ಸಾರಾಂಶ
ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಎಡಬಿಡದೇ ಜೋರಾಗಿ ಮಳೆ ಸುರಿಯುತ್ತಿದೆ.
ಭಟ್ಕಳ: ತಾಲೂಕಿನಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಗ್ರಾಮಾಂತರ ಭಾಗದಲ್ಲಿ ತೋಟಗಳಿಗೆ ನೀರು ನುಗ್ಗಿ ಗೊಬ್ಬರ ಮುಂತಾದವು ಕೊಚ್ಚಿ ಹೋದ ಘಟನೆ ನಡೆದಿದೆ.
ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಎಡಬಿಡದೇ ಜೋರಾಗಿ ಮಳೆ ಸುರಿಯುತ್ತಿದೆ. ವ್ಯಾಪಕ ಮಳೆಗೆ ಜನರು ಮನೆಯಿಂದ ಕೆಲಸ ಕಾರ್ಯಗಳಿಗೆ ಹೊರಬೀಳದಂತಾಗಿದೆ. ಮಳೆಯೊಂದಿಗೆ ಗಾಳಿಯೂ ರಭಸವಾಗಿ ಬೀಸುತ್ತಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ಶನಿವಾರ ಬೀಸಿದ ಭಾರೀ ಗಾಳಿಗೆ ಹಲವು ಮರಗಳು ನೆಲಕ್ಕುರುಳಿದೆ. ಕಟಗಾರಕೊಪ್ಪದ ಹೆಗ್ಗದ್ದೆಯ ವಿಷ್ಣುಮೂರ್ತಿಹೆಗಡೆ ಮತ್ತಿತರ ತೋಟಕ್ಕೆ ಹೊಳೆ ನೀರು ನುಗ್ಗಿ ಹಾನಿಯಾಗಿದೆ.ಹೊಳೆಯ ನೀರು ಒಮ್ಮೇಲೆ ಇವರ ತೋಟಕ್ಕೆ ನುಗ್ಗಿದ್ದರಿಂದ ತೋಟವೇ ಹೊಳೆಯಾಗಿ ಮಾರ್ಪಟ್ಟಿದೆ. ತೋಟದಲ್ಲಿದ್ದ ಅಡಕೆ, ತೆಂಗು, ಬಾಳೆ ಮತ್ತಿತರ ಗಿಡಗಳು ಕೊಚ್ಚಿಕೊಂಡು ಹೋಗಿದೆ. ಇನ್ನು ಅಡಕೆ ಮರಕ್ಕೆ ಹಾನಿಯಾಗಿದೆ. ನೀರಿನ ರಭಸಕ್ಕೆ ತೋಟಕ್ಕೆ ಹಾಕಿದ ಗೊಬ್ಬರ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ತೋಟವೇ ಹೊಳೆಯಾಗಿದ್ದರಿಂದ ಕೆಸರುಮಯವಾಗಿ ಎಲ್ಲಿಯೂ ಹೋಗದ ಸ್ಥಿತಿ ಉಂಟಾಗಿದೆ.
ಈ ಸಲದ ಮಳೆ ಹಲವು ಅವಾಂತರವನ್ನುಂಟು ಮಾಡಿದೆ. ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಮಾವಳ್ಳಿ ೧ ನಿವಾಸಿ ಈಶ್ವರ ನಾಗಪ್ಪ ನಾಯ್ಕ ಎನ್ನುವವರ ಮನೆಯ ಚಾವಣಿಯ ಹಂಚುಗಳು ಹಾರಿ ಹೋಗಿ ಭಾಗಶಃ ಹಾನಿಯಾಗಿದೆ. ಕುಪ್ಪ ಸಣಕೂಸ ನಾಯ್ಕ ಎನ್ನುವವರ ಮನೆಯ ಅಡುಗೆ ಕೋಣೆ ಕುಸಿದು ಬಿದ್ದು ಹಾನಿಯಾಗಿದೆ. ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಾಂದ್‌ನಲ್ಲಿ ಮಾದೇವ ದುರ್ಗಪ್ಪ ನಾಯ್ಕ ಎನ್ನುವ ಮನೆಯ ಗೋಡೆ ಕುಸಿದಿದ್ದಲ್ಲದೇ ಸಂಪೂರ್ಣ ಗೋಡೆ ಬೀಳುವ ಹಂತದಲ್ಲಿದ್ದು ಅಪಾಯದಲ್ಲಿದೆ. ಬೇಂಗ್ರೆ ಗ್ರಾಮದ ಲಕ್ಷ್ಮೀ ಗಣಪಯ್ಯ ದೇವಾಡಿಗ ಅವರ ಮನೆಯ ಹಂಚುಗಳು ಬಿರುಗಾಳಿಯಿಂದ ಹಾರಿ ಹೋಗಿದೆ. ಹಾನಿಯಾದ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಬಗ್ಗೆ ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ. ತಾಲೂಕಿನಲ್ಲಿ ಶನಿವಾರ ಬೆಳಿಗ್ಗೆ ವರೆಗೆ ೫೭ ಮಿ.ಮೀ. ಮಳೆಯಾಗಿದೆ. ಇಲ್ಲಿಯ ತನಕ ೩೩೪೭.೨ ಮಿ.ಮಿ. ಮಳೆಯಾಗಿದೆ.