ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಜಿಲ್ಲೆಯ ಜೇವರ್ಗಿ, ಯಡ್ರಾಮಿ, ಅಫಜಲಪುರ, ಚಿತ್ತಾಪುರ, ಚವಡಾಪೂರ ಸೇರಿದಂತೆ ಹಲವು ತಾಲೂಕುಗಳಲ್ಲಿ ಬುಧವಾರ ತಡರಾತ್ರಿ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಹಳ್ಳಕೊಳ್ಳ ತುಂಬಿ ಹರಿಯುತ್ತ ಮತ್ತೆ ಸಂಚಾರಕ್ಕೆ ಸಂಚಕಾರ ತಂದಿವೆ.ಯಡ್ರಾಮಿಯಲ್ಲಂತೂ ಮಳೆಯ ನೀರು ಹಲವಾರು ಮನೆಗಳಿಗೆ ನುಗ್ಗಿ ಜನ ಜಾಗರಣೆ ಮಾಡುವಂತಾಗಿದೆ.
ಧಾರಕಾರ ಮಳೆಗೆ ಅಫಜಲಪುರ ತಾಲೂಕಿನ ನೀಲೂರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ.ಈ ಸಂದರ್ಭದಲ್ಲಿ ಮಳೆಯಲ್ಲಿ ಕುರಿ ಕಾಯಲು ಹೋಗಿದ್ದ ಹಲವರು ಕುರಿಗಾಹಿಗಳು ಈ ಹಳ್ಳದ ನೀರಲ್ಲಿ ಸಿಲುಕಿದ್ದು ಅವರೆಲ್ಲರನ್ನು, ಅವರ ಕುರಿಗಳನ್ನು ರಕ್ಷಣೆ ಮಾಡಲಾಗಿದೆ.ತುಂಬಿ ಹರಿವ ಹಳ್ಳದಲ್ಲಿ ಸ್ಥಳೀಯ ನೀಲೂರಿನ ಹಲವರು ವಿಕಲಚೇತನ ಕುರಿಗಾಹಿಯನ್ನು ಹೆಗಲ ಮೇಲೆ ಕೂರಿಸಿ ಹಳ್ಳ ದಾಟಿಸಿದ್ದಾನೆ. ಇನ್ನೂ ತುಂಬಿ ಹರಿಯುವ ಹಳ್ಳದಲ್ಲಿಯೇ ಮಾನವ ಸರಪಳ್ಳಿ ನಿರ್ಮಿಸಿ ಕುರಿ ದಾಟಿಸಿದ್ದಾರೆ.
ಧಾರಾಕಾರ ಮಳೆಯಿಂದ ಕಲಬುರಗಿ ದಕ್ಷಿಣದ ನಂದಿಕೂರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಊರಿನ ಅಗಸಿ ಸೇರಿದಂತೆ ಅನೇಕ ರಸ್ತೆಗಳು ಜಲಾವೃತಗೊಂಡಿವೆ. ಮನೆಗಳಿಗೂ ನೀರು ನುಗ್ಗಿ ಅಪಾರ ದವಸ ಧಾನ್ಯ ಹಾಳಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.ಮಳೆ ಅವಾಂತರ: ಗಾಂಧಿನಗರ ಸರ್ಕಾರಿ ಶಾಲೆಯೊಳಗೆ ನುಗ್ಗಿದ ನೀರು, ಚಿತ್ತಾಪುರದ ರಾವೂರಿನ ಗ್ರಾಪಂ ವ್ಯಾಪ್ತಿಯ ಗಾಂಧಿನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಬಾರಿ ಮಳೆಯ ಕಾಟ ತೀವ್ರ ಸಂಕಷ್ಟ ತಂದಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆಯ ಆವರಣ ಹಾಗೂ ತರಗತಿಗಳೊಳಗೆ ನೀರು ನುಗ್ಗಿದ್ದು, ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಪಾಠ ನಡೆಸಲು ಅಡಚಣೆ ಉಂಟಾಗಿದೆ.
ವಿಶೇಷವೆಂದರೆ, ಪ್ರತಿವರ್ಷವೂ ಮಳೆ ಅವಾಂತರ ಇದ್ದರೂ ಈ ಶಾಲೆಗೆ ನೀರು ನುಗ್ಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಶಾಲೆಯೊಳಗೆ ನೀರು ನುಗ್ಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಮಕ್ಕಳು ನೆನೆಯುವ ನೆಲದಲ್ಲಿ ಕುಳಿತು ಪಾಠ ಕೇಳುವಂತ ದುಸ್ಥಿತಿ ಎದುರಾಗಿದೆ.ಪರೀಕ್ಷೆಗೆ ತೊಂದರೆ: ಪ್ರಸ್ತುತ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನೀರು ನುಗ್ಗಿರುವುದು ವಿದ್ಯಾರ್ಥಿಗಳ ಪರೀಕ್ಷಾ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಿದೆ. ನೀರಿನಲ್ಲಿ ಕುಳಿತು ಉತ್ತರ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳು ಹಾಗೂ ಶಿಕ್ಷಕರು ಶಿಕ್ಷಣಾಧಿಕಾರಿಗಳ ಗಮನಕ್ಕೆ ಮನವಿ ಮಾಡಿದ್ದಾರೆ.
ಮಳೆ ಪೀಡಿತ ನಂದಿಕೂರ ಗ್ರಾಮಕ್ಕೆ ಮಾಜಿ ಶಾಸಕ ದತ್ತಾತ್ರೇಯ ರೇವೂರ್ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ನೊಂದವರೊಂದಿಗೆ ಮಾತನಾಡಿದ್ದಾರೆ. ಗ್ರಾಮಸ್ಥರ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.