ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಸರ್ಕಾರ ಘೋಷಿಸಿರುವ ‘ಪಿಎಂ ವಿಶ್ವಕರ್ಮ ಯೋಜನೆ’ಯಲ್ಲಿ ಗರಿಷ್ಠ ಅನುದಾನದ ಪಾಲು ವಿಶ್ವಕರ್ಮ ಸಮುದಾಯಕ್ಕೆ ದೊರೆಯಬೇಕು ಎಂಬ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಭರವಸೆ ನೀಡಿದ್ದಾರೆ.ವಿಶ್ವಕರ್ಮ ಯುವ ಮಿಲನ್ ರಾಜ್ಯ ಸಮಿತಿ ಹಾಗೂ ವಿಶ್ವಕರ್ಮ ಯಜ್ಞ- ಯುವ ಸಮಾವೇಶ ಸಮಿತಿ ವತಿಯಿಂದ ನಗರದಲ್ಲಿ ವಿಶ್ವಕರ್ಮ ಮಹಾಯಜ್ಞ ಹಾಗೂ ವಿಶ್ವಕರ್ಮ ಯುವ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಿಶ್ವಕರ್ಮ ನಿಗಮ ಮಂಡಳಿಗೆ ರಾಜ್ಯ ಸರ್ಕಾರ ಕನಿಷ್ಠ 300 ಕೋಟಿ ರು. ಮೀಸಲಿಡಬೇಕು ಎಂಬ ವಿಶ್ವಕರ್ಮ ಸಮುದಾಯದ ಬೇಡಿಕೆ ನ್ಯಾಯಯುತವಾಗಿದ್ದು, ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.ವಿಶ್ವಕರ್ಮ ಸಮಾಜದಿಂದ ದೇಶಕ್ಕೆ, ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆಗಳು ದೊರೆತಿವೆ. ತಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿಕೊಂಡು ಮುಂದಿನ ಸಮಾಜಕ್ಕೆ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಭಾರತವನ್ನು ಇಡೀ ಜಗತ್ತಿಗೆ ತೋರಿಸಿದ ಕೀರ್ತಿ ವಿಶ್ವ ಕರ್ಮ ಸಮಾಜಕ್ಕೆ ಸಲ್ಲುತ್ತದೆ. ತಮ್ಮ ಕಷ್ಟಗಳ ನಡುವೆ ಕೂಡ ಕಲೆಯನ್ನು ಉಳಿಸುವ ಜತೆಯಲ್ಲಿ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅಭಿವೃದ್ಧಿಪಡಿಸುವ ಸಮಾಜದ ಕೊಡುಗೆ ಅಪಾರವಿದೆ. ಹಿಂದೂ ಧರ್ಮದ ಮೂಲ ಪರಂಪರೆಯನ್ನು ಉಳಿಸಿಕೊಳ್ಳುತ್ತಾ ಮಂದಿರ, ದೇವಸ್ಥಾನ, ಮನೆಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕಾರ್ಯಗಳು ಅಪಾರವಿದೆ. ಮಗು ಹುಟ್ಟಿನಿಂದ ಹಿಡಿದು ಬದುಕು ಮುಗಿಸುವ ತನಕನೂ ವಿಶ್ವಕರ್ಮ ಸಮಾಜ ಕೊಂಡಿಯಾಗಿ ಕೆಲಸ ಮಾಡುತ್ತದೆ ಎಂದರು.
ಉಡುಪಿ ಪಡು ಕುತ್ಯಾರಿನ ಜಗದ್ಗುರು ಶ್ರೀಮದ್ ಆನೆಗುಂದಿ ಮಹಾಸಂಸ್ಥಾನಂ ಸರಸ್ವತಿ ಪೀಠದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆರ್ಶೀವಚನ ನೀಡಿ, ವಿಶ್ವಕರ್ಮರು ಪಂಚಶಿಲ್ಪಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸಿ ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಈ ವೃತ್ತಿಗಳು ಅನ್ಯರ ಪಾಲಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.ಹಾಸನ ಜಿಲ್ಲೆಯ ಅರಕಲಗೂಡು ಅರೆಮಾದನಹಳ್ಳಿಯ ಶ್ರೀವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧೀಶ್ವರ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆರ್ಶೀವಚನ ನೀಡಿ, ವೇದಾಧ್ಯಯನ ಮತ್ತು ಶಿಲ್ಪಾಧ್ಯಯನ ಮಾಡಿಕೊಂಡು ಬಂದಿರುವ ಏಕೈಕ ಸಮಾಜ ಇದಾಗಿದೆ ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಏಳು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ವಿಶ್ವಕರ್ಮ ಮಹಾಯಜ್ಞ ನಡೆಯಿತು. ಬಳಿಕ ವಿಶ್ವಕರ್ಮ ಕಲಾ ಪ್ರದರ್ಶನ, ವೈವಿಧ್ಯಮಯ ನೃತ್ಯ ಸ್ಪರ್ಧೆ, ಕಲಾಕೃತಿಗಳ ಪ್ರದರ್ಶನ, ಆನ್‍ಲೈನ್ ಸ್ಪರ್ಧೆಗಳು ನಡೆದವು. ವಿಶ್ವಕರ್ಮ ಆ್ಯಪ್ ಬಿಡುಗಡೆ ಮಾಡಲಾಯಿತು.ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕ ಡಿ.ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಶ್ವಕರ್ಮ ಯಜ್ಞ - ಯುವ ಸಮಾವೇಶ ಸಮಿತಿಯ ಅಧ್ಯಕ್ಷ ನಾಗರಾಜ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಮಂಗಳೂರು ಶ್ರೀಕಾಳಿಕಾಂಬ ವಿನಾಯಕ ದೇವಸ್ಥಾನ ಆಡಳಿತಾಧಿಕಾರಿ ಉಮೇಶ ಆಚಾರ್ಯ, ಮೂಡುಬಿದಿರೆ ಗುರುಮಠ ಕಾಳಿಕಾಂಬ ದೇವಸ್ಥಾನದ ಪುರೋಹಿತ್ ಜಯಕರ ಆಚಾರ್ಯ, ಸಮಿತಿಯ ಸುಂದರ ಆಚಾರ್ಯ ಮರೋಳಿ, ಕೈಂತಿಲ ಸದಾಶಿವ ಆಚಾರ್ಯ, ಬಿ.ನಾಗರಾಜ ಆಚಾರ್ಯ, ನೀತಾ ಆರ್ ಆಚಾರ್ಯ, ಜಯಂತಿ ಕೇಶವ ಆಚಾರ್ಯ, ಅರುಣಾ ಸುರೇಶ್, ಗೀತಾ ನಾಗೇಂದ್ರನಾಥ್, ಸಂದೀಪ್ ಆಚಾರ್ಯ, ಶ್ರವಣ್ ಹರೀಶ್ ಆಚಾರ್ಯ ಮತ್ತಿತರರು ಇದ್ದರು. ವಿಶ್ವ ಕರ್ಮ ಯುವ ಮಿಲನ್ ರಾಜಾಧ್ಯಕ್ಷ ವಿಕ್ರಂ ಐ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿದರು.