ಬೆಂಗಳೂರು: ರಾಜ್ಯದ ರೈಲ್ವೆ ಜಾಲದ ಅತ್ಯಂತ ಕಠಿಣ ಮತ್ತು ತಾಂತ್ರಿಕವಾಗಿ ಸವಾಲಿಂದ ಕೂಡಿದ್ದ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದ್ದು, ಇದರಿಂದ ಬೆಂಗಳೂರು ಮತ್ತು ಮಂಗಳುರು ನಡುವೆ ವಂದೇ ಭಾರತ್‌ ರೈಲು ಸಂಚಾರ ಸಾಧ್ಯವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯುದೀಕರಣ ಡಿ.28ರಂದು ಪೂರ್ಣಗೊಂಡಿದ್ದು ವಿದ್ಯುತ್ ಲೋಕೋಮೋಟಿವ್ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. 55 ಕಿ.ಮೀ. ಉದ್ದದ ಈ ವಿದ್ಯುದೀಕೃತ ಮಾರ್ಗವು ಅತ್ಯಂತ ಸಂಕೀರ್ಣ ಭೂಪ್ರದೇಶ ಹೊಂದಿದೆ. ಕಡಿದಾದ ಇಳಿಜಾರು, 57 ಸುರಂಗಗಳು, 226 ಸೇತುವೆ ಮತ್ತು 108 ತಿರುವು ಹೊಂದಿರುವ ಈ ಪ್ರದೇಶ ಮಳೆಗಾಲದಲ್ಲಿ ಭೂಕುಸಿತಕ್ಕೆ ಹೆಚ್ಚು ತುತ್ತಾಗುವ ಪ್ರದೇಶವಾಗಿದೆ. ಇಲ್ಲಿ ಸುರಂಗಗಳ ವಿದ್ಯುದೀಕರಣಕ್ಕಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಿವರವಾದ ಭೂವೈಜ್ಞಾನಿಕ ಅಧ್ಯಯನ ನಡೆಸಲಾಗಿತ್ತು.ಈ ಮಾರ್ಗದ ಮೂಲಕ ಮಂಗಳೂರಿಗೆ ವಂದೇ ಭಾರತ್ ರೈಲು ಓಡಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇಂಧನ ಬಳಕೆ ಕಡಿಮೆಯಾಗಲಿದೆ, ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಮತ್ತು ಕಾರ್ಯಾಚರಣೆ ದಕ್ಷತೆ ಹೆಚ್ಚಲಿದೆ. ಇದು ದೇಶದ ಐಟಿ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ. ರೈಲ್ವೆ ಮಾರ್ಗವು ಸಂಪೂರ್ಣ ವಿದ್ಯುದ್ದೀಕರಣಗೊಂಡಿದ್ದು, ಪರಿಣಾಮಕಾರಿ ವಂದೇ ಭಾರತ್ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ. ಮತ್ತು ಈ ಭಾಗದಲ್ಲಿ ಮತ್ತಷ್ಟು ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ಸಹಾಯಕವಾಗಲಿದೆ.

- ವಿ.ಸೋಮಣ್ಣ, ರೈಲ್ವೆ ರಾಜ್ಯ ಖಾತೆ ಸಚಿವ