ಸಾರಾಂಶ
ಕಲಘಟಗಿ: ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಮಳಿಗೆ ಹಾಗೂ ಕಾನೂನು ಬಾಹಿರವಾಗಿ ಕಟ್ಟಡದಲ್ಲಿ ಎಚ್‌ಪಿ ಗ್ಯಾಸ್ ಸಿಲಿಂಡರ್ ಶೇಖರಣೆ ಮಾಡಿದ ಮಳಿಗೆಗಳ ಮೇಲೆ ರಾಜ್ಯ ಆಹಾರ ಆಯೋಗದ ತಂಡ ಮಂಗಳವಾರ ದಾಳಿ ನಡೆಸಿ 17 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್. ಕೃಷ್ಣ ನೇತೃತ್ವದ ತಂಡ ಮಂಗಳವಾರ ಪಟ್ಟಣಕ್ಕೆ ಭೇಟಿ ನೀಡಿ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಅಕ್ಕಿ ಓಣಿಯಲ್ಲಿರುವ ರಾಜು ಶೆಟ್ಟಿ ಎಂಬುವವರು ಅನ್ನಭಾಗ್ಯ ಅಕ್ಕಿ ದಾಸ್ತಾನು ಮಾಡಿದ ಅಂಗಡಿ ಮೇಲೆ ದಿಢೀರನೆ ದಾಳಿ ನಡೆಸಿತು. ಮೊದಲೇ ಮಾಹಿತಿ ತಿಳಿದು ಅಂಗಡಿ ಮಾಲೀಕ ಬಾಗಿಲಿಗೆ ಬೀಗ ಜಡಿದು ಹೋಗಿದ್ದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಅನುಮತಿ ಮೇರೆಗೆ ಅಂಗಡಿ ಬೀಗ ಮುರಿದು ಒಳಗೆ ದಾಸ್ತಾನು ಮಾಡಿದ್ದ 17 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದು ಸೀಜ್ ಮಾಡಲಾಗಿದೆ.
ನ್ಯಾಯಬೆಲೆ ಅಂಗಡಿಗಳ ಪರಿಶೀಲನೆ: ಇದಕ್ಕೂ ಮೊದಲು ಬೆಳಗ್ಗೆ ಪಟ್ಟಣದಲ್ಲಿರುವ ತಾಲೂಕಿನ ರಾಜ್ಯ ಆಹಾರ ನಾಗರಿಕ ಸಗಟು ಮಳಿಗೆಗೆ ಭೇಟಿ ಮಾಡಿ 4. 50 ಕ್ವಿಂಟಲ್ ಅಕ್ಕಿ ಹೆಚ್ಚುವರಿ ದಾಸ್ತಾನು, 2 ಹಾಗೂ 5 ನಂಬರ ನ್ಯಾಯ ಬೆಲೆ ಅಂಗಡಿಯಲ್ಲಿ 2 ಕ್ವಿಂಟಲ್ ಅಕ್ಕಿ ದಾಸ್ತಾನು, ನ್ಯಾಯ ಬೆಲೆ ಅಂಗಡಿ 52 ರಲ್ಲಿ ಗ್ರಾಹಕರಿಂದ ₹30 ರಿಂದ 40 ಹಣ ವಸೂಲಿ ಮಾಡುತ್ತಿದ್ದ ದೂರಿನ ಮೇರೆಗೆ ಎಲ್ಲ ಅಂಗಡಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್. ಕೃಷ್ಣ ತಿಳಿಸಿದರು.ಲೋಕ ಪೂಜ್ಯ ಎಚ್.ಪಿ. ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಸಿಲೆಂಡರ್ ಶೇಖರಣೆ ಮಾಡಲು ಅನುಮತಿ ಪಡೆದಿರುವುದು ತಾಲೂಕಿನ ಅರಳಿಹೊಂಡ ಗ್ರಾಮದಲ್ಲಿ. ಆದರೆ, ಪಟ್ಟಣದಲ್ಲಿ ಕಾನೂನು ಬಾಹಿರ ಶೇಖರಣೆ ಮಾಡಿದ ಮಳಿಗೆಗೆ ಬೀಗ ಜಡಿದು ಅನುಮತಿ ಪಡೆದ ಸ್ಥಳದಿಂದ ಗ್ಯಾಸ್ ಪೂರೈಸುವವರಿಗೆ ಬೀಗ ನೀಡುವುದಿಲ್ಲ ಎಂದು ತಾಕೀತು ಮಾಡಿದರು.
ಮುಂಡಗೋಡ ಹತ್ತಿರದ ದುರ್ಗಾ ಆಗ್ರೋ ಪ್ರಾಡಕ್ಟ್ ಅಕ್ಕಿ ಮಿಲ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಹೆಚ್ಚಿಗೆ ಅಕ್ಕಿ ದಾಸ್ತಾನು ಹಿನ್ನಲೆ ನೋಟೀಸ್ ನೀಡಲಾಯಿತು.ಸರ್ಕಾರ ಬಡವರ ಹಸಿವು ನಿಗಿಸಲು ಅನ್ನಭಾಗ್ಯ ಅಕ್ಕಿ ವಿತರಣೆ ಮಾಡುತ್ತಿದೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವದು ತಪ್ಪು ವ್ಯಾಪಾರಸ್ಥರು ಕೂಡಾ ಜನರಿಂದ ಅಕ್ಕಿ ಖರೀದಿಸುವದು ಕಾನೂನು ಬಾಹಿರ ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕಾರ್ಯಾಚರಣೆಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತರಾವ್, ಮಾರುತಿ ದೊಡ್ಡಲಿಂಗಣ್ಣವರ, ರೋಹಿಣಿ ಪ್ರಿಯಾ, ವಿಜಯಲಕ್ಷ್ಮಿ, ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಚನ್ನಬಸಪ್ಪ ಕೊಡ್ಲಿ, ಸಹಾಯಕ ನಿರ್ದೇಶಕ ಎಚ್.ಡಿ. ಪಾಟೀಲ, ವಸುಂದರಾ ಹೆಗಡೆ, ಲಕ್ಷ್ಮೀ ಎಸ್.ಜೆ ಇದ್ದರು.