಳು ಉದಾಹರಣೆ ನೀಡಿದ್ದಾರೆ. ರಾಹುಲ್‌ ಗಾಂಧಿ ಅವರ ಈ ಆರೋಪಗಳ ಕುರಿತು ನಾವು ರಿಯಾಲಿಟ್ ಚೆಕ್ ಮಾಡಿದ್ದೇವೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ದಾಖಲೆ ಪ್ರದರ್ಶನ:ರಾಹುಲ್‌ ಗಾಂಧಿ ಅವರು ಗುರುಕೀರಿತ್‌ ಸಿಂಗ್‌ ಹೆಸರು ಮತದಾರರ ಪಟ್ಟಿಯಲ್ಲಿ 4 ಕಡೆ ಇದೆ ಎಂದು ಆರೋಪಿಸಿದ್ದರು. ನಾವು ರಿಯಾಲಿಟಿ ಚೆಕ್‌ ಮಾಡಿದಾಗ, ಗುರುಕೀರಿತ್‌ ಸಿಂಗ್‌ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದು, ನಾಲ್ಕು ಬಾರಿಯೂ ತಿರಸ್ಕಾರವಾಗಿತ್ತು. ಆದರೆ, ಮತಪಟ್ಟಿ ಬಂದ ಬಳಿಕ ನಾಲ್ಕು ಕಡೆ ಹೆಸರು ಕಾಣಿಸಿಕೊಂಡಿದೆ. ಬಳಿಕ ಮೂರು ಕಡೆ ಅವರು ಹೆಸರು ರದ್ದು ಮಾಡುವಂತೆ ಕೋರಿದ್ದರು ಎಂದು ದಾಖಲೆ ಮುಂದಿಟ್ಟರು. 

ಉತ್ತರಪ್ರದೇಶ ಮೂಲದ ಆದಿತ್ಯ ಶ್ರೀವಾಸ್ತವ 19 ವರ್ಷದ ಇದ್ದಾಗ ಲಕ್ನೋದಲ್ಲಿ ಮತದಾರರ ಪಟ್ಟಿಗೆ ಸೇರಿದ್ದರು. ಬಳಿಕ ಮುಂಬೈನಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿಯೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದರು. ನಂತರ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದು ನೆಲೆ ನಿಂತು ಇಲ್ಲಿಯೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದರು. ಬಳಿಕ ಬೆಂಗಳೂರಿನಲ್ಲಿಯೇ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್‌-7 ಮೂಲಕ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು.

ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಳ:

ಇನ್ನು ನಕಲಿ ವಿಳಾಸದ ಆರೋಪದ ಬಗ್ಗೆ ಪರಿಶೀಲಿಸಿದಾಗ 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಮತದಾರರ ಪಟ್ಟಿಗೆ ಸೇರಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಲ್ಕ್‌ ಮತದಾರರ ಕುರಿತ ಆರೋಪ ಸರಿಯಲ್ಲ ಎಂದರು.ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಹೋಗುವವರು ಮತ್ತು ಬರುವವರ ಸಂಖ್ಯೆ ಹೆಚ್ಚೇ ಇದೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಡಾರ್ಮೆಟ್ರಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಒಂದೇ ಮನೆಯಲ್ಲಿ 80 ಜನ ಮತದಾರು ಎಂದರೆ, ಆ ಸ್ಥಳಕ್ಕೆ ಹೋಗಿ ನೋವು ನೋಡಿದಾಗ ಅಲ್ಲಿ ಹಲವು ರೂಮ್‌ಗಳು ಇವೆ. ಇನ್ನೂ ಹಲವು ಕೆಲಸಗಾರರು ಅಲ್ಲಿದ್ದಾರೆ ಎಂದು ಆ ಮನೆಯ ವಿಡಿಯೋ ಪ್ರದರ್ಶಿಸಿದರು.

ಎರಡು ಕಡೆ ಮತ ಚಲಾವಣೆ ಕುರಿತ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ಕುರಿತೂ ತಪಾಸಣೆ ಮಾಡಿದ್ದೇವೆ, ಅವರು ಒಂದೇ ಕಡೆ ಮತ ಚಲಾಯಿಸಿದ್ದಾರೆ ಎಂದು ದಾಖಲೆ ತೋರಿಸಿದರು.ಮತದಾರರ ಸಂಖ್ಯೆ ಏರಿಕೆ:ಮಹದೇವಪುರ ಕ್ಷೇತ್ರದಲ್ಲಿ 2008ರ ವಿಧಾನಸಭಾ ಚುನಾವಣೆ ವೇಳೆ 2,75,328 ಮತದಾರರಿದ್ದರು. ಈ ಪೈಕಿ 1,46,404 ಮಂದಿ ಮತ ಚಲಾಯಿಸಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ 3,14,000 ಮತದಾರರ ಪೈಕಿ 1,50,080 ಮಂದಿ ಮತ ಚಲಾಯಿಸಿದ್ದರು. 2013ರ ವಿಧಾನಸಭಾ ಚುನವಣೆಯಲ್ಲಿ 3,68,210 ಮತದಾರರ ಪೈಕಿ 2,26,749 ಮಂದಿ ಮತ ಚಲಾಯಿಸಿದ್ದರು. 2014ರ ಲೋಕಸಭಾ ಚುನಾವಣೆ, 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭೆ ಚುನಾವಣೆಯ ಮತದಾನದ ಕುರಿತು ವಿವರವಾದ ಮಾಹಿತಿ ಹಂಚಿಕೊಂಡರು.

2023ರ ವಿಧಾನಸಭಾ ಚುನಾವಣೆಯಲ್ಲಿ 6,07,135 ಮತದಾರರ ಪೈಕಿ 3,29,841 ಮಂದಿ ಚಲಾಯಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ 6,59,733 ಮತದಾರರ ಪೈಕಿ 3,51,535 ಮಂದಿ ಮತ ಚಲಾಯಿಸಿದ್ದರು. ಪ್ರಸ್ತುತ ಮಹದೇವಪುರ ಕ್ಷೇತ್ರದಲ್ಲಿ 6,80,514 ಮತದಾರರು ಇದ್ದಾರೆ. ಕ್ಷೇತ್ರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಿರುವ ಕಾರಣ ಮತದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 4 ಬಾರಿ ವಿಧಾನಸಭೆ ಮತ್ತು 4 ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚಿನ ಮತ ಬಂದಿದೆ. ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಮತಗಳಿಕೆ ಪ್ರಮಾಣ ಹೆಚ್ಚಳವಾಗಿದೆ ಎಂದು ಲಿಂಬಾವಳಿ ಅಂಕಿ-ಅಂಶಗಳ ಸಹಿತ ವಿವರಿಸಿದರು.2019ರ ಲೋಕಸಭಾ ಚುನಾವಣೆಯಲ್ಲಿ ಪಿ.ಸಿ.ಮೋಹನ್‌ 69,974 ಮತಗಳ ಅಂತರದಿಂದ ಗೆದ್ದಿದ್ದರು. ಮಹದೇವಪುರ ಕ್ಷೇತ್ರದಲ್ಲಿ 72,559 ಲೀಡ್‌ ಕೊಟ್ಟಿದ್ದೆವು. 2023ರ ಲೋಕಸಭಾ ಚುನಾವಣೆಯಲ್ಲಿ ಪಿ.ಸಿ.ಮೋಹನ್‌ಗೆ 1,14,046 ಲೀಡ್‌ ಕೊಟ್ಟಿದ್ದೇವೆ. ಹೀಗಾಗಿ 32,707 ಮತಗಳ ಅಂತರದಿಂದ ಪಿ.ಸಿ.ಮೋಹನ್‌ ಗೆದ್ದಿದ್ದಾರೆ ಎಂದು ಹೇಳಿದರು.

ಮಾಧ್ಯಮಗಳಿಗೆ ರಾಹುಲ್ ತಪ್ಪು ಮಾಹಿತಿ: ರಾಹುಲ್‌ ಗಾಂಧಿ ಗುರುವಾರ ದೆಹಲಿಯಲ್ಲಿ ಮಾಧ್ಯಮದವರಿಗೆ ಒಂದು ತಪ್ಪು ಮಾಹಿತಿ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಂದಿತ್ತು. ಮಹದೇವಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಗೆ ಲೀಡ್‌ ಗಳಿಸಿ ಗೆದ್ದಿದ್ದಾರೆ ಎಂದಿದ್ದಾರೆ. ಇದು ಸುಳ್ಳು ಎಂದು ಲಿಂಬಾವಳಿ ಪ್ರತಿಪಾದಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಮುಂದಿದ್ದೆವು. ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್‌ ನಗರ, ಮಹದೇವಪುರದಲ್ಲಿ ಬಿಜೆಪಿಗೆ ಲೀಡ್‌ ಸಿಕ್ಕಿದೆ. ಈ ನಾಲ್ಕು ಕ್ಷೇತ್ರಗಳ ಮುನ್ನಡೆಯಿಂದ ನಾವು 32,707 ಮತಗಳ ಅಂತರದಿಂದ ಗೆದ್ದಿದ್ದೇವೆ ಎಂದು ಹೇಳಿದರು.ಮಹದೇವಪುರ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ 2016-17ರಲ್ಲಿ 1,48,743 ಆಸ್ತಿಗಳಿದ್ದವು. ಇದರಿಂದ 361 ಕೋಟಿ ರು. ತೆರಿಗೆ ಬಿಬಿಎಂಪಿಗೆ ಬರುತ್ತಿತ್ತು. 2024-25ರಲ್ಲಿ 3,59,468 ಆಸ್ತಿಗಳಿವೆ. ಇದರಿಂದ ಬಿಬಿಎಂಪಿಗೆ 885 ಕೋಟಿ ರು. ತೆರಿಗೆ ಬರುತ್ತಿದೆ. ನನ್ನ ತೆರಿಗೆ ನನ್ನ ಹಕ್ಕು. ನನ್ನ ಕ್ಷೇತ್ರಕ್ಕೆ ನೀವೇನು ಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಮುಂದೊಂದು ದಿನ ಕೇಳುತ್ತೇನೆ ಎಂದು ತಿಳಿಸಿದರು.

ವರುಣಾದಲ್ಲೂ ‘00’ ಮನೆ ನಂಬರ್‌:ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿ ‘00’ ಮನೆ ಸಂಖ್ಯೆ ಬಗ್ಗೆ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಪಾರ್ಟ್‌ ನಂಬರ್‌-8ರಲ್ಲಿ ‘00’ ಮನೆ ಸಂಖ್ಯೆ ಇದೆ ಎಂದು ಮತದಾರರ ಪಟ್ಟಿ ಪ್ರದರ್ಶಿಸಿದರು. ಹಾಗಾದರೆ ಸಿದ್ದರಾಮಯ್ಯ ಅವರೂ ನಕಲಿ ಅಲ್ಲವೇ? ನಾನು ಹಾಗೆ ಹೇಳಲ್ಲ. ರಾಹುಲ್‌ ಗಾಂಧಿ ಹೇಳುವ ಪ್ರಕಾರ ನಕಲಿ. ಇದು ಒಂದು ಮಾತ್ರವಲ್ಲ, ಸಂಡೂರು, ಮಾನ್ವಿ, ಮಸ್ಕಿ ಸೇರಿ ಹಲವು ಕ್ಷೇತ್ರಗಳಲ್ಲಿ ‘ಝಿರೋ’ ಕಥೆ ಇದೆ ಎಂದ ಅವರು, ಈ ಸಂಬಂಧ ದಾಖಲೆಗಳನ್ನು ಪ್ರದರ್ಶಿಸಿದರು.

ಚಾಮರಾಜಪೇಟೆ, ಶಿವಾಜಿನಗರದಲ್ಲೂ ಡಬಲ್‌ ಎಂಟ್ರಿ:ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿ ಡಬಲ್‌ ಎಂಟ್ರಿ ಬಗ್ಗೆ ಆರೋಪಿಸಿದ್ದಾರೆ. ಚಾಮರಾಜಪೇಟೆ ಪಾರ್ಟ್ ಸಂಖ್ಯೆ 45, ಪಾರ್ಟ್‌ ಸಂಖ್ಯೆ 47ರಲ್ಲಿ ಆಯಿಷಾ ಬಾನು ಹೆಸರಿದೆ. ಶಿವಾಜಿನಗರದ ಪಾರ್ಟ್ ಸಂಖ್ಯೆ 169, ಪಾರ್ಟ್ ಸಂಖ್ಯೆ 11ರಲ್ಲಿ ರೆಹಮತುಲ್ಲಾ ಹೆಸರಿದೆ ಎಂದು ಮತದಾರರ ಪಟ್ಟಿ ತೋರಿಸಿ ರಾಹುಲ್‌ ಗಾಂಧಿಗೆ ಟಾಂಗ್‌ ನೀಡಿದರು.

Read more Articles on