ಮಳೆ ಅಭಾವ: ರೈತರಿಂದ ಬೆಳೆ ವಿಮೆ ಮಾಡಿಸಿ

| Published : Jul 02 2025, 12:20 AM IST

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಮಳೆ ಆಶಾದಾಯವಾಗಿ ಕಂಡು ಬರುತ್ತಿಲ್ಲ. ಮುಂದೆಯೂ ಹೀಗೆ ಆದರೆ ರೈತರಿಗೆ ಕಷ್ಟವಾಗುತ್ತದೆ. ಆದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸುವ ಕುರಿತು ಕೃಷಿ ಇಲಾಖೆ ಮಾಹಿತಿ ನೀಡಬೇಕು.

ಕೊಪ್ಪಳ:

ಜಿಲ್ಲೆಯಲ್ಲಿ ಈ ಬಾರಿ ಮಳೆ ಆಶಾದಾಯವಾಗಿ ಕಂಡು ಬರುತ್ತಿಲ್ಲ. ಹಾಗಾಗಿ ರೈತರಿಗೆ ಬೆಳೆ ವಿಮೆ ಮಾಡಲು ತಿಳಿಸಬೇಕೆಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಕೃಷಿ ಇಲಾಖೆ ಜಂಟಿ ನಿರ್ದೆಶಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿಲ್ಲ. ಮುಂದೆಯೂ ಹೀಗೆ ಆದರೆ ರೈತರಿಗೆ ಕಷ್ಟವಾಗುತ್ತದೆ. ಆದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸುವ ಕುರಿತು ಮಾಹಿತಿ ನೀಡಬೇಕೆಂದು ಕೃಷಿ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲೆಯಲ್ಲಿ ಪ್ರಾಯೋಗಿಕ ಬೆಳೆ ಕಟಾವು ಹೇಗೆ ನಡೆಯುತ್ತಿದೆ. ಕಳೆದ ಸಲ ಸಮಸ್ಯೆಗಳಾಗಿದ್ದರೆ ಅವುಗಳು ಈ ಸಲ ಮರುಕಳಿಸದಂತೆ ನೋಡಿಕೊಳ್ಳಬೇಕು. ತಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕು. ಯಾವುದೇ ನೆಪ ಹೇಳುವಂತಿಲ್ಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಾಮಾಜಿಕ ಅರಣ್ಯ ವಿಭಾಗದಿಂದ ಮುಂದಿನ ವರ್ಷ ಜಿಲ್ಲೆಯಲ್ಲಿ ಒಂದು ಲಕ್ಷ ಗಿಡ ನೆಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಹಚ್ಚುವುದರಿಂದ ಜತೆಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಕಾಂಪೌಂಡ್ ಒಳಗಡೆ ಆಯಾ ಇಲಾಖೆಯಿಂದ ಅವರಿಗೆ ಎಷ್ಟು ಗಿಡ ಬೇಕೆಂಬ ಮಾಹಿತಿ ಪಡೆದು ಗಿಡ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ ಪೆಂಡಾರಿಗೆ ಸೂಚಿಸಿದರು.

ಕೃಷಿ ಸಂಬಂಧಿಸಿದ ಇಲಾಖೆಗಳು ಹಾಕಿಕೊಂಡ ಐದು ವರ್ಷಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ. ಪೊಟೇಶನಲ್ ಜಿಐ ಟ್ಯಾಗ್ ಯಾವ ಉತ್ಪನ್ನ ನಮ್ಮ ಜಿಲ್ಲೆಯಲ್ಲಿದೆ. ಶ್ರೀಗಂಧ ಬೆಳೆಸುವವರಿಗೆ ಪ್ರೋತ್ಸಾಹಿಸಬೇಕು. ಯಾವುದೇ ಬೀಜ ಮತ್ತು ರಸಗೊಬ್ಬರಗಳ ಸಮಸ್ಯೆಗಳಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ರೇಷ್ಮೆ, ರೈಸ್ ಟೆಕ್ನಾಲಜಿ ಪಾರ್ಕ್ ಸೇರಿದಂತೆ ಇತರೆ ಕೃಷಿ ಸಂಬಂಧಿಸಿದ ಇಲಾಖೆಯ ವಿಷಯಗಳ ಕುರಿತು ಜಿಲ್ಲಾಧಿಕಾರಿ ಚರ್ಚಿಸಿದರು.

ಸಭೆ ನಂತರ ಜಿಲ್ಲಾಧಿಕಾರಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಕರಪತ್ರ ಬಿಡುಗಡೆಗೊಳಿಸಿದರು. ಈ ವೇಳೆ ಜಿಪಂ ಸಿಇಒ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ., ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಕೃಷ್ಣ ಉಕ್ಕುಂದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ್ ಪೆಂಡಾರಿ ಸೇರಿದಂತೆ ಕೃಷಿ ಹಾಗೂ ಇತರೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.