ಮಳೆ ಮುಂಜಾಗ್ರತಾ ಕಾರ್ಯಪಡೆ ಸನ್ನದ್ಧ

| Published : Apr 16 2024, 01:00 AM IST

ಸಾರಾಂಶ

ಮಾನ್ಸೂನ್ ಶುರುವಾದ ತಕ್ಷಣ ಮಳೆ ನೀರು ಚರಂಡಿಗಳಲ್ಲಿ ತುಂಬಿ ರಸ್ತೆ, ಮನೆಗಳಿಗೆ ನುಗ್ಗುವ ಸಂಭವಗಳಿದ್ದು, ಈ ಅವ್ಯವಸ್ಥೆಯನ್ನು ತಪ್ಪಿಸುವ ಸಲುವಾಗಿ 15 ದಿನಗಳಲ್ಲಿ ಚರಂಡಿ ಸ್ವಚ್ಛತೆಗೊಳಿಸಿ.

ಹುಬ್ಬಳ್ಳಿ:

ಮಳೆಗಾಲದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ಮುಂಜಾಗೃತಾ ಕಾರ್ಯಪಡೆ ಸನ್ನದ್ಧವಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.ಅವರು ಸೋಮವಾರ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಬರುವ ಮಾನ್ಸೂನ್ ನಲ್ಲಿ ನಿರ್ವಹಿಸಬೇಕಾದ ಕರ್ತವ್ಯದ ಕುರಿತು ಹಮ್ಮಿಕೊಂಡಿದ್ದ ತುರ್ತುಸಭೆಯಲ್ಲಿ ಮಾತನಾಡಿದರು.

ಮಾನ್ಸೂನ್ ಶುರುವಾದ ತಕ್ಷಣ ಮಳೆ ನೀರು ಚರಂಡಿಗಳಲ್ಲಿ ತುಂಬಿ ರಸ್ತೆ, ಮನೆಗಳಿಗೆ ನುಗ್ಗುವ ಸಂಭವಗಳಿದ್ದು, ಈ ಅವ್ಯವಸ್ಥೆಯನ್ನು ತಪ್ಪಿಸುವ ಸಲುವಾಗಿ 15 ದಿನಗಳಲ್ಲಿ ಚರಂಡಿ ಸ್ವಚ್ಛತೆಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಹೊಸದಾಗಿ 3 ಜೆಸಿಬಿ ಖರೀದಿದಿಸಿದ್ದು ವಿಭಾಗವಾರು ಇವುಗಳನ್ನು ಉಪಯೋಗಿಸಿ ನಾಲಾ ತಕ್ಷಣ ಸ್ವಚ್ಛಗೊಳಿಸಿ ಮಾಹಿತಿ ನೀಡುವಂತೆ ವಲಯ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದರು.

ಗಾಳಿ, ಮಳೆಯಿಂದ ಮರ-ಗಿಡಗಳು ಮುರಿದು ಬೀಳುವಂತಹ‌ ಸಂಭವಗಳಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಟ್ರ್ಯಾಕ್ಟರ್, ಮರ ಕತ್ತರಿಸುವ ಯಂತ್ರ, ಇನ್ನಿತರ ಸಲಕರಣೆಗಳ ಜತೆ ಮಳೆ ಮುಂಜಾಗ್ರತಾ ಕಾರ್ಯಪಡೆ ತಂಡವು ಯಾವುದೇ ಸಮಯದಲ್ಲಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರಿಸಲಾಗಿದೆ. ವಲಯವಾರು ವಲಯ ಸಹಾಯಕ ಆಯುಕ್ತರು, ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಪೌರಕಾರ್ಮಿಕರ ಒಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲಾಗಿದೆ. ಹಿಂದಿನ ವರ್ಷ ಮಳೆಯಿಂದ ತೊಂದರೆ ಉಂಟಾದ ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ವಲಯವಾರು ₹ 5 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಪಾಲಿಕೆಯಿಂದ ಕೈಗೊಂಡ ಸಿದ್ಧತೆ:

ಬಹುಮಹಡಿ ಕಟ್ಟಡಗಳ ತಳಭಾಗದಲ್ಲಿ ನೀರು ನುಗ್ಗಿದರೆ ನೀರು ಹೊರತೆಗೆಯುವ ಸಕ್ಕಿಂಗ್ ಯಂತ್ರವಿರುವ ವಾಹನ, ಜೆಸಿಬಿ, ಟ್ರ್ಯಾಕ್ಟರ್, ಮರ ಕತ್ತರಿಸುವ ಯಂತ್ರ, ನಾಲಾ ಡಿ ಶೀಲ್ಟ್ ಮಶಿನ್, ಡಿ ವಾಟರಿಂಗ್ ಪಂಪ್ಸ್, ಸ್ವಚ್ಛತಾ ಸಲಕರಣೆ, ಮಳೆ ಮುಂಜಾಗ್ರತಾ ಕಾರ್ಯಪಡೆ ಹಾಗೂ ಇನ್ನಿತರ ಅವಶ್ಯಕ ಸಾಮಗ್ರಿಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆಯಿಂದ ವಿಪತ್ತು ಸಂಭವಿಸಿದ್ದಲ್ಲಿ ಆಯಾ ವಲಯ ಕಚೇರಿ ಸಹಾಯಕ ಆಯುಕ್ತರ ದೂರವಾಣಿ ಸಂಖ್ಯೆ ನೀಡಲಾಗಿದ್ದು, ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು.

ವಲಯ ಸಹಾಯಕ ಆಯುಕ್ತರು 1-9880422978, 2-8123251524, 3-9972391108, 4- 9880371894, 5- 8123045672, 6- 9945956676, 7- 9964049279, 8- 9448017980, 9- 9448746428, 10- 9448739454, 11- 9845589606, 12- 9972391108. ತೋಟಗಾರಿಕೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು- 9663581163, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿದ್ಯುತ್- 9448783522 ಈ ಸಂಖ್ಯೆಗಳಿಗೆ ಕರೆ ಮಾಡುವಂತೆ ತಿಳಿಸಿದರು.

ಈ ವೇಳೆ ಉಪ ಆಯುಕ್ತ ಇ. ತಿಮ್ಮಪ್ಪ, ವಲಯ ಸಹಾಯಕ ಆಯುಕ್ತರು, ಕಾರ್ಯನಿರ್ವಾಹಕ ಅಭಿಯಂತರರು, ಹಿರಿಯ ಹಾಗೂ ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ತೋಟಗಾರಿಕಾ ಇಲಾಖೆ ಸಿಬ್ಬಂದಿ ಇದ್ದರು.