ಒಳಮೀಸಲು ಜಾರಿ ಮೀನಾಮೇಷ ಖಂಡಿಸಿ ಅ.3ಕ್ಕೆ ರಾಯಚೂರು ಜಿಲ್ಲಾ ಬಂದ್

| Published : Sep 27 2024, 01:23 AM IST

ಸಾರಾಂಶ

Raichur district bandh for 3 days to condemn internal reserve enforcement

-ಪರಿಶಿಷ್ಟ ಜಾತಿ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ ಮುಖಂಡ ಅಂಬಣ್ಣ ಅರೋಲಿಕರ್‌-------ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮೀನಮೇಷ ಅನುಸರಿಸುತ್ತಿರುವುದನ್ನು ಖಂಡಿಸಿ ಅ.3ರಂದು ರಾಯಚೂರು ಜಿಲ್ಲಾ ಬಂದ್‌ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಪರಿಶಿಷ್ಟ ಜಾತಿ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ ಮುಖಂಡ ಅಂಬಣ್ಣ ಅರೋಲಿಕರ್‌ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ಮೂರ್ನಾಲ್ಕು ದಶಕಗಳಿಂದ ನಿರಂತರವಾಗಿ ಕಾನೂನು ಹಾಗೂ ಬೀದಿ ಹೋರಾಟ ಕೊನೆಘಟ್ಟಕ್ಕೆ ಬಂದು ತಲುಪಿದೆ. ಒಳಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ಸಹ ಅಗತ್ಯ ಸೂಚನೆ ನೀಡಿದೆ. ಆದರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರವು ಎರಡು ತಿಂಗಳಿನಿಂದ ಯಾವುದೇ ರೀತಿ ಕ್ರಮ ವಹಿಸದೇ ನಿರ್ಲಕ್ಷ್ಯ ತೋರುತ್ತಾ ಬಂದಿದೆ. ಇದನ್ನು ಖಂಡಿಸಿ ಎರಡನೇ ಹಂತದ ಹೋರಾಟ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಈಗಾಗಲೇ ಮಸ್ಕಿಯಲ್ಲಿ ಬೃಹತ್‌ ಹೋರಾಟ ನಡೆಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು. ಬರುವ ಅ.2 ರೊಳಗೆ ಬೇಡಿಕೆ ಈಡೇರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಅ.3ರಂದು ರಾಯಚೂರು ಜಿಲ್ಲೆಯ ಎಲ್ಲ ಏಳು ತಾಲೂಕು ಬಂದ್‌ ಮಾಡಿ ಪ್ರತಿಭಟಿಸಲಾಗುವುದು. ಇಷ್ಟೇ ಅಲ್ಲದೇ ಹೋರಾಟ ಕಲ್ಯಾಣ ಕರ್ನಾಟಕ ಸೇರಿ ಇಡೀ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಎಂ.ವಿರೂಪಾಕ್ಷಿ, ಪಿ. ಯಲ್ಲಪ್ಪ, ಕೆ.ಪಿ. ಅನಿಲ ಕುಮಾರ, ಶಂಕ್ರಪ್ಪ ಹೊಸಮನಿ, ಜೆ.ಬಿ.ರಾಜು, ವಿಕ್ರಮ, ವೀರೇಶ ಇದ್ದರು.-------------------

26ಕೆಪಿಆರ್‌ಸಿಆರ್‌ 03ಅಂಬಣ್ಣ ಅರೋಲಿಕರ್