ಸ್ವಾತಂತ್ರ್ಯ ಹೋರಾಟಕ್ಕೆ ರಾಯಚೂರು ರೈಲ್ವೆ ನಿಲ್ದಾಣ ಸ್ಫೂರ್ತಿ: ಡಿ. ಪಂಪಣ್ಣ

| Published : Jan 08 2024, 01:45 AM IST

ಸ್ವಾತಂತ್ರ್ಯ ಹೋರಾಟಕ್ಕೆ ರಾಯಚೂರು ರೈಲ್ವೆ ನಿಲ್ದಾಣ ಸ್ಫೂರ್ತಿ: ಡಿ. ಪಂಪಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನಗರಕ್ಕೆ ಗಾಂಧೀಜಿ ಬಂದಿದ್ದ ಸಂದರ್ಭ ಮೆಲಕು ಹಾಕಿದ ಸ್ವತಂತ್ರ ಹೋರಾಟಗಾರ ಡಿ.ಹಂಪಣ್ಣ. ರಾಯಚೂರಿನ ಕೇಂದ್ರ ರೈಲ್ವೆ ನಿಲ್ದಾಣದ 152 ನೇ ಮಹೋತ್ಸವದ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ಥಳೀಯ ರೈಲ್ವೆ ನಿಲ್ದಾಣ ಸ್ವಾತಂತ್ರ್ಯ ಹೋರಾಟಕ್ಕೆ ಈ ಭಾಗದ ಜನರಿಗೆ ಸ್ಫೂರ್ತಿಯಾಗಿತ್ತು. ಮಹಾತ್ಮಗಾಂಧಿ ಅವರು ಈ ಭಾಗದ ಹೋರಾಟಗಾರರಿಗೆ ಕಿಚ್ಚು ಹೊತ್ತಿಸಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರ ಡಿ.ಪಂಪಣ್ಣ ಅಭಿಪ್ರಾಯಪಟ್ಟರು.

ಸ್ಥಳೀಯ ಕೇಂದ್ರ ರೈಲ್ವೆ ನಿಲ್ದಾಣದ 152ನೇ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಯಾಣಿಸುವಾಗ ಇಲ್ಲಿ ಕೆಲ ಕಾಲ ಕಳೆದಿದ್ದರು. ಗುಂಪುಗುಂಪಾಗಿ ಸೇರಿದರೆ ಬ್ರಿಟೀಷರು ದಂಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿಯೂ ಗಾಂಧೀಜಿ ಬರುವ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ನನಗೆ 10 ಜನರನ್ನು ಕರೆತರುವ ಸೂಚನೆಯಿತ್ತು. 200 ಜನರನ್ನು ಕರೆ ತಂದಿದ್ದೆ. ಗಾಂಧೀಜಿಯವರ ಮಾತು ಕೇಳಿದ ನಾನು ಕಣ ಕಣಕಣದಲ್ಲೂ ದೇಶಪ್ರೇಮ ಬೆರೆಸಿಕೊಂಡಿದ್ದೆ ಎಂದು ಮೆಲಕು ಹಾಕಿದರು.

ಸ್ವಾತಂತ್ರ್ಯ ಬಂದು ಎರಡು ಪೀಳಿಗೆ ನೋಡಿದ್ದೇನೆ. ಅನೇಕ ಬದಲಾವಣೆ ಕಂಡಿದ್ದೇನೆ. ಇಂದಿನ ಯುವಕರು ಪುಣ್ಯವಂತರು. ಸ್ವಾತಂತ್ರ್ಯಕ್ಕಾಗಿ ಹೋರಾಡುವಂತಿಲ್ಲ. ಆದರೆ, ದೇಶದ ಕಾಯ್ದೆ, ಕಾನೂನುಗಳಿಗೆ ಗೌರವಿಸಿ ನಡೆದರೆ ಸಾಕು ಅದೇ ದೇಶ ಸೇವೆ. ಎಲ್ಲರಿಗೂ ವಿಚಾರ ಶಕ್ತಿ ಇದೆ. ಒಳ್ಳೆಯ ನಡೆತೆ ರೂಪಿಸಿಕೊಳ್ಳಬೇಕು. ಹಿರಿಯರು ಮೂಲಸ್ಥಂಬ. ಅವರಿಗೆ ಗೌರವ ನೀಡಬೇಕು. ಅವರು ಬಂಗಾರದ ಗಣಿ. ಅದರ ಫಲ ನಿಮಗೆ ಸಿಗುತ್ತದೆ. ಅಪಾರ ಅನುಭವ ಪಡೆದಿರುತ್ತಾರೆ. ಅವರವಿಚಾರ ತಿಳಿದುಕೊಳ್ಳಬೇಕು ಎಂದರು.

ಗುಂತಕಲ್ ವಿಭಾಗೀಯ ಹಿರಿಯ ಎಂಜಿನಿಯರ್ ಕಿಷ್ಟಪ್ಪ ಮಾತನಾಡಿ, ರೈಲ್ವೆ ಸಂಚಾರ ಅನೇಕ ಕುಟುಂಬಗಳಿಗೆ ಜೋಡಿಸುವ ಜೊತೆಗೆ ಸಂಬಂಧಗಳ ಮಹತ್ವ ತಿಳಿಸಲು ಅನುಕೂಲವಾಗಿದೆ. ಸಾರ್ವಜನಿಕ ಸೇವಾ ವಲಯವಾಗಿದೆ. ಅನೇಕರಿಗೆ ಉದ್ಯೋಗ, ಜೀವನದ ಭದ್ರತೆ ನೀಡಿದೆ. ಪ್ರಯಾಣಿಕರು ಸ್ವಚ್ಛತೆ ಕಾಪಾಡಿ ಜವಾಬ್ದಾರಿ ನಾಗರಿಕರಾಗಬೇಕು ಎಂದರು.

ರೈಲ್ವೆ ಬೋರ್ಡ್ ಮಾಜಿ ಸದಸ್ಯ ಬಾಬುರಾವ್ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಅಕ್ಕಿ, ಹತ್ತಿ ಗಿರಣಿಗಳು ಅನೇಕ ಕೈಗಾರಿಕೆಗಳು ಇದ್ದು ಸರ್ಕಾರಕ್ಕೆ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸೌಲಭ್ಯ ನೀಡಬೇಕು. ಇಲ್ಲಿ ಅನೇಕ ಕಾಮಗಾರಿಗಳು ಬಾಕಿ ಇದೆ ಶೀಘ್ರವೇ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ರೈಲ್ವೆ ಅಂದರೆ ಬಡವರು ಮಧ್ಯಮ, ವರ್ಗದವರು ಹೆಚ್ಚು ಪ್ರಯಾಣ ಮಾಡುತ್ತಾರೆ. ಆಧುನಿಕ ಸೌಕರ್ಯ ಕಲ್ಪಿಸಬೇಕು. ಕೇವಲ 3 ಪ್ಲಾಟ್ ಫಾರ್ಮ್ ಇದ್ದು 4, 5 ಪ್ಲಾಟ್ ಫಾರ್ಮ್ ನಿರ್ಮಿಸಬೇಕು. ರಾಯಚೂರು ಹಿಂದುಳಿದ ಜಿಲ್ಲೆಯಾಗಿದ್ದು, ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.

ಸ್ಟೇಶನ್ ಮ್ಯಾನೇಜರ್ ಅಶೋಕ ಮೇನಾ, ಕಮರ್ಷಿಯಲ್ ಮ್ಯಾನೇಜರ್ ಎಸ್ ಜಿ ಚೌಹಾಣ್, ರಾಯಚೂರು ಸ್ಟೇಷನ್ ಕನ್ಸಲ್ಟೇಟಿವ್ ಕಮಿಟಿ ಸದಸ್ಯ ಜಂಬಣ್ಣ, ,ಎ. ಚಂದ್ರಶೇಖರ, ಎಂ. ಡಿ ಹನೀಫ್ ಶೇಖ್, ಕೆ. ಮಹೇಶ, ಅಫ್ರುದ್ದೀನ್, ವಿ.ಎನ್ ಕೊಂಡ, ಎಂ. ಮಾರೆಪ್ಪ, ಸಂಜೀವ, ಶ್ರೀಧರ ಬಾಬು, ಇದ್ದರು.