ಹುಬ್ಬಳ್ಳಿ:
ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕಡೆಗಣನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ. 14ರಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಬಳಿ ನಿಯೋಗ ತೆಗೆದುಕೊಂಡು ಹೋಗಲಾಗುತ್ತಿದೆ. ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಏ. 15ರ ಬಳಿಕ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಇಲಾಖೆ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಕೈಬಿಟ್ಟು ಹಿಂದಿ, ಆಂಗ್ಲ ಭಾಷೆಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದರು. ನಮ್ಮ ಕಾರ್ಯಕರ್ತರು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಪರೀಕ್ಷೆ ರದ್ದುಗೊಳಿಸಿದರು ಎಂದರು.
15ರ ವರೆಗೆ ಗಡುವು:ಕರ್ನಾಟಕದಲ್ಲಿ ಮಾತೃಭಾಷೆ ತೆಗೆದು ಬಲವಂತವಾಗಿ ಹಿಂದಿ ಹೇರಲಾಗುತ್ತಿದೆ. ಇದರ ಹಿಂದೆ ದೊಡ್ಡ ಹುನ್ನಾರವೇ ಅಡಗಿದ್ದು ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಯಲ್ಲಿ ಆಂಗ್ಲ, ಹಿಂದಿಯೊಂದಿಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿ ತನ್ನ ಬದ್ಧತೆ ಪ್ರದರ್ಶಿಸಬೇಕು. ಈ ಕುರಿತು ಏ. 15ರೊಳಗೆ ಗಡುವು ನೀಡಿದ್ದು, ರಾಜ್ಯದ ಜನತೆಗೆ ತನ್ನ ವಾಗ್ದಾನ ನೀಡಬೇಕು. ಒಂದು ವೇಳೆ ನಮ್ಮ ಬೇಡಿಕೆ ಕುರಿತು ತಾತ್ಸಾರ ತೋರಿದರೆ ಕರ್ನಾಟಕದ ಎಲ್ಲ ಸ್ವರೂಪದ ರೈಲು ಹಾಗೂ ರೈಲು ನಿಲ್ದಾಣ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಗೆ ನೈತಿಕತೆಯಿಲ್ಲ:
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಓಡಿಸ್ಸಾ ರಾಜ್ಯಗಳಲ್ಲಿ ಮಾತ್ರ ತ್ರಿಭಾಷಾ ನೀತಿಯಿದೆ. ಇನ್ನುಳಿದ ಎಲ್ಲ ರಾಜ್ಯಗಳಲ್ಲೂ ದ್ವಿಭಾಷಾ ನೀತಿ ಜಾರಿಯಲ್ಲಿದೆ. ಈ ಕುರಿತು ಬಿಜೆಪಿ ಏಕೆ ಮಾತನಾಡುತ್ತಿಲ್ಲ. ಕರ್ನಾಟಕದಲ್ಲಿ ತ್ರಿಭಾಷಾ ನೀತಿ ಕೈಬಿಟ್ಟು ದ್ವಿಭಾಷಾ ನೀತಿ ಅಳವಡಿಸಿಕೊಳ್ಳಲು ಮುಂದಾದರೆ ಬಿಜೆಪಿ ಏಕೆ ವಿರೋಧಿಸುತ್ತಿದೆ? ಈ ಕುರಿತು ಮಾತನಾಡಲು ಅವರಿಗೆ ಯಾವುದೇ ರೀತಿಯ ನೈತಿಕತೆಯಿಲ್ಲ ಎಂದು ನಾರಾಯಣಗೌಡ ಕಿಡಿಕಾರಿದರು.
14ರಂದು ದೆಹಲಿಯಲ್ಲಿ ಪ್ರತಿಭಟನೆ:ದಕ್ಷಿಣ ಭಾರತ ರಾಜ್ಯಗಳಲ್ಲಿ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಲು ದಕ್ಷಿಣ ಭಾರತ ಎಲ್ಲ ರಾಜ್ಯಗಳ ಸಂಘಟನೆಗಳು ತೀರ್ಮಾನಿಸಿದ್ದು ದೆಹಲಿಯಲ್ಲಿ ಏ. 14ರಂದು ಒಂದು ದಿನ ಸಾಂಕೇತಿಕ ಧರಣಿ ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಲಾಗುವುದು ಎಂದರು. ರೈಲ್ವೆ ಪರೀಕ್ಷೆ ಕುರಿತು ಏಕೆ ಧ್ವನಿ ಎತ್ತುತ್ತಿಲ್ಲ
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಹಿಂದಿ ಭಾಷೆಗೆ ಅಂಕ ಕೊಡುವುದನ್ನು ಕೈಬಿಟ್ಟು ಕೇವಲ ಗ್ರೇಡ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ನಿರ್ಣಯ ಸ್ವಾಗತಾರ್ಹ. ಆದರೆ, ಇದಕ್ಕೆ ಬಿಜೆಪಿ ಬೆಂಬಲಿಸದೇ ಹಿಂದಿ ವಿರೋಧಿಸುವವರು ದೇಶದ್ರೋಹಿಗಳು ಎಂಬಂತೆ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ. ಈಚೆಗೆ ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಕುರಿತು ಕರವೇ ಧ್ವನಿಯತ್ತಿ ಉಗ್ರ ಹೋರಾಟ ನಡೆಸಿದಾಗ ಯಾವೊಬ್ಬ ಜನಪ್ರತಿನಿಧಿ ಮಾತನಾಡಲಿಲ್ಲ. ಇದು ಅವರಿಗೆ ಕನ್ನಡದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಇಂತಹ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಟಿ.ಎ. ನಾರಾಯಣಗೌಡ ಕಿಡಿಕಾರಿದರು.