ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಮಳೆ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೈಸೂರಿನಿಂದ ಕೊಡಗಿನ ಆನೆಚೌಕೂರು ಮೂಲಕ ಆಗಮಿಸಿದ ಮುಖ್ಯಮಂತ್ರಿಗಳನ್ನು ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಬರ ಮಾಡಿಕೊಂಡರು.
ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಕುಟ್ಟದ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳು ಮತ್ತು ಸ್ಥಳೀಯರ ಜೊತೆ ಚರ್ಚಿಸಿದರು.ರಸ್ತೆ ಕುಸಿತದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದು , ಇಲ್ಲಿ ತೂಗು ಸೇತುವೆ ನಿರ್ಮಿಸುವ ಜೊತೆಗೆ ತುರ್ತಾಗಿ ರಸ್ತೆ ನಿರ್ಮಾಣದ ಜೊತೆಗೆ ಇತರೆ ದುರಸ್ತಿ ಕಾರ್ಯಗಳನ್ನು ಮುಗಿಸುವಂತೆ ಸೂಚಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗುಡ್ಡ ಕುಸಿತದ ಪರಿಣಾಮಗಳನ್ನು ಮತ್ತು ತೆಗೆದುಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗೆ ವಿವರಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಬೋಸ್ ರಾಜು, ಶಾಸಕರಾದ ಎ.ಎಸ್. ಪೊನ್ನಣ್ಣ , ಡಾ. ಮಂತರ್ ಗೌಡ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಭೋಜನದ ಬಳಿಕ ಕೆದಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿ, ಹೆಚ್ಚಿನ ಮಳೆಯಿಂದ ಹಾನಿಯಾಗಿರುವ ರಸ್ತೆಯನ್ನು ಪರಿಶೀಲಿಸಿದರು. ಇದೇ ಸಂದರ್ಭ ಸಂತ್ರಸ್ತರೊಂದಿಗೆ ಚರ್ಚೆ ನಡೆಸಿದರು.ಸಾಂತ್ವನ ಹೇಳಿದ ಸಿಎಂ:
ವಯನಾಡಿಗೆ ಅಜ್ಜ ಅಜ್ಜಿ ಮನೆಗೆ ಹೋಗಿ ಭೂ ಕುಸಿತದಲ್ಲಿ ಮೃತಪಟ್ಟ ಬಾಲಕ ರೋಹಿತ್ ತಾಯಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರ ಘೋಷಿಸಿದರು.ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದ 4 ನೇ ತರಗತಿ ವಿದ್ಯಾರ್ಥಿ ರೋಹಿತ್ ಮೃತಪಟ್ಟ ವಿದ್ಯಾರ್ಥಿ. ಬಾಲಕನ ತಾಯಿ ಕವಿತಾ ಜೊತೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದರು.