ಮತಗಳವು-ರಾಹುಲ್ ಗಾಂಧಿ ಆರೋಪ ಸತ್ಯ: ಶಾಸಕ ಜೆ.ಎನ್. ಗಣೇಶ್

| Published : Aug 09 2025, 12:02 AM IST

ಸಾರಾಂಶ

ರಾಜ್ಯದಲ್ಲಿ ನಡೆದ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳವು ಆಗಿರುವ ಕುರಿತು ರಾಹುಲ್ ಗಾಂಧಿ ದಾಖಲೆ ಸಮೇತ ಆರೋಪಿಸಿದ್ದು ನೂರಕ್ಕೆ ನೂರು ಸತ್ಯವಾಗಿದೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.

ಕಂಪ್ಲಿ: ರಾಜ್ಯದಲ್ಲಿ ನಡೆದ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳವು ಆಗಿರುವ ಕುರಿತು ರಾಹುಲ್ ಗಾಂಧಿ ದಾಖಲೆ ಸಮೇತ ಆರೋಪಿಸಿದ್ದು ನೂರಕ್ಕೆ ನೂರು ಸತ್ಯವಾಗಿದೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ನಾಲ್ಕರಿಂದ ಐದು ಬಾರಿ ಮತದಾನ ಮಾಡುತ್ತಾರೆ ಎಂದರೆ ಹೇಗೆ? ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ತಿಳಿಯಬೇಕಿದೆ. ರಾಹುಲ್ ಗಾಂಧಿ ಅವರು ಬರೀ ಬಾಯಿ ಮಾತಿನಿಂದ ಆರೋಪಿಸುತ್ತಿಲ್ಲ, ಬದಲಿಗೆ ಸರಿಯಾದ ದಾಖಲೆಗಳನ್ನು ಪ್ರದರ್ಶಿಸಿ ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಗಳವು ಮುಂದುವರಿದರೆ ಆಪಾಯ ತಪ್ಪಿದ್ದಲ್ಲ ಎಂದರು.

ದಸರೆ ರಜಾ ದಿನಗಳಲ್ಲಿ ತಾಪಂ, ಜಿಪಂ ಚುನಾವಣೆ ಜರುಗಲಿದೆ. ಈ ಬಾರಿಯ ಅಧಿವೇಶನದಲ್ಲಿ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ ಕಾಮಗಾರಿ ವಿಚಾರ, ಕ್ಷೇತ್ರದಲ್ಲಿ ಜೋಳ ಖರೀದಿ ಕೇಂದ್ರದ ಷರತ್ತುಗಳ ಸಡಲಿಕೆ ಕುರಿತು ಚರ್ಚಿಸಲಾಗುವುದು. ಈಚೆಗೆ ಉಂಟಾದ ಪ್ರವಾಹದಲ್ಲಿ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯಿದ್ದ ಸ್ಥಿತಿಯನ್ನು ಚಿತ್ರೀಕರಿಸಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ತೋರಿಸಿ, ಸೇತುವೆ ಮುಳುಗಡೆಯಿಂದ ಉಂಟಾಗುವ ಸಮಸ್ಯೆ ಕುರಿತು ವಿವರಿಸಿದ್ದೇನೆ. ನೂತನ ಸೇತುವೆ ನಿರ್ಮಿಸುವಂತೆ ಮನವಿ ಮಾಡಿಕೊಂಡಿರುವೆ. ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಕ್ಕೆ ನಿರಂತರ ಪ್ರಯತ್ನ ನಡೆಸುತ್ತಿರುವೆ ಎಂದರು.

ಕಾಮಗಾರಿಗಳಿಗೆ ಚಾಲನೆ: ಪಟ್ಟಣದ ಷಾ. ಮಿಯಾಚಂದ್ ಹೈಸ್ಕೂಲ್‌ನಲ್ಲಿ ₹35.50 ಲಕ್ಷಗಳಲ್ಲಿ ಜಿ-ಪ್ಲಸ್‌ ಒನ್ ಕೊಠಡಿ ನಿರ್ಮಾಣಕ್ಕೆ, ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ₹1 ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಶಾಸಕ ಜೆ.ಎನ್. ಗಣೇಶ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್ ರೆಹಮಾನ್, ಉಪ ಪ್ರಾಚಾರ್ಯರಾದ ಸುಜಾತಾ, ಇಸಿಒ ಟಿ.ಎಂ. ಬಸವರಾಜ, ದೇವಸಮುದ್ರ ಗ್ರಾಮದ ಮುಖಂಡರಾದ ವೆಂಕೋಬಾ ನಾಯಕ, ಹೊನ್ನೂರಪ್ಪ, ಕೆ. ಷಣ್ಮುಖಪ್ಪ, ಬಿ. ಪಂಪಾಪತಿ, ಕೋರಿ ಚನ್ನಬಸವ, ಕುರಿ ಬಸವರಾಜ, ನೆಲ್ಲೂಡಿ ಬಸವರಾಜ, ಎಚ್. ಗುಂಡಪ್ಪ, ಖಾಜಾಸಾಬ್, ದಂಡಿನ ದೊಡ್ಡಬಸವ ಸೇರಿ ಇತರರಿದ್ದರು.