ಕನ್ನಡಪ್ರಭವಾರ್ತೆ ತಿಪಟೂರು
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಪಟೂರು ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಮೇಲ್ಸೇತುವೆಗಳ ಕಾಮಗಾರಿಗಳನ್ನು ಬುಧವಾರ ಪರಿಶೀಲನೆ ನಡೆಸಿದರು.ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಗಳು ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು, ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದು ಹಾಗೂ ಅಡೆತಡೆರಹಿತ ಸಂಪರ್ಕ ವ್ಯವಸ್ಥೆಯನ್ನು ಒದಗಿಸುವುದರಿಂದ ಪ್ರದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ. ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸುವುದು ಹಾಗೂ ಜನರ ದೀರ್ಘಕಾಲದ ಬೇಡಿಕೆಗಳಿಗೆ ಸ್ಪಂದಿಸುವುದು ನಮ್ಮ ಮೋದಿಯವರ ಸರ್ಕಾರದ ಬದ್ಧತೆಯಾಗಿದೆ. ಇಂತಹ ಮೂಲಸೌಕರ್ಯ ಯೋಜನೆಗಳು ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಗರದ ಶಾರದಾ ನಗರ ಗೇಟ್‌ನ ಲೆವೆಲ್ ಕ್ರಾಸಿಂಗ್ ಸಂಖ್ಯೆ ೮೬ ಹಾಗೂ ಹೊನ್ನವಳ್ಳಿ ಗೇಟ್‌ನ ಲೆವೆಲ್ ಕ್ರಾಸಿಂಗ್ ಸಂಖ್ಯೆ ೮೮ರ ಬದಲಿಗೆ ನಿರ್ಮಾಣಗೊಳ್ಳುತ್ತಿದ್ದು, ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ಈ ಬಹುಕಾಲದ ನಿರೀಕ್ಷಿತ ಮೂಲಸೌಕರ್ಯ ಯೋಜನೆಗಳು ತಿಪಟೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುತ್ತಿದ್ದು, ಸಂಪರ್ಕ ವ್ಯವಸ್ಥೆ, ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಮಹತ್ವದ ಮೈಲುಗಲ್ಲಾಗಿವೆ. ಲೆವೆಲ್ ಕ್ರಾಸಿಂಗ್ ಸಂಖ್ಯೆ ೮೬, ಶಾರದಾ ನಗರ ಗೇಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಮೇಲ್ಸೇತುವೆಗೆ ಅಂದಾಜು ರು. ೮೯.೩೨ ಕೋಟಿ ವೆಚ್ಚ ನಿರ್ಧರಿಸಲಾಗಿದೆ. ಈ ಯೋಜನೆ ಚಿಕ್ಕನಾಯಕನಹಳ್ಳಿ ಮತ್ತು ಹಾಸನ ರೈಲು ನಿಲ್ದಾಣಗಳ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಿ, ರೈಲು ಹಾಗೂ ರಸ್ತೆ ಸಂಚಾರವನ್ನು ಸುಗಮ ಮತ್ತು ನಿರಂತರವಾಗಿಸಲು ಸಹಕಾರಿಯಾಗಲಿದೆ. ಅದೇ ರೀತಿ, ಲೆವೆಲ್ ಕ್ರಾಸಿಂಗ್ ಸಂಖ್ಯೆ ೮೮, ಹೊನ್ನವಳ್ಳಿ ಗೇಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಮೇಲ್ಸೇತುವೆಗೆ ಅಂದಾಜು ರು.೨೯.೭೪ ಕೋಟಿ ವೆಚ್ಚ ನಿಗದಿಪಡಿಸಲಾಗಿದೆ. ಈ ಬಹುನಿರೀಕ್ಷಿತ ಯೋಜನೆ ಹೊನ್ನವಳ್ಳಿ, ಕೊನೆಹಳ್ಳಿ ಮತ್ತು ತಿಪಟೂರನ್ನು ಸಂಪರ್ಕಿಸಿ, ಈ ಪ್ರದೇಶದಲ್ಲಿ ನಿರಂತರ ಮತ್ತು ಸುಗಮ ಸಂಚಾರ ವ್ಯವಸ್ಥೆಯನ್ನು ಒದಗಿಸಲಿದೆ ಎಂದು ತಿಳಿಸಿದರು.ಪರಿಶೀಲನಾ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್, ಇತರ ವಿಭಾಗೀಯ ಅಧಿಕಾರಿಗಳು ಹಾಗೂ ಜೆಡಿಎಸ್ ಮುಖಂಡರಾದ ಕೆ.ಟಿ. ಶಾಂತಕುಮಾರ್, ಜಕ್ಕನಹಳ್ಳಿ ಲಿಂಗರಾಜು, ಬಿಜೆಪಿ ಮುಖಂಡರುಗಳಾದ ಸತೀಶ್, ಜಗದೀಶ್ ಸೇರಿದಂತೆ ಇತರೆ ಮುಖಖಂಡರುಗಳು ಇದ್ದರು.