ಮತ್ತೆ ಮಳೆಯಬ್ಬರ; ಅಕ್ಷರಶಃ ತತ್ತರಿಸಿದ ಜನತೆ

| Published : Jul 31 2024, 01:07 AM IST

ಮತ್ತೆ ಮಳೆಯಬ್ಬರ; ಅಕ್ಷರಶಃ ತತ್ತರಿಸಿದ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 316 ಮಿ.ಮೀ.ಮಳೆ ಸುರಿದಿದ್ದು, ಅತ್ತ ಅಪಾಯಮಟ್ಟ ಮೀರಿ ಹರಿಯುತ್ತಿರುವ ತುಂಗೆಯಿಂದಾಗಿ ಶಿವಮೊಗ್ಗದಲ್ಲಿ ನೆರೆ ಭೀತಿ ಉಂಟಾಗಿದೆ. ಇನ್ನು, ಜಿಲ್ಲೆಯ 3 ತಾಲೂಕಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ತಗ್ಗಿದ್ದ ಮಳೆ ಮಂಗಳವಾರ ಮತ್ತೆ ಬಿರುಸುಕೊಂಡಿದ್ದು, ಮಂಗಳವಾರ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪುನರ್ವಸು ಮಳೆ ಅಬ್ಬರಕ್ಕೆ ಕಂಗೆಟ್ಟಿದ್ದ ಮಲೆನಾಡಿನ ನಗರ ಭಾಗದ ಜನಜೀವನ ಪುಷ್ಯ ಮಳೆಯ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ನದಿ, ಹಳ್ಳ, ಕೊಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತಗ್ಗು ಪ್ರದೇಶದಲ್ಲಿ ನೆರೆ ಭೀತಿ ಆವರಿಸಿದೆ. ಭೂ ಕುಸಿತ, ಮರಗಳು ಧರೆಗುರುಳಿ ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಜಮೀನು, ತೋಟಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜಲಾಶಯಗಳಲ್ಲಿ ಒಳಹರಿವು ಹೆಚ್ಚಳವಾಗಿದೆ.

ಮಂಗಳವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಬಿದನೂರು ನಗರದಲ್ಲಿ ಅತ್ಯಧಿಕ 316 ಮಿ.ಮೀ. ಮಳೆ ದಾಖಲಾಗಿದೆ.

ಶಿವಮೊಗ್ಗದಲ್ಲಿ ಹೆಚ್ಚಿದ ನೆರೆ ಭೀತಿ:

ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಜೋರು ಮಳೆಯಾಗುತ್ತಿರುವ ಪರಿಣಾಮ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು 77 ಸಾವಿರ ಕ್ಯೂಸೆಕ್‌ ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

ಜಲಾಶಯದಲ್ಲಿ ಒಳ ಹರಿವು ಹೆಚ್ಚಳವಾಗುತ್ತಿದ್ದಂತೆ ನದಿಗೆ ಹರಿಸುವ ನೀರಿನ ಪ್ರಮಾಣವೂ ಹೆಚ್ಚಾಗುತ್ತಿರುವುದರಿಂದ ಶಿವಮೊಗ್ಗದಲ್ಲಿ ಅಪಾಯ ಮಟ್ಟವನ್ನೂ ಮೀರಿ ತುಂಗೆ ಹರಿಯುತ್ತಿದ್ದಾಳೆ. ಮೈದುಂಬಿ ಹರಿಯುತ್ತಿರುವ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಂತೆ ತಗ್ಗು ಪ್ರದೇಶದ ಜನರಲ್ಲಿ ನೆರೆ ಭೀತಿ ಹೆಚ್ಚಾಗುತ್ತಿದ್ದು, ಈಗಾಗಲೇ ನಗರದ ಸೀಗೆಹಟ್ಟಿಯ ವಿವಿಧೆಡೆ, ಇಮಾಮ್‌ ಬಾಂಡಾ, ಮಂಡ್ಕಿ ಬಟ್ಟಿ, ಸವರಿಪಾಳ್ಯ ಬಡಾವಣೆಯಲ್ಲಿ ಅನೇಕ ಮನೆಗಳು ಜಲಾವೃತವಾಗಿವೆ.

ಇದೇ ರೀತಿ ಮಳೆ ಮುಂದುವರಿದರೆ ಮುಂದೆ ಹಲವು ಬಡಾವಣೆಗಳು ಜಲಾವೃತವಾಗಲಿದ್ದು, ಮಹಾನಗರ ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಮೂರು ಪಟ್ಟು ಹೆಚ್ಚಿದ ಸರಾಸರಿ ಮಳೆ:

ಜಿಲ್ಲೆಯಲ್ಲಿ ಮಂಗಳವಾರ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಸೋಮವಾರಕ್ಕೆ ಹೊಲಿಸಿದರೆ ಮಂಗಳವಾರ ಮೂರು ಪಟ್ಟು ಸರಾಸರಿ ಮಳೆ ಹೆಚ್ಚಾಗಿದೆ.

ಸೋಮವಾರ ಜಿಲ್ಲೆಯಲ್ಲಿ 13 ಮಿ.ಮೀ. ಸರಾಸರಿ ಮಳೆ ಇದ್ದರೆ ಮಂಗಳವಾರ 37.81 ಮಿ.ಮೀ ಮಳೆಯಾಗಿದೆ. ಶಿವಮೊಗ್ಗದಲ್ಲಿ 8.70 ಮಿ.ಮೀ, ಭದ್ರಾವತಿ 9.70 ಮಿ.ಮೀ, ತೀರ್ಥಹಳ್ಳಿ 102.80 ಮಿ.ಮೀ, ಸಾಗರದಲ್ಲಿ 46.70 ಮಿ.ಮೀ, ಶಿಕಾರಿಪುರ 12.90 ಮಿ.ಮೀ, ಸೊರಬದಲ್ಲಿ 36.50 ಮಿ.ಮೀ, ಹೊಸನಗರದಲ್ಲಿ 47.40 ಮಿ.ಮೀ ಮಳೆಯಾಗಿದೆ.

ರಾಮ ಮಂಟಪದ ಮೇಲೂ ನೀರು

ತೀರ್ಥಹಳ್ಳಿ: ತಾಲೂಕಿನಲ್ಲಿ ಮಳೆ ಬಿರುಸಾಗಿದೆ. ಬೆಳಗ್ಗೆಯಿಂದ ಎಡೆಬಿಡದೆ ಮಳೆಯಾಗುತ್ತಿದೆ. ಸದ್ಯ ಹೊನ್ನೇತಾಳು, ಬಿದರಗೋಡು ಸೇರಿದಂತೆ ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ತೂದರು, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ದೇಮ್ಲಾಪುರ, ಆರಗ, ಹೆಗ್ಗೋಡು ಸೇರಿದಂತೆ ವಿವಿಧೆಡೆ ಜೋರು ಮಳೆಯಾಗುತ್ತಿರುವ ವರದಿಯಾಗಿದೆ. ಇನ್ನು, ಪ್ರಸಿದ್ಧ ರಾಮ ಮಂಟಪ ಮುಳುಗಿದೆ. ಮಂಟಪದ ಮೇಲೆ ಎರಡ್ಮೂರು ಅಡಿಗಿಂತಲೂ ಹೆಚ್ಚು ನೀರು ಹರಿಯುತ್ತಿದೆ ಎನ್ನಲಾಗುತ್ತಿದೆ.

ರಜೆ ಘೋಷಣೆ: ತುಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ತಾಲೂಕಿನಾದ್ಯಂತ ನದಿ ಪಾತ್ರದ ಜನರಲ್ಲಿ ಭಯ ಆವರಿಸಿದೆ. ತಗ್ಗು ಪ್ರದೇಶದ ನಿವಾಸಿಗಳಲ್ಲಿಯು ಆತಂಕ ಮೂಡಿದೆ. ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಜು.31ರಂದು ತೀರ್ಥಹಳ್ಳಿ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್‌ ಜಕ್ಕಣ್ಣ ಗೌಡರ್‌ ಆದೇಶಿಸಿದ್ದಾರೆ.

ಪ್ರವಾಹಕ್ಕೆ ತುತ್ತಾದ ನಗರ ಹೋಬಳಿ

ಹೊನಗರ: ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಬಿಡುವು ನೀಡದೆ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಮೂಡಿದೆ.

ನಗರ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಬೆಳಗ್ಗೆಯಿಂದ ಎಡೆಬಿಡದೆ ಮಳೆಯಾಗುತ್ತಿದೆ. ಇದರಿಂದ ತಗ್ಗು ಪ್ರದೇಶದ ಜನರಲ್ಲಿ ಭಯ ಆವರಿಸಿದೆ. ಜನರು ಮನೆಯಿಂದ ಹೊರ ಬರಲಾಗದಷ್ಟು ರಭಸವಾಗಿ ಮಳೆ ಸುರಿಯುತ್ತಿದೆ. ನಗರ ಹೋಬಳಿ ಸದ್ಯ ನೆರೆಗೆ ತುತ್ತಾಗಿದೆ.

ನಗರ ಭಾಗದಲ್ಲಿ ಭಾರಿ ಮಳೆಯಿಂದಾಗಿ ಮನೆಗಳು, ದೇವಸ್ಥಾನ ಜಲಾವೃತವಾಗಿವೆ. ನಗರ ಭಾಗದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತವಾಗಿದೆ. ಸಂಡೋಡಿಯಲ್ಲಿ ಕಿರು ಸೇತುವೆ ಮುಳುಗಿದೆ. ವಿವಿಧೆಡೆ ಮನೆಗಳು, ತೋಟಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿ ಉಂಟಾಗಿದೆ.

ರಜೆ ಘೋಷಣೆ: ಭಾರಿ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಜು.31ರಂದು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್‌ ರಶ್ಮೀ ಹಾಲೇಶ್‌ ಆದೇಶಿಸಿದ್ದಾರೆ.

ತಗ್ಗು ಪ್ರದೇಶ ಜಲಾವೃತಗೊಳ್ಳುವ ಭೀತಿ ಭದ್ರಾವತಿ : ಭದ್ರಾ ಜಲಾಶಯದಿಂದ ಮಂಗಳವಾರ ಬೆಳಿಗ್ಗೆಯಿಂದ ನದಿಗೆ ನೀರು ಬಿಡುಗಡೆಗೊಳಿಸಲಾಗುತ್ತಿದ್ದು, ಬೆಳಿಗ್ಗೆ ೬ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಗೊಳಿಸಲಾಗಿದೆ. ಸಂಜೆ ವೇಳೆಗೆ ನೀರಿನ ಪ್ರಮಾಣ ೩೦ ಸಾವಿರ ಕ್ಯುಸೆಕ್‌ನಷ್ಟು ಏರಿಕೆಯಾಗಿದೆ. ಇದರಿಂದಾಗಿ ನದಿತೀರದ ತಗ್ಗು ಪ್ರದೇಶಗಳು ಜಲಾವೃತ ಗೊಳ್ಳುವ ಭೀತಿ ಎದುರಾಗಿದೆ.

ಈಗಾಗಲೇ ನಗರದ ಹೃದಯ ಭಾಗದಲ್ಲಿ ಹಳೇ ಸೇತುವೆ ಬಳಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. ಮುನ್ನಚ್ಚರಿಕೆ ಕ್ರಮವಾಗಿ ಸಂಜೆ ೫.೩೦ರ ವೇಳೆಗೆ ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆ ಎರಡು ಕಡೆ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದೆ.

ಉಳಿದಂತೆ ಗುಂಡೂರಾವ್ ಶೆಡ್, ಎಕಿನ್ಸಾ ಕಾಲೋನಿ, ಬಿ.ಎಚ್ ರಸ್ತೆ ಅಂಬೇಡ್ಕರ್ ಕಾಲೋನಿ, ಕವಲಗುಂದಿ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಮತ್ತೊಂದೆಡೆ ಇನ್ನೂ ಕೆಲ ತಗ್ಗು ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಿ ಬೇರೆಡೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ.ಲಿಂಗನಮಕ್ಕಿಯಿಂದ ನಾಳೆ ನೀರು ಬಿಡುಗಡೆ?ಶಿವಮೊಗ್ಗ: ಲಿಂಗನಮಕ್ಕಿ ಜಲನಯನ ಪ್ರದೇಶದಲ್ಲಿ ಧಾರಕಾರ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯದಿಂದ ಆಗಸ್ಟ್‌ 1ರಂದು ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸುವ ಸಾಧ್ಯತೆ ಇದೆ.ಗರಿಷ್ಠ ನೀರಿನ ಮಟ್ಟ 1819 ಅಡಿ ನೀರಿನ ಸಾಮರ್ಥ್ಯ ಇರುವ ಲಿಂಗನಮಕ್ಕಿ ಜಲಾಶಯ ಸದ್ಯ 1811.50 ಅಡಿಗೆ ತಲುಪಿದೆ. ಭರ್ತಿಗೆ ಇನ್ನು 7.50 ಅಡಿ ಮಾತ್ರ ಬಾಕಿ ಇದೆ. ಮಂಗಳವಾರ ಸುರಿದ ಧಾರಾಕಾರ ಮಳೆಯಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಪ್ರಸ್ತುತ 92 ಸಾವಿರ ಕ್ಯುಸೆಕ್‌ ಒಳ ಹರಿವಿದೆ.

ಇನ್ನೂ ಜು.31ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಲಾಶಯ ಮಟ್ಟ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆ.1ರಿಂದ ಜಲಾಶಯದಿಂದ ನದಿಗೆ ನೀರುಬಿಡುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಅಚ್ಚುಕಟ್ಟು ವ್ಯಾಪ್ತಿಯ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ಜೀಪ್‌ಗೆ ಮೈಕ್‌ ಕಟ್ಟಿಕೊಂಡು ನದಿ ಪಾತ್ರದ ಗ್ರಾಮಗಳಿಗೆ ತೆರಳಿ ಅನೌನ್ಸ್‌ ಮಾಡಲಾಗುತ್ತಿದೆ.