ಕವಿವಿ ಬಳಿಯ ರೈಲ್ವೆ ಗೇಟ್‌ ಸಂಪೂರ್ಣ ಬಂದ್‌ ಮಾಡಿ ಕಾಮಗಾರಿ ಮಾಡುತ್ತಿದ್ದು, 2 ವರ್ಷ ಕಲ್ಯಾಣ ನಗರದಿಂದ ಮಾತ್ರ ಪ್ರವೇಶವಿತ್ತು. ಇದೀಗ ಕೆಳ ಸೇತುವೆ ಮೂಲಕ ಶೀಘ್ರ ಹಾಗೂ ಅಡೆತಡೆ ಇಲ್ಲದೇ ವಿವಿಗೆ ಹೋಗಬಹುದು. ಹಾಗೆಯೇ, ಹಳಿಯಾಳ-ದಾಂಡೇಲಿ ಕಡೆ ಹೋಗುವ ಭಾರೀ ವಾಹನ, ಗೂಡ್ಸ್‌ ಸೇರಿದಂತೆ ಎಲ್ಲ ವಾಹನಗಳಿಗೆ ಸುಗಮ ಸಂಚಾರ ಸಮಾಧಾನ ತಂದಿದೆ.

ಬಸವರಾಜ ಹಿರೇಮಠ

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಧಾರವಾಡದಿಂದ ಹಳಿಯಾಳ-ದಾಂಡೇಲಿಗೆ ಹೋಗುವ ರಸ್ತೆ ಮಾರ್ಗ ಮಧ್ಯದ ರೈಲ್ವೆ ಗೇಟ್‌ಗಳ ಸಮಸ್ಯೆಗೆ ಇದೀಗ ಶಾಶ್ವತ ಪರಿಹಾರ ದೊರೆತಿದೆ. ಎರಡೂ ಕಡೆ ಕೆಳ ಸೇತುವೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ವಾಹನಗಳ ಸಂಚಾರ ಶುರುವಾಗಿದೆ.

ಕರ್ನಾಟಕ ವಿವಿಗೆ ಹೋಗುವಾಗ ಮಾರ್ಗ ಮಧ್ಯೆದ ಶ್ರೀನಗರ ಬಳಿಯ ರೈಲ್ವೆ ಗೇಟ್‌ (ಎಲ್‌ಸಿ ನಂ. 299) ಬಳಿ ಕೆಳ ಸೇತುವೆಯು ಕಳೆದ ವಾರವಷ್ಟೇ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಸುಮಾರು ಒಂದೂವರೆ ತಿಂಗಳ ಹಿಂದಷ್ಟೇ ಹಳಿಯಾಳ ರೈಲ್ವೆ (ಎಲ್‌ಸಿ ನಂ. 300) ಗೇಟ್‌ ಬಳಿ ಕೆಳ ಸೇತುವೆಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ.

ಡಾ. ವಿ.ಎಸ್‌.ವಿ. ಪ್ರಸಾದ ನೇತೃತ್ವದ ಸ್ವರ್ಣಾ ಗ್ರುಪ್‌ ಆಫ್‌ ಕಂಪನಿಯಿಂದ ಈ ಸೇತುವೆ ಕಾಮಗಾರಿ ಎರಡು ವರ್ಷಗಳಿಂದ ನಡೆದಿದ್ದು, ತಲಾ ಸೇತುವೆಗೆ ₹ 43 ಕೋಟಿ ವೆಚ್ಚವಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಶಾಪವಾಗಿದ್ದ ರೈಲ್ವೆ ಗೇಟ್‌:

ಕವಿವಿ ಹಾಗೂ ಹಳಿಯಾಳ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳ ಸಂಚಾರವಿದೆ. ಕವಿವಿಯ ಮುಖ್ಯ ಪ್ರವೇಶ ದ್ವಾರ ಶ್ರೀನಗರ ಮೂಲಕವೇ ಇತ್ತು. ಅದೇ ರೀತಿ ಧಾರವಾಡದಿಂದ ಹಳಿಯಾಳ-ದಾಂಡೇಲಿ, ಕಾರವಾರ ಮಾತ್ರವಲ್ಲದೇ ಈ ರಸ್ತೆಯಲ್ಲಿ ಸಂಚರಿಸುವವರಿಗೂ ರೈಲ್ವೆ ಗೇಟ್‌ ಶಾಪವಾಗಿ ಪರಿಣಮಿಸಿತ್ತು. ಗಂಟೆಗೊಮ್ಮೆ ಪ್ರಯಾಣಿಕ ಅಥವಾ ಗೂಡ್ಸ್ ರೈಲು ಬರುತ್ತಿದ್ದ ಕಾರಣ ರೈಲು ಹೋಗುವ ವರೆಗೂ ಕಾಯ್ದು ಜನರು ಸುಸ್ತಾಗಿದ್ದರು. ಯಾವಾಗ ಸೇತುವೆ ಆಗಲಿದೆ ಎಂದು ಕಾತುರದಿಂದ ಕಾಯ್ದಿದ್ದರು.

ಅದರಲ್ಲೂ ಕವಿವಿ ಬಳಿಯ ರೈಲ್ವೆ ಗೇಟ್‌ ಸಂಪೂರ್ಣ ಬಂದ್‌ ಮಾಡಿ ಕಾಮಗಾರಿ ಮಾಡುತ್ತಿದ್ದು, 2 ವರ್ಷ ಕಲ್ಯಾಣ ನಗರದಿಂದ ಮಾತ್ರ ಪ್ರವೇಶವಿತ್ತು. ಇದೀಗ ಕೆಳ ಸೇತುವೆ ಮೂಲಕ ಶೀಘ್ರ ಹಾಗೂ ಅಡೆತಡೆ ಇಲ್ಲದೇ ವಿವಿಗೆ ಹೋಗಬಹುದು. ಹಾಗೆಯೇ, ಹಳಿಯಾಳ-ದಾಂಡೇಲಿ ಕಡೆ ಹೋಗುವ ಭಾರೀ ವಾಹನ, ಗೂಡ್ಸ್‌ ಸೇರಿದಂತೆ ಎಲ್ಲ ವಾಹನಗಳಿಗೆ ಸುಗಮ ಸಂಚಾರ ಸಮಾಧಾನ ತಂದಿದೆ.

ಅನುಕೂಲ, ಎಚ್ಚರ ಇರಲಿ:

ನಾವು ವಿದ್ಯಾರ್ಥಿ ಇದ್ದಾಗಿನಿಂದ ಈ ವರೆಗೂ ಕವಿವಿಗೆ ಶ್ರೀನಗರ ಮೂಲಕವೇ ಹಾಯ್ದು ಹೋಗುವುದು ರೂಢಿ ಹಾಗೂ ಸರಳ. ಆದರೆ, ರೈಲ್ವೆ ಗೇಟ್‌ ಅಡ್ಡಿಯಾಗಿತ್ತು. ಇದೀಗ ಕೆಳಸೇತುವೆ ನಿರ್ಮಾಣವಾಗಿ ಅನುಕೂಲವಾಗಿದೆ. ಆದರೆ, ಸೇತುವೆ ಮಧ್ಯದಲ್ಲಿ ನಾಲ್ಕು ರಸ್ತೆ ಸೇರುವಾಗ ಸವಾರರು ಎಚ್ಚರ ವಹಿಸಬೇಕು. ಇದಕ್ಕಾಗಿ ನಾಮಫಲಕ ಅಳವಡಿಸಬೇಕೆಂದು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಹೇಳಿದರು.

ಅಂಬ್ಲಿಕೊಪ್ಪ-ನಿಗದಿ ಭಾಗದಿಂದ ನಿತ್ಯ ತರಕಾರಿ, ಹೂಗಳನ್ನು ಧಾರವಾಡ ಮಾರುಕಟ್ಟೆಗೆ ತರುತ್ತೇನೆ. ಹೋಗುವಾಗ ಹಾಗೂ ಬರುವಾಗ ರೈಲ್ವೆ ಗೇಟ್‌ ಬಂದ್‌ ಆಗುವುದರಿಂದ ಬೇಸತ್ತು ಹೋಗಿದ್ದೇವು. ಈಗ ಸೇತುವೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿದಂತೆ ಆಗಿದೆ ಎಂದು ಅಂಬ್ಲಿಕೊಪ್ಪದ ರೈತ ಈರಣ್ಣ ಹಿರೇಮಠ ಹೇಳುತ್ತಾರೆ. ಕವಿವಿ ಕೆಳ ಸೇತುವೆ ಮೂಲಕ ಪ್ರವೇಶಿಸಲು ಯೋಜನೆಯಲ್ಲಿ ಎಡ ಹಾಗೂ ಬಲಕ್ಕೆ ಮಾತ್ರ ಅವಕಾಶವಿತ್ತು. ಇದೀಗ ಆ ಎರಡು ರಸ್ತೆಗಳನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಆದರೆ, ನಂತರದಲ್ಲಿ ನೇರವಾಗಿಯೂ ರಸ್ತೆ ಬೇಡಿಕೆ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿದ್ದು, ಏಪ್ರಿಲ್‌ಗೆ ಪೂರ್ಣವಾಗಲಿದೆ. ಹಳಿಯಾಳ ರಸ್ತೆಯ ರೈಲ್ವೆ ಸೇತುವೆ ಶೇ.80ರಷ್ಟು ಪೂರ್ಣಗೊಂಡಿದೆ. ಬಲ ಬದಿಗೆ 22 ಗುಂಟೆ ಜಾಗವನ್ನು ಜಿಲ್ಲಾಡಳಿತವು ಭೂಸ್ವಾಧೀನ ಮಾಡಿ ನೀಡಿದ ನಂತರ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಿ ನಂತರದಲ್ಲಿ ಎರಡೂ ಸೇತುವೆಗಳ ಲೋಕಾರ್ಪಣೆ ಮಾಡಬಹುದು ಎಂದು ಸ್ವರ್ಣಾ ಗ್ರುಪ್‌ ಮುಖ್ಯಸ್ಥ ಡಾ. ವಿ.ಎಸ್‌.ವಿ. ಪ್ರಸಾದ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಕವಿವಿ ಅಂಡರ್‌ ಪಾಸ್‌ ಅತ್ಯದ್ಬುತ. ದೇಶದಲ್ಲಿಯೇ ಮೊದಲ ಬಾರಿಗೆ ಇಂಥದೊಂದು ಡಿಸೈನ್‌ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಅನುಕೂಲ ಕಲ್ಪಿಸಿದ ಹೆಮ್ಮೆ ನಮ್ಮದು. ಈ ಯೋಜನೆ ಮಂಜೂರು ಮಾಡುವಲ್ಲಿ ಮುತುವರ್ಜಿ ವಹಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹಾಗೂ ನಿರ್ಮಾಣ ಹಂತದಲ್ಲಿ ಸಹಕರಿಸಿದ ಕವಿವಿ ಅಂದಿನ ಕುಲಪತಿ ಡಾ.ಕೆ.ಬಿ.ಗುಡಸಿ ಅವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಡಾ.ವಿಎಸ್‌ವಿ ಪ್ರಸಾದ, ವ್ಯವಸ್ಥಾಪಕ ನಿರ್ದೇಶಕರು, ಸ್ವರ್ಣಾ ಗ್ರೂಪ್‌ ಆಫ್‌ ಕಂಪನಿ, ಹುಬ್ಬಳ್ಳಿ