ಜಿಲ್ಲೆಯಲ್ಲಿ ಮುಂದುವರೆದ ಮಳೆಯ ರುದ್ರನರ್ತನ

| Published : Jul 27 2025, 12:01 AM IST

ಜಿಲ್ಲೆಯಲ್ಲಿ ಮುಂದುವರೆದ ಮಳೆಯ ರುದ್ರನರ್ತನ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ದವಸ ದಾನ್ಯಗಳು, ಪೀಠೋಪಕರಣ ಸಂಪೂರ್ಣ ನಾಶಗೊಂಡಿವೆ

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಡಗಿ ತಾಲೂಕಿನ ಅತ್ತಿಕಟ್ಟೆ ಹಾಗೂ ದುಮ್ಮಿಹಾಳ ಗ್ರಾಮಗಳ ಕೆರೆ ಕೋಡಿ ಒಡೆದು ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದ್ದರೆ, ಹಾವೇರಿ ತಾಲೂಕಿನ ದೇವಗಿರಿ ಯಲ್ಲಾಪೂರದಲ್ಲಿ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ.

ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ನಿರಂತರ ಮಳೆ ಸುರಿದಿದ್ದರಿಂದ ಬ್ಯಾಡಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದ ಕೆರೆ ಹಾಗೂ ದುಮ್ಮಿಹಾಳ ಕೆರೆ ಒಡ್ಡು ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದ ಪರಿಣಾಮ ಬೆಳೆಗಳು ಕೊಚ್ಚಿಹೋಗಿ ಅಪಾರ ಹಾನಿ ಸಂಭವಿಸಿದೆ.

ಇನ್ನು ಹಾವೇರಿ ತಾಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದಲ್ಲಿ ಮಂಜಪ್ಪ ದಳವಾಯಿ ಎಂಬುವವರ ಮನೆ ಮೇಲ್ಛಾವಣಿ ಕುಸಿದು ಬಿದ್ದಿದ್ದು, ತಕ್ಷಣವೇ ಕುಟುಂಬದವರು ಮನೆಯಿಂದ ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಮನೆ ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ದವಸ ದಾನ್ಯಗಳು, ಪೀಠೋಪಕರಣ ಸಂಪೂರ್ಣ ನಾಶಗೊಂಡಿವೆ. ಅಡುಗೆ ಸಾಮಾನು, ಬಟ್ಟೆ ಬರೆಗಳು, ಮಕ್ಕಳ ಶಾಲಾ ಬ್ಯಾಗ್, ಸಮವಸ್ತ್ರ, ಪಠ್ಯ ಪುಸ್ತಕಗಳು ಅವಶೇಷಗಳಡಿ ಸಿಲುಕಿದ್ದರಿಂದ ಹುಡುಕಲು ಪರದಾಡುವಂತಾಯಿತು. ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಕೊಳಕಾದ ಬ್ಯಾಗ್, ಶೂ, ನೋಟ್ ಬುಕ್ ಎತ್ತಿಕೊಂಡ ಮಕ್ಕಳು ಶಾಲೆಗೆ ತೆರಳಿದರು. ಈ ವೇಳೆ ಕುಟುಂಬಸ್ಥರು, ₹5 ಸಾವಿರ, ₹10 ಸಾವಿರ ಪರಿಹಾರ ಕೊಟ್ಟರೆ ಏನ್ ಮಾಡೋದು? ದಯವಿಟ್ಟು ಮನೆ ಬಿದ್ದಿರೋದಕ್ಕೆ ಸಮಂಜಸ ಪರಿಹಾರ ನೀಡಿ ನಮಗೆ ಮನೆ ಕಟ್ಟಿಸಿಕೊಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.