ಸಾರಾಂಶ
ರೈಲು ಯೋಜನೆ ನಿಗದಿತ ಅವಧಿಯಲ್ಲಿ ಮುಗಿಸಿ: ಸಚಿವ
ಕನ್ನಡಪ್ರಭ ವಾರ್ತೆ ಆನೇಕಲ್
ರೈಲು ಯೋಜನೆಗಳು ಪ್ರಯಾಣಿಕರು ಮೆಚ್ಚುವಂತೆ ಇದ್ದಲ್ಲಿ ನೂರಾರು ಕೋಟಿ ರೂಪಾಯಿ ಬಂಡವಾಳ ಸಾರ್ಥಕವಾಗುತ್ತದೆ. ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಯನ್ನು ತ್ವರತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಕೇಂದ್ರ ಸಾಮಾಜಿಕ ಹಾಗೂ ಸಬಲೀಕರಣ ಮಂತ್ರಿ ಎ.ನಾರಾಯಣಸ್ವಾಮಿ ರೈಲ್ವೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ಅವರು ಆನೇಕಲ್ ರೈಲು ನಿಲ್ದಾಣದ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿ, ರೈಲು ನಿಲ್ದಾಣವನ್ನು ಮುಖ್ಯ ರಸ್ತೆಗೆ ಸಮೀಪ ಮಾಡಬೇಕೆಂದು ಸೂಚಿಸಿದರು.
ಸಚಿವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಮುಖಂಡರು ಹಾಗೂ ಕೆಲ ಪತ್ರಕರ್ತರು ಆನೇಕಲ್ ರೈಲು ನಿಲ್ದಾಣದಲ್ಲಿನ ಹಲವು ಲೋಪ ಮತ್ತು ನಿರ್ಲಕ್ಷ್ಯ ಧೋರಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಎಲ್ಲವನ್ನೂ ಆಲಿಸಿದ ಸಚಿವರು, ಅಧಿಕಾರಿಗಳಿಗೆ ಪಟ್ಟಿ ಮಾಡಿಕೊಳ್ಳುವಂತೆ ತಿಳಿಸಿ, ಮುಖ್ಯ ರಸ್ತೆಯಿಂದ ಹಾಲಿ ನಿಲ್ದಾಣದವರೆಗೆ ಒಂದು ಕಿಮೀ ರಸ್ತೆ ಅಗಲೀಕರಣ, ಬೀದಿ ದೀಪ ಅಳವಡಿಕೆ, ಸುಗಮ ವಾಹನ ಸಂಚಾರಕ್ಕೆ ರಸ್ತೆಯ ಜೊತೆಗೆ, ಪಾದಚಾರಿಗಳಿಗೆ ಅನುಕೂಲವಾಗುವಂತೆ ವಿಶಾಲ ಮಾರ್ಗವನ್ನು ರಚಿಸಲು ತಿಳಿಸಿದರು.ಅಧಿಕಾರಿಗಳಾದ ಆರ್.ಕೆ.ಸಿಂಗ್, ಕೃಷ್ಣಾ ರೆಡ್ಡಿ, ಚೈತನ್ಯ, ರಾಜೇಶ್, ಮುಖಂಡರಾದ ಯಂಗಾರೆಡ್ಡಿ, ದಿನ್ನೂರು ರಾಜು, ತಿಮ್ಮರಾಜು, ಡಾ। ಮೋಹನ್, ಕೃಷ್ಣರಾಜು, ರಘು ರಾಜು ಇದ್ದರು.