ಬೆಳಿಗ್ಗಿನಿಂದ ರಾತ್ರಿಯವರೆಗೂ ೩೦ಕ್ಕೂ ಹೆಚ್ಚು ಬಾರಿ ಇಲ್ಲಿ ರೈಲ್ವೆ ಗೇಟ್ ಹಾಕುವುದರಿಂದ ವಾಹನಗಳು ಕಿಲೋಮೋಟರ್ ಉದ್ದ ಸಾಲುಗಟ್ಟಿ ನಿಂತಿರುತ್ತವೆ. ಸಚಿವ ಸೋಮಣ್ಣ ಅವರು ಹತ್ತಾರು ಬಾರಿ ಭೇಟಿ ನೀಡಿದ್ದರೂ ಕಾಮಗಾರಿ ತ್ವರಿತ ಪೂರ್ಣಕ್ಕೆ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ೨ವರ್ಷವಾದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಬದಲಿ ರಸ್ತೆಗೆ ಕನಿಷ್ಠ ಡಾಂಬರೀಕರಣ ಮಾಡಿಸಿ ಎಂದು ಜನರು ಒತ್ತಾಯಿಸಿದ್ದಾರೆ.
ಕನ್ನಡಪ್ರಭವಾರ್ತೆ ತಿಪಟೂರು
ಕಳೆದ ಒಂದೂವರೆ ವರ್ಷದಿಂದ ನಗರದ ಹಾಸನ ರಸ್ತೆಯ ರೈಲ್ವೆ ಪೈಓವರ್ ಬ್ರಿಡ್ಜ್ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದ್ದು, ವಾಹನಗಳ ಓಡಾಟಕ್ಕೆ ನಿರ್ಮಿಸಿರುವ ಕಳಪೆ ಮಣ್ಣಿನ ರಸ್ತೆಯಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಕಾಮಗಾರಿ ಚುರುಕುಗೊಳಿಸುವ ಜೊತೆಗೆ ಬದಲಿ ರಸ್ತೆ ಡಾಂಬರೀಕರಣಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ರಸ್ತೆಯಲ್ಲಿ ನಿತ್ಯ ಬೆಂಗಳೂರು-ಹಾಸನ-ಮಂಗಳೂರು ಕಡೆಗಳಿಗೆ ಸಾವಿರಾರು ವಾಹನಗಳು ಓಡಾಡುತ್ತವೆ. ಇದೇ ಭಾಗದಲ್ಲಿ ನಾಲ್ಕೈದು ಕಾಲೇಜುಗಳಿವೆ. ರೈಲ್ವೆ ಇಲಾಖೆ ಸುಮಾರು ಒಂದೂವರೆ ಕಿಲೋಮೀಟರ್ ಮಣ್ಣಿನ ಕಳಪೆ ರಸ್ತೆ ನಿರ್ಮಿಸಿದ್ದು, ಒಂದು ಕಡೆ ಕಾಮಗಾರಿ ಧೂಳು, ಮತ್ತೊಂದು ಕಡೆ ವಾಹನಗಳ ಧೂಳಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.
ಈ ಮಣ್ಣಿನ ರಸ್ತೆ ಬಿಸಿಲಿಗೆ ಕೆಂಧೂಳು ಎಬ್ಬಿಸಿದರೆ, ಮಳೆ ಬಂದರೆ ಕೊಚ್ಚೆ ರಸ್ತೆಯಾಗಿ ಮಾರ್ಪಡುತ್ತದೆ. ರಸ್ತೆಗೆ ಜಲ್ಲಿ ಹಾಕಿಲ್ಲ. ಉದ್ದಕ್ಕೂ ಗುಂಡಿ ಗೊಟರುಗಳು ಬಿದ್ದಿದ್ದು ವಾಹನ ಸಂಚಾರ ದುಸ್ತರವಾಗಿದೆ. ಭಾರಿ ಹಾಗೂ ಲಘುವಾಹನಗಳು ಎಡಬಿಡದೆ ಓಡಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗಿದೆ. ಎಚ್ಚರತಪ್ಪಿದರೆ ಅಪಘಾತ ಗ್ಯಾರಂಟಿ.ಗೇಟ್ ಲಾಕ್ :