ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಆರ್‌ಪಿಎಫ್ ಕೈಗೊಂಡ ವಿವಿಧ ಕಾರ್ಯಾಚರಣೆಗಳು ಫಲ ನೀಡಿದೆ. ಆಗಸ್ಟ್‌ನಲ್ಲಿ "ನನ್ಹೆ ಫರಿಸ್ತೇ " ಕಾರ್ಯಾಚರಣೆಯಡಿ 27 ಬಾಲಕರು ಹಾಗೂ 6 ಬಾಲಕಿಯರು ಸೇರಿದಂತೆ 33 ಮಕ್ಕಳನ್ನು ರಕ್ಷಿಸಲಾಗಿದೆ.

ಹುಬ್ಬಳ್ಳಿ:

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಆರ್‌ಪಿಎಫ್ ಕೈಗೊಂಡ ವಿವಿಧ ಕಾರ್ಯಾಚರಣೆಗಳು ಫಲ ನೀಡಿದೆ. ಆಗಸ್ಟ್‌ನಲ್ಲಿ "ನನ್ಹೆ ಫರಿಸ್ತೇ " ಕಾರ್ಯಾಚರಣೆಯಡಿ 27 ಬಾಲಕರು ಹಾಗೂ 6 ಬಾಲಕಿಯರು ಸೇರಿದಂತೆ 33 ಮಕ್ಕಳನ್ನು ರಕ್ಷಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಇಲಾಖೆಯು, ಕುಟುಂಬದಿಂದ ಬೇರ್ಪಟ್ಟಿದ್ದ ಮಕ್ಕಳನ್ನು ರಕ್ಷಿಸಿ, ಎನ್‌ಜಿಒ ಹಾಗೂ ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಅವರ ಕುಟುಂಬಗಳೊಂದಿಗೆ ಮರು ಸೇರ್ಪಡೆಗೆ ಆರ್‌ಪಿಎಫ್ ಸಿಬ್ಬಂದಿ ನೆರವಾಗಿದ್ದಾರೆ. "ಆಪರೇಷನ್ ಡಿಗ್ನಿಟಿ " ಅಡಿ ಇಬ್ಬರು ವೃದ್ಧರನ್ನು ರಕ್ಷಿಸಿ ಕುಟುಂಬ ಅಥವಾ ಎನ್‌ಜಿಒಗಳಿಗೆ ಒಪ್ಪಿಸಲಾಗಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ "ಮೇರಿ ಸಹೇಲಿ " ಉಪಕ್ರಮದಡಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಆಸನ ಹಾಗೂ ಜನನ ವಿವರಗಳನ್ನು ಸಂಬಂಧಿತ ನಿಲ್ದಾಣಗಳ ಆರ್‌ಪಿಎಫ್ ತಂಡಗಳಿಗೆ ಹಂಚಿಕೊಂಡು ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಪ್ರಸ್ತುತ 32 ರೈಲುಗಳು ಇದರ ವ್ಯಾಪ್ತಿಯಲ್ಲಿವೆ.

ಟಿಕೆಟ್‌ಗಳ ಕಾಳಸಂತೆ ತಡೆಯಲು "ಉಪಲಬ್ಧ್ " ಕಾರ್ಯಾಚರಣೆ ನಡೆಸಿ, ರೈಲ್ವೆ ಕಾಯ್ದೆಯ ಸೆಕ್ಷನ್ 143ರಡಿ 12 ಟಿಕೆಟ್ ದಲ್ಲಾಳಿಗಳನ್ನು ಬಂಧಿಸಲಾಗಿದೆ. ₹53,001 ಮೌಲ್ಯದ 18 ಬಳಕೆಯಾಗದ ಹಾಗೂ ₹2.32 ಲಕ್ಷ ಮೌಲ್ಯದ 56 ಬಳಸಿದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

"ಆಪರೇಷನ್ ಸತರ್ಕ್ " ಅಡಿ 8 ಮದ್ಯ ಪ್ರಕರಣಗಳಲ್ಲಿ 89 ಲೀಟರ್ ಮದ್ಯ ಹಾಗೂ ₹55,162 ಮೌಲ್ಯದ 154 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. "ಆಪರೇಷನ್ ನಾರ್ಕೊ "ದಲ್ಲಿ 8 ಪ್ರಕರಣ ಪತ್ತೆ ಹಚ್ಚಿ 127.5 ಕೆಜಿ ಗಾಂಜಾ ಸೇರಿದಂತೆ ₹12.5 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು 67 ಪ್ರಕರಣಗಳಲ್ಲಿ ಪ್ರಯಾಣಿಕರು ಕಳೆದುಕೊಂಡ ಲ್ಯಾಪ್‌ಟಾಪ್, ಮೊಬೈಲ್, ಆಭರಣ ಸೇರಿದಂತೆ ₹66.41 ಲಕ್ಷ ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ರೈಲ್ವೆ ಆಸ್ತಿ ಕಳವು ಸಂಬಂಧ 14 ಪ್ರಕರಣ ದಾಖಲಿಸಿ 24 ಮಂದಿಯನ್ನು ಬಂಧಿಸಲಾಗಿದ್ದು, ₹2.28 ಲಕ್ಷ ಮೌಲ್ಯದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಆರ್‌ಪಿಎಫ್ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಹಾಗೂ ಯೋಗಕ್ಷೇಮ ಕಾಪಾಡುವುದು ರೈಲ್ವೆಯ ಪ್ರಮುಖ ಜವಾಬ್ದಾರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.