ಗ್ರಾಪಂ ತೆರಿಗೆ ವಸೂಲಿಯಲ್ಲಿ ರಾಯಚೂರು ರಾಜ್ಯಕ್ಕೆ ಫಸ್ಟ್

| Published : Dec 23 2024, 01:03 AM IST

ಗ್ರಾಪಂ ತೆರಿಗೆ ವಸೂಲಿಯಲ್ಲಿ ರಾಯಚೂರು ರಾಜ್ಯಕ್ಕೆ ಫಸ್ಟ್
Share this Article
  • FB
  • TW
  • Linkdin
  • Email

ಸಾರಾಂಶ

179 ಗ್ರಾಪಂಗಳಲ್ಲಿ ವಿಶೇಷ ಅಭಿಯಾನ । ಶೇ.75.57ರಷ್ಟು ಸಾಧನೆ । ಯಾದಗಿರಿಗೆ ಕೊನೆಯ ಸ್ಥಾನ

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ತೀರದ ತಲೆ ನೋವಾಗಿದ್ದ ಗ್ರಾಪಂ ತೆರಿಗೆ ಬಾಕಿ ವಸೂಲಾತಿ ಪ್ರಮಾಣವು ದಿನೇ ದಿನೆ ಹೆಚ್ಚಾಗುತ್ತಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿ ಗ್ರಾಪಂ ತೆರಿಗೆ ವಸೂಲಿಯಲ್ಲಿ ರಾಯಚೂರು ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಪಕ್ಕದ ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಒಟ್ಟು 5,949 ಗ್ರಾಪಂಗಳಲ್ಲಿ ಒಟ್ಟು ₹236.49 ಕೋಟಿ ತೆರಿಗೆ ಬಾಕಿಯಲ್ಲಿ ಪ್ರಸಕ್ತ ಸಾಲಿನ ಬೇಡಿಕೆಯಂತೆ 163.71 ಕೋಟಿ ಸೇರಿ 400.21 ಕೋಟಿ ಬೇಡಿಕೆಯಲ್ಲಿ 833.44 ಕೋಟಿ ಸಂಗ್ರಹವಾಗಿದ್ದು, ಇನ್ನು 316.33 ಕೋಟಿ ಬಾಕಿಯಿದ್ದು ಶೇ.50.91 ರಷ್ಟು ವಸೂಲಿಯಲ್ಲಿ ಸಾಧನೆ ಮಾಡಲಾಗಿದೆ. ಇನ್ನು 20.83 ರಷ್ಟು ಗುರಿ ಹೊಂದಲಾಗಿದೆ.

ರಾಯಚೂರು ಜಿಲ್ಲೆಯ 179 ಗ್ರಾಪಂಗಳಲ್ಲಿ ಒಟ್ಟು ಬಾಕಿ ₹27.06 ಕೋಟಿ ಹಾಗೂ ವರ್ಷದ ವಸೂಲಾತಿ ಗುರಿ 16.01 ಕೋಟಿ ಸೇರಿದಂತೆ ಒಟ್ಟು 43.08 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಅದರಲ್ಲಿ ₹12.10 ಕೋಟಿ ತೆರಿಗೆ ವಸೂಲಿ ಮಾಡಿ ಶೇ.75.57 ರಷ್ಟು ಸಾಧನೆ ಮಾಡುವುದರ ಮುಖಾಂತರ ಗ್ರಾಪಂ ತೆರಿಗೆ ವಸೂಲಿನಲ್ಲಿ ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಶೇ.26.36 ಸಾಧನೆ ಹೊಂದಿರುವ 122 ಗ್ರಾಪಂಗಳ ಪಕ್ಕದ ಯಾದಗಿರಿ ಜಿಲ್ಲೆಯು ತೆರಿಗೆ ವಸೂಲಿಯಲ್ಲಿ ಕೊನೆ ಸ್ಥಾನ ಪಡೆದುಕೊಂಡಿದೆ.

*ವಿಶೇಷ ಅಭಿಯಾನದ ಫಲ: ಹಲವಾರು ವರ್ಷಗಳಿಂದ ಗ್ರಾಪಂ ತೆರಿಗೆ ವಸೂಲಾತಿ ತೀವ್ರ ಮಂದಗತಿಯಲ್ಲಿ ಸಾಗಿದ್ದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಸಿದ ವಿಶೇಷ ಅಭಿಯಾನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಮೂರು ಹಂತಗಳಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಗ್ರಾಪಂ ಅಧಿಕಾರಿ, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಜನರ ಮನವೊಲಿಸಿ ತೆರಿಗೆ ವಸೂಲಿಯನ್ನು ಮಾಡುತ್ತಿದ್ದು, ಇದರಿಂದಾಗಿ ಗ್ರಾಪಂಗಳ ಆರ್ಥಿಕ ಬಲವು ಹೆಚ್ಚಾಗತೊಡಗಿದೆ.

*ಮಂದಗತಿ ಸಾಧನೆಯ 5 ಜಿಲ್ಲೆಗಳು

ಗ್ರಾಪಂ ತೆರಿಗೆ ವಸೂಲಿಯಲ್ಲಿ ಮಂದಗತಿ ಪ್ರಗತಿಯಲ್ಲಿ 122 ಗ್ರಾಪಂಗಳನ್ನು ಹೊಂದಿರುವ ಯಾದಗಿರಿ ಶೇ.26.83 ರಷ್ಟು ಸಾಧನೆ ತೋರಿ ಕೊನೆ ಸ್ಥಾನದಲ್ಲಿದೆ. ಉಳಿದಂತೆ 137 ಗ್ರಾಪಂಗಳ ವಿಜಯಪುರ (ಶೇ.31.38) 256 ಗ್ರಾಪಂಗಳ ಮೈಸೂರು (ಶೇ.33.07) 100 ಗ್ರಾಪಂಗಳ ಬಳ್ಳಾರಿ (ಶೇ.37.48) ಮತ್ತು 130 ಗ್ರಾಪಂಗಳನ್ನು ಹೊಂದಿರುವ ಚಾಮರಾಜ ನಗರ ಶೇ.38.12 ರಷ್ಟು ತೆರಿಗೆ ವಸೂಲಿಯಲ್ಲಿ ಸಾಧನೆ ತೋರಿವೆ.

ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲಿ ಶೇ.39.71 ರಷ್ಟು ಸಾಧನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಗ್ರಾಪಂ ತೆರಿಗೆ ವಸೂಲಿಯಲ್ಲಿ 26ನೇ ಸ್ಥಾನದಲ್ಲಿದೆ. ಒಟ್ಟು 261 ಗ್ರಾಪಂನ್ನು ಹೊಂದಿರುವ ಕಲಬುರಗಿ ಜಿಲ್ಲೆಯು ಬರೀ ಶೇ.39.71ರಷ್ಟು ಸಾಧನೆ ಮಾಡಿದೆ. ಇದರೊಟ್ಟಿಗೆ ರಾಜ್ಯದಲ್ಲಿ ಅತೀ ಹೆಚ್ಚು 500 ಗ್ರಾಪಂಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ (ಶೇ 51.64) ಮತ್ತು 330 ಗ್ರಾಪಂಗಳ ತುಮಕೂರು (ಶೇ.45.69) ಮತ್ತು 264 ಗ್ರಾಪಂ ಹೊಂದಿದ ಹಾಸನ ಜಿಲ್ಲೆಯು (ಶೇ.40.10) ರಷ್ಟು ತೆರಿಗೆ ವಸೂಲಿಯಲ್ಲಿ ಸಾಧನೆ ಮಾಡಿದೆ.

ತೆರಿಗೆ ವಸೂಲಿಯ ಟಾಪ್‌ 5 ಜಿಲ್ಲೆಗಳು

ಗ್ರಾಪಂ ತೆರಿಗೆ ವಸೂಲಿಯಲ್ಲಿ ರಾಯಚೂರು ಜಿಲ್ಲೆ ಶೇ.75.57 ರಷ್ಟು ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದರೆ. 229 ಗ್ರಾಪಂಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ (ಶೇ.71.86) ಸಂಗ್ರಹದ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 262 ಗ್ರಾಪಂಗಳ ಶಿವಮೊಗ್ಗ (ಶೇ.69.79), 226 ಗ್ರಾಪಂಗಳ ಚಿಕ್ಕಮಗಳೂರು (ಶೇ.67.12) ಮತ್ತು 101 ಗ್ರಾಪಂಗಳ ಬೆಂಗಳೂರು ಗ್ರಾಮಾಂತರ ಜಿಲ್ಲೆ (ಶೇ.66.43) ರಷ್ಟು ಸಾಧನೆ ಮಾಡಿದೆ.