ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ರೈಲ್ವೆ ಯೋಜನೆ ಬಹಳ ಅಗತ್ಯ ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಹೇಳಿದರು.ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ ಎಂಎಸ್ಎಂಇಗಳ ಕಾರ್‍ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ಝಡ್ಇಡಿ ಮತ್ತು ಲೀನ್ ಯೋಜನೆ ಕುರಿತು ಇಲ್ಲಿನ ಕನ್ನಿಕಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೊಡಗಿಗೆ ಇಎಸ್‌ಐ ಆಸ್ಪತ್ರೆ ಬೇಕಾಗಿದೆ. ಇಲ್ಲಿ ಹೆಚ್ಚು ಪ್ಲಾಂಟೇಷನ್ ಇರುವುದರಿಂದ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಕೊಡಗಿನಲ್ಲಿ ಹೈಟೆಕ್ ಆಸ್ಪತ್ರೆ ಇಲ್ಲದಿರುವುದರಿಂದ ಕಾರ್ಮಿಕ ವರ್ಗ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಯನ್ನು ಅವಲಂಬಿಸಿಕೊಂಡಿದ್ದಾರೆ. ಆದ್ದರಿಂದ ಕಾಸಿಯಾವು ಸರ್ಕಾರದ ಮೇಲೆ ಒತ್ತಡ ತಂದುಕೊಡಗಿನಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪಿಸಿಕೊಡಬೇಕು. ಜೊತೆಗೆ ಯುವಜನರಿಗೆ ಉದ್ಯೋಗ ಅವಕಾಶದೊಂದಿಗೆ ಇಲ್ಲಿನ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುವ ಮೂಲಕ ಕೈಗಾರಿಕೋದ್ಯಮ ಬೆಳೆವಣಿಗೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಕೈಗಾರಿಕೋದ್ಯಮದ ಬಗ್ಗೆ ಆಸಕ್ತಿ ಇರುವ ಯುವಕರಿಗೆ ಇಂತಹ ಕಾರ್‍ಯಾಗಾರಗಳಿಂದ ಉದ್ಯಮ ಆರಂಭಿಸಲು ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಉತ್ಪನ್ನಗಳನ್ನು ರಫ್ತು ಮಾಡುವ ಕುರಿತು ಬೇಕಾದ ಅಗತ್ಯ ಮಾಹಿತಿಗಳು ಲಭಿಸುತ್ತವೆ ಎಂದರು.ಕೊಡಗು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಿ.ಕೆ. ಸುದೀಪ್ ಕುಮಾರ್ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ವಿಶ್ವಗುರುವಾಗಬೇಕೆನ್ನುವ ಉದ್ದೇಶದಿಂದ ಇಂತಹ ಕಾರ್‍ಯಾಗಾರಗಳು, ಕಾರ್‍ಯಕ್ರಮಗಳನ್ನು ಪ್ರತಿ ತಾಲೂಕಿನಲ್ಲಿ ಹೆಚ್ಚಾಗಿ ಆಯೋಜಿಸಲಾಗುತ್ತಿದೆ. ಉದ್ದಿಮೆಗಳ ಸ್ಥಾಪನೆಗೆ ಸರ್ಕಾರದಿಂದ ದೊರೆಯುವ ಅನುದಾನ, ಸಹಾಯಧನ, ಸಹಕಾರದ ಬಗ್ಗೆ ಅರಿತುಕೊಳ್ಳಬೇಕಿದೆ. ಅದೇ ರೀತಿ ಉದ್ಯಮಿಗಳು ಬ್ಯಾಂಕ್‌ಗಳೊಂದಿಗೆ ಉತ್ತಮ ಸಂಬಂಧ ಹೊಂದುವುದರೊಂದಿಗೆ ತಮ್ಮ ವ್ಯವಹಾರ ವಹಿವಾಟನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಅಗತ್ಯವಿದೆ ಎಂದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹನುಮಂತರಾಯ ಮಾತನಾಡಿ, ಝಡ್ ಇಡಿ ಮತ್ತು ಲೀನ್ ಎಂದರೇನು, ಅದರ ಉದ್ದೇಶವೇನು ಎಂದು ವಿವರಿಸಿದರು.ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಮೂಲಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇತರರಿಗೂ ಕಾರ್‍ಯಕ್ರಮ ಮತ್ತು ಯೋಜನೆ ಉದ್ದೇಶದ ಬಗ್ಗೆ ಮಾಹಿತಿ ಹೊಂದಿದವರು ಅರಿವು ಮೂಡಿಸಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್ ಅವರು ಝಡ್ ಇಡಿ ಮತ್ತು ಲೀನ್ ಬಗ್ಗೆ ಉಪನ್ಯಾಸ ನೀಡಿದರು.ಈ ಸಂದರ್ಭ ಕಾಸಿಯಾ ಜಂಟಿ ಕಾರ್‍ಯದರ್ಶಿ ದಿನೇಶ್ ಕುಮಾರ್ ವಿ., ಕಾಸಿಯಾದ ಕೊಡಗು ಜಿಲ್ಲಾ ಅಭಿವೃದ್ಧಿ ಸಮಿತಿ ಪ್ಯಾನೆಲ್ ಅಧ್ಯಕ್ಷ ದೇವೇಂದ್ರನ್, ಕಾಸಿಯಾ ಕಾರ್‍ಯನಿರ್ವಣಾಧಿಕಾರಿ ಕೆ.ಎಸ್. ಶ್ರೀಧರ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕಡೆಗಳಿಂದ ನೂರುಕ್ಕೂ ಹೆಚ್ಚಿನ ಉದ್ಯಮಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಅತಿಥಿಗಳನ್ನು ಕಾಸಿಯಾ ವತಿಯಿಂದ ಸನ್ಮಾನಿಸಲಾಯಿತು. ಕೊಡಗಿನ ಪ್ರಮುಖ ಬೆಳೆ ಕಾಫಿಯಾಗಿದ್ದು, ಕಾಫಿ ಉದ್ಯಮಗಳಿಂದ ಲಕ್ಷಾಂತರ ಟನ್ ಕಾಫಿ ಮಂಗಳೂರು ಮೂಲಕ ರಫ್ತು ಆಗುತ್ತಿದೆ. ಈಗ ಲಾರಿಗಳ ಮೂಲಕ ಕಾಫಿ ಸರಬರಾಜು ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಎರಡು ಮೂರು ತಿಂಗಳು ರಸ್ತೆ ಬಂದ್ ಆಗುತ್ತದೆ. ಈ ವ್ಯವಸ್ಥೆ ಇನ್ನೂ ಸುಲಭ ಮಾಡುವ ನಿಟ್ಟಿನಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಸರಕುಗಳ ಸಾಗಣೆಗಾಗಿ ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಿದರೆ ಉದ್ಯಮಿಗಳಿಗೆ ಅನುಕೂಲವಾಗುತ್ತದೆ. ಕಾಸಿಯಾದವರು ರೈಲ್ವೆ ಯೋಜನೆಗೆ ಒತ್ತು ಕೊಟ್ಟು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ರೈಲ್ವೆ ಯೋಜನೆ ಜಾರಿಗೆ ಬಂದರೆ ರಫ್ತುದಾರರಿಗೆ ಸಾರಿಗೆ ವೆಚ್ಚ ಕೂಡ ಕಡಿಮೆ ಆಗುತ್ತದೆ. ಜೊತೆಗೆ ಹೆಚ್ಚಿನ ವ್ಯವಹಾರ ಮಾಡಲು ಅನುಕೂಲವಾಗುವಂತೆ ಎಂದರು.