ಸಾರಾಂಶ
ಪಟ್ಟಣದ ಹೊರವಲಯದ ನಾಗನಕಲ್ ಬಳಿ ಜಿಲ್ಲಾ ಪೊಲೀಸ್ ಕಚೇರಿ ವಿಶೇಷ ತಂಡವೊಂದು ಇಸ್ಪೇಟ್ ಅಡ್ಡೆಯ ಮೇಲೆ ದಾಳಿ ಮಾಡಿ ೪೨ ದ್ವಿಚಕ್ರ ವಾಹನ, ೧೧ ಮೊಬೈಲ್ ಜಪ್ತಿ ಮಾಡಿ ₹೫.೪೭ ಲಕ್ಷ ವಶಪಡಿಸಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕಾರಟಗಿ
ಪಟ್ಟಣದ ಹೊರವಲಯದ ನಾಗನಕಲ್ ಬಳಿ ಜಿಲ್ಲಾ ಪೊಲೀಸ್ ಕಚೇರಿ ವಿಶೇಷ ತಂಡವೊಂದು ಇಸ್ಪೇಟ್ ಅಡ್ಡೆಯ ಮೇಲೆ ದಾಳಿ ಮಾಡಿ ೪೨ ದ್ವಿಚಕ್ರ ವಾಹನ, ೧೧ ಮೊಬೈಲ್ ಜಪ್ತಿ ಮಾಡಿ ₹೫.೪೭ ಲಕ್ಷ ವಶಪಡಿಸಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.ಕೊಪ್ಪಳ ಎಸ್ಪಿ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿನ ಸಿಇಎನ್ ಮತ್ತು ಡಿಸಿಆರ್‌ಬಿ ಪೊಲೀಸರು ಈ ಕಾರ್ಯಾಚರಣೆ ಮಾಡಿದ್ದು, ತಾಲೂಕಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದ ಹೊರವಲಯದಲ್ಲಿನ ನಾಗನಕಲ್ ಬಳಿಯ ಕಲ್ಲುಕ್ವಾರಿಯೊಂದರಲ್ಲಿ ಬಹು ದಿನಗಳಿಂದ ಭಾರಿ ಪ್ರಮಾಣದಲ್ಲಿ ಇಸ್ಟೇಟ್ ಆಟ ನಡೆಯುತ್ತಿತ್ತು. ಈ ಅಡ್ಡೆಯ ಮೇಲೆ ಪೊಲೀಸರ ವಿಶೇಷ ತಂಡ ದಾಳಿ ಮಾಡಿ ಒಟ್ಟು ೮ ಮಂದಿ ಜೂಜುಕೋರರನ್ನು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ೪೨ ಬೈಕ್, ೧೧ ಮೊಬೈಲ್ ಜಪ್ತಿ ಮಾಡಿದ್ದು ₹೫.೪೭ ಲಕ್ಷ ವಶಪಡಿಸಿಕೊಂಡಿದ್ದಾರೆ.ಸಿಇಎನ್ ಸಿಪಿಐ ಮಹಾಂತೇಶ ಸಜ್ಜನ್ ಮತ್ತು ಶಿವರಾಜ ಇಂಗಳೆ ನೇತೃತ್ವದ ತಂಡ ದಾಳಿ ಮಾಡಿದೆ. ಜೂಜು ಅಡ್ಡೆ ನಡೆಸುವ ದಂಧೆಕೋರರು, ಹೊರ ರಾಜ್ಯ, ನೆರೆ ಜಿಲ್ಲೆಯಿಂದ ಜೂಜುಕೋರರನ್ನು ಕರೆಯಿಸಿ, ಇಸ್ಪೀಟ್ ಆಡಿಸುತ್ತಿದ್ದರು ಎಂಬ ಅಧಿಕೃತ ಮೂಲಗಳು ತಿಳಿಸಿವೆ.
ನೆರೆ ರಾಜ್ಯದಿಂದ ಜೂಜಾಡಲು ಬಂದಿದ್ದ ಜೂಜುಕೋರರು ಲಕ್ಷಾಂತರ ರು. ಹಣದೊಂದಿಗೆ ಬಂದು ಆಡುತ್ತಿದ್ದರು. ಪ್ರತಿನಿತ್ಯ ಭಾರಿ ಮೊತ್ತದ ನಗದು ವಹಿವಾಟು ಆಗುತ್ತಿತ್ತು. ಈ ಬಗ್ಗೆ ನಿಖರ ಮಾಹಿತಿ ಮೇರೆಗೆ ಕೊಪ್ಪಳದ ಪೊಲೀಸರ ತಂಡ ಸಿನಿಮೀಯ ಮಾದರಿಯಲ್ಲಿ ದಾಳಿ ಮಾಡಿದ್ದಾರೆ. ೪೨ ದ್ವಿಚಕ್ರ ವಾಹನಗಳು ಪತ್ತೆಯಾಗಿದ್ದರಿಂದ ಅಡ್ಡೆಯಲ್ಲಿ ಎಷ್ಟು ಜನರಿದ್ದರು ಎನ್ನುವ ಅಂದಾಜು ಪೊಲೀಸರಿಗೆ ಇನ್ನು ಸಿಗಬೇಕಾಗಿದೆ. ಬಹುತೇಕ ಆರೋಪಿಗಳು ಪರಾರಿಯಾಗಿದ್ದಾರೆ. ಹಲವರು ಸ್ಥಳದಲ್ಲಿಯೇ ಹಣ ಬಿಟ್ಟು ಓಡಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.