ಸಾರಾಂಶ
ಗದಗ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಡಿತರ ಅಕ್ಕಿ ಪ್ರಕರಣ ಗದಗ ಜಿಲ್ಲೆಯಲ್ಲಿಯೂ ಸದ್ದು ಮಾಡುತ್ತಿದ್ದು, ಮುಂಡರಗಿ ತಾಲೂಕಿನ ಶಿರೋಳ, ಕದಾಂಪುರ ಮತ್ತು ಡೋಣಿ ಗ್ರಾಮಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆ ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ದಂಧೆ ನಡೆಸುವ ದೊಡ್ಡ ದೊಡ್ಡ ಕುಳಗಳಿಗೆ ಆಘಾತ ಉಂಟು ಮಾಡಿದೆ.ಆಹಾರ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ್ ನೇತೃತ್ವದಲ್ಲಿ ಕದಾಂಪುರನಲ್ಲಿ ನಡೆದ ದಾಳಿಯಲ್ಲಿ, ಮನೆಯ ಚಾವಣಿಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಕ್ವಿಂಟಾಲ್ (61 ಚೀಲ) ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ್ದ ವ್ಯಕ್ತಿ ತಪ್ಪಿಸಿಕೊಂಡಿದ್ದು, ತೂಕದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
ಶಿರೋಳ ಗ್ರಾಮದಲ್ಲಿ ಬೂದಪ್ಪ ಕುರಿ ಎಂಬುವವರಿಗೆ ಸೇರಿದ 93 ಕ್ವಿಂಟಾಲ್ (203 ಚೀಲ) ಪಡಿತರ ಅಕ್ಕಿ ಪತ್ತೆಯಾಗಿದೆ. ಈ ದಾಳಿಯಲ್ಲಿ ಗದಗ ಗ್ರಾಮೀಣ ಆಹಾರ ನಿರೀಕ್ಷಕ ಎಂ.ಎಸ್. ಹಿರೇಮಠ, ಮುಂಡರಗಿ ತಾಲೂಕು ಆಹಾರ ನಿರೀಕ್ಷಕ ಶಿವರಾಜ ಆಲೂರು ಮತ್ತು ಪೊಲೀಸರು ಭಾಗವಹಿಸಿದ್ದರು.ಡೋಣಿ ಗ್ರಾಮದಲ್ಲಿ ಶಂಕರಪ್ಪ ಮೇಟಿ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 40 ಕ್ವಿಂಟಲ್ (95 ಚೀಲ) ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡಿರುವ ಅಕ್ಕಿಯ ಒಟ್ಟು ಮೌಲ್ಯ ₹4 ಲಕ್ಷಕ್ಕೂ ಅಧಿಕವಾಗಿದೆ. ಬಡವರಿಗೆ ತಲುಪಬೇಕಾದ ಅಕ್ಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿರುವುದು ಆಘಾತಕಾರಿಯಾಗಿದೆ.
ದಾಳಿ ನಡೆದು ಹಲವಾರು ಗಂಟೆಗಳಾದರೂ ಸಂಬಂಧಿಸಿದ ಅಧಿಕಾರಿಗಳು ಇನ್ನೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಇಷ್ಟು ದೊಡ್ಡ ಪ್ರಮಾಣದ ಅಕ್ರಮ ಕಂಡುಬಂದರೂ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.;Resize=(128,128))
;Resize=(128,128))
;Resize=(128,128))