ಕಾಕ್ರೋಚ್ ಜನತಾ ಪಾರ್ಟಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕಾನೂನುಬಾಹಿರ ಹೋರಾಟ ನಡೆಸುವ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಗೊಳಿಸಿದ್ದು, ಇದು ವ್ಯವಸ್ಥಿತ ಷಡ್ಯಂತ್ರ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಾಕ್ರೋಚ್ ಜನತಾ ಪಾರ್ಟಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕಾನೂನುಬಾಹಿರ ಹೋರಾಟ ನಡೆಸುವ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಗೊಳಿಸಿದ್ದು, ಇದು ವ್ಯವಸ್ಥಿತ ಷಡ್ಯಂತ್ರ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ಕಾಕ್ರೋಚ್ ಜನತಾ ಪಾರ್ಟಿಯವರು ತಾವು ಝೆಂಜೀಗಳು ಎಂದು ಹೇಳಿಕೊಂಡು ಸಮಾಜದಲ್ಲಿ ದೊಂಬಿ ಸೃಷ್ಟಿಸಲು ಮುಂದಾಗಿದ್ದಾರೆ. ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸಹ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಅಯೋಗ ತನ್ನ ಕೆಲಸ ತಾನು ಮಾಡುತ್ತಿದೆ. ಸರ್ಕಾರದ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದಲ್ಲಿ ಇಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ. ಎಸ್ಐಆರ್ ಆಗಿರಬಹುದು, ಇಡಿ ಹೀಗೆ ಎಲ್ಲರ ಮೇಲೂ ಕಾಂಗ್ರೆಸ್ ಮತ್ತು ಅದರ ಮಿತ್ರ ಸಂಸ್ಥೆಗಳು ಅನುಮಾನದ ದೃಷ್ಟಿ ಇಟ್ಟುಕೊಂಡು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿವೆ ಎಂದು ಅರೋಪಿಸಿದರು.

ರಾಹುಲ್ ಗಾಂಧಿ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಬೇಕು ಅಂತಲೇ ನ.1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಇಟ್ಟುಕೊಂಡಿದ್ದಾರೆ. ರಾಹುಲ್ ಅವರಿಗೆ ಕೆಲವು ಯುಟ್ಯೂಬರ್‌ಗಳು ಕೇಂದ್ರ ಸರ್ಕಾರದ ವಿರುದ್ಧ ಪಿತೂರಿ ನಡೆಸಲು ಟ್ರೇನಿಂಗ್ ಕೊಡುತ್ತಿವೆ. ದೇಶದಲ್ಲಿ 70 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಯಾವ ಕೊಡುಗೆ ನೀಡಿದೆ ಎಂದು ಖಾರವಾಗಿ ಪ್ರಶ್ನಿಸಿದರು.

2014ರಿಂದ ದೇಶದಲ್ಲಿ ಕಾಂಗ್ರೆಸ್ ನ ಅವನತಿ ಆರಂಭವಾಗಿದೆ. ದೇಶದ ಕೆಲವೇ ರಾಜ್ಯಗಳಲ್ಲಿ ಇವತ್ತು ಕೈ ಪಕ್ಷ ಅಧಿಕಾರದಲ್ಲಿದ್ದು, ಮುಂದಿನ ದಿನಗಳಲ್ಲಿ ಆ ರಾಜ್ಯಗಳಲ್ಲೂ ಅಧಿಕಾರ ಕಳೆದುಕೊಳ್ಳಲಿದೆ. ದೇಶದ ಜನತೆ ಕೇಂದ್ರದಲ್ಲಿ ಬಿಜೆಪಿ ಮತ್ತು ಎನ್‌ಡಿಎಗೆ ಸ್ಪಷ್ಟ ಬಹುಮತ ನೀಡಿ ದೇಶದ ಅಭಿವೃದ್ಧಿ ಆದೇಶ ಕೊಟ್ಟಿದ್ದಾರೆ. ಅಂಥ ಸರ್ಕಾರವನ್ನು ಕಿತ್ತೆಸೆಯಲು ವಿಪಕ್ಷಗಳು ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿವೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಬರಗಾಲದ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ. ಸಿಎಂ ಡಿಕೆ ಶಿವಕುಮಾರ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲ. ಕಬ್ಬು ಬೆಳಗಾರರ ಸಭೆ ನಡೆಸಿ ಬೆಂಬಲ ಬೆಲೆ ಕೊಡಲು ಹಣವಿಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ‌ ಮುದ್ನಾಳ್, ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಹಿರಿಯ ಮುಖಂಡ ರಾಚನಗೌಡ ಮುದ್ನಾಳ, ದೇವೀಂದ್ರನಾಥ ನಾದ್, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷ್ಮೀಪುತ್ರ ಮಾಲಿಪಾಟೀಲ್, ಶ್ರೀಧರ ಸಾಹುಕಾರ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ್ ಕಡೆಚೂರ ಇದ್ದರು.

----ಫೋಟೊ----

30ವೈಡಿಆರ್‌6

ಯಾದಗಿರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು. ಬಸವರಾಜ ವಿಭೂತಿಹಳ್ಳಿ, ಲಲಿತಾ ಅನಪುರ, ಮಹೇಶರಡ್ಡಿ‌ ಮುದ್ನಾಳ್‌ ಇತರರಿದ್ದರು.