ಸಾರಾಂಶ
ಭಾರಿ ಮಳೆ, ಗಾಳಿಗೆ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ರೈತರ ಅಡಕೆ ತೋಟಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಕೆಲ ಗ್ರಾಮಗಳ ರೈತರ ಅಡಕೆ, ತೆಂಗು ಮತ್ತು ಮೆಕ್ಕೆಜೋಳ ಸೇರಿ ಇತರೆ ಬೆಳೆಗಳಿಗೆ ಶನಿವಾರ ಸುರಿದ ಭಾರಿ ಮಳೆಗಾಳಿಗೆ ತೀವ್ರ ಹಾನಿಯಾಗಿದ್ದು, ತಕ್ಷಣ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.ಭಾನುವಾರ ತಾಲೂಕಿನ ಮಾಸಡಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಅಧಿಕಾರಿಗಳಿಂದ ಕಾಟಾಚಾರದ ಬೆಳೆ ನಷ್ಟ ಸಮೀಕ್ಷೆ ಮಾಡಿಸಿ, ಎಕರೆಗೆ 5ರಿಂದ 6 ಸಾವಿರ ರು. ಪರಿಹಾರ ನೀಡದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ, ರೈತರ ಪರ ಹಾಗೂ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದು ಎಚ್ಚರಿಸಿದರು.ಶನಿವಾರ ಸಂಜೆ ಸುಮಾರು 30ಕ್ಕೂ ಹೆಚ್ಚು ನಿಮಿಷ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಗಾಳಿ ಹೊಡೆತಕ್ಕೆ ಫಲಕ್ಕೆ ಬಂದ ಅಡಕೆ, ತೆಂಗಿನ ಮರಗಳು ನೆಲಕ್ಕುರುಳಿವೆ. ಇದರಿಂದ ರೈತರು ಕಣ್ಣೀರು ಸುರಿಸುತ್ತಿದ್ದಾರೆ. ರೈತರ ಕಣ್ಣೀರೊರೆಸುವ ಕೆಲಸವನ್ನು ತಕ್ಷಣ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವರ್ಷಕ್ಕೆ ಫಲಕ್ಕೆ ಬಂದ ಒಂದು ಎಕರೆ ಜಮೀನಿನ ಅಡಕೆಗೆ ಕನಿಷ್ಠ ₹1ಲಕ್ಷ ರೈತರಿಗೆ ದೊರೆಯುತ್ತಿತ್ತು, ಇದನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರ ಒಂದು ಎಕರೆ ಅಡಕೆ ನಷ್ಟಕ್ಕೆ ಕನಿಷ್ಠ ₹15ರಿಂದ 20 ಲಕ್ಷ ಪರಿಹಾರ ನೀಡಬೇಕು ಎಂದರು.
ಈ ಹಿಂದೆ ಮಳೆಗೆ ಬಿದ್ದಿರುವ ಮನೆಗಳಿಗೆ ಸರ್ಕಾರ ಕೇವಲ 5ರಿಂದ 6 ಸಾವಿರ ರು. ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದೆ. ಪೂರ್ಣ ಬಿದ್ದ ಮನೆಗೆ ಕೇವಲ ₹1.20ಲಕ್ಷ ಪರಿಹಾರ ನೀಡಿದೆ. ಬಿಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ತಾಲೂಕಿನಲ್ಲಿ 4 ಸಾವಿರ ಮನೆ ಬಿದ್ದಿದ್ದು, ಅಂದು ನಾನು ಪೂರ್ಣ ಬಿದ್ದ ಮನೆಗೆ ₹5 ಲಕ್ಷ ವರೆಗೆ ಪರಿಹಾರವನ್ನು ನಮ್ಮ ಸರ್ಕಾದಿಂದ ಕೊಡಿಸಿದ್ದೆ, ಬೀಳುವ ಹಂತದಲ್ಲಿದ್ದ ಮನೆಗಳನ್ನು ಭವಿಷ್ಯದಲ್ಲಿ ಜೀವ ಹಾನಿಯಾಗಬಾರದು ಎಂದು ಪೂರ್ಣ ಬೀಳಿಸಿ ಸರ್ಕಾರದಿಂದ ಪರಿಹಾರ ಕೊಡಿಸಿದ್ದೆ, ಅಂದು ನನ್ನ ವಿರೋಧಿಗಳು ಟೀಕೆ ಮಾಡಿದ್ದರು. ಅಂದು ಬಿದ್ದ ಮನೆಗಳ ಮಾಲೀಕರು ಹೊಸ ಮನೆ ಕಟ್ಟಿಕೊಂಡು ನೆಮ್ಮದಿ ಬದುಕು ಸಾಗಿಸುವುದಲ್ಲದೆ ಗೃಹ ಪ್ರವೇಶಕ್ಕೆ ನನ್ನನ್ನು ಆಹ್ವಾನಿಸುತ್ತಿದ್ದಾರೆ, ಸಂತೋಷದಿಂದ ಗೃಹ ಪ್ರವೇಶಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.ಸರ್ಕಾರ ತಕ್ಷಣ ಅಡಕೆ, ತೆಂಗು ಹಾಗೂ ಮೆಕ್ಕೆ ಜೋಳಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.