ಕಂಪ್ಲಿಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ, ಧರೆಗುರುಳಿದ ಮರ

| Published : May 04 2025, 01:30 AM IST

ಸಾರಾಂಶ

ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಮಧ್ಯರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮರಗಳು ಧರೆಗುರುಳಿವೆ, ವಿದ್ಯುತ್‌ ಪರಿವರ್ತಕಗಳು ಸುಟ್ಟಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ಒಣಗಲು ಹಾಕಿದ್ದ ಬತ್ತಕ್ಕೆ ಹಾನಿಯಾಗಿದೆ.

ಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಮಧ್ಯರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಶುಕ್ರವಾರ ಬೆಳಗ್ಗೆಯಿಂದ ತಾಲೂಕಿನೆಲ್ಲೆಡೆ 40 ಡಿಗ್ರಿಯಷ್ಟು ಬಿಸಿಲಿದ್ದು, ರಾತ್ರಿಯ ವರೆಗೂ ಬಿಸಿ ವಾತಾವರಣ ಇತ್ತು. ಮೋಡ ಇರಲಿಲ್ಲ. ಮಧ್ಯರಾತ್ರಿಯ ವೇಳೆ ಇದ್ದಕ್ಕಿದ್ದಂತೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ತಾಲೂಕಿನಲ್ಲಿ 28.4 ಮಿಲಿಮೀಟರ್ ಮಳೆಯಾಗಿದೆ. ಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆಗೆ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿ ಒಂದು, ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ಒಂದು ಬೃಹದಾಕಾರದ ಮರ ಉರುಳಿತು. ಇದಲ್ಲದೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮರಗಳು ಉರುಳಿಬಿದ್ದ ಬಗ್ಗೆ ವರದಿಯಾಗಿದೆ. ಸಂಚಾರಕ್ಕೆ ಅಲ್ಲಲ್ಲಿ ವ್ಯತ್ಯಯ ಉಂಟಾಗಿತ್ತು. ಅಲ್ಲದೇ ಮರದ ರೆಂಬೆ-ಕೊಂಬೆಗಳು ವಿದ್ಯುತ್ ತಂತಿಗಳಿಗೆ ಸಿಲುಕಿದ್ದವು. ರಾತ್ರಿಯಿಂದಲೇ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ಹೋಟೆಲ್, ಬೇಕರಿ, ಜ್ಯೂಸ್ ಸೆಂಟರ್ ಸೇರಿ ಅನೇಕ ವ್ಯಾಪಾರ-ವಹಿವಾಟಿಗೆ ತೊಂದರೆಯಾಯಿತು.

ಸುಟ್ಟುಹೋದ ವಿದ್ಯುತ್ ಪರಿವರ್ತಕಗಳು: ಶುಕ್ರವಾರ ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಪಟ್ಟಣದಲ್ಲಿನ 33 ಕೆವಿ ಎಂ.ವಿ.ಎಸ್. ಸಬ್ ಸ್ಟೇಷನ್‌ನಲ್ಲಿನ 63 ಕೆವಿಯ ವಿದ್ಯುತ್ ಪರಿವರ್ತಕ, ನಡುವಿನ ಮಸೀದಿ ಬಳಿಯ ವಿದ್ಯುತ್ ಪರಿವರ್ತಕ ಸೇರಿ ತಾಲೂಕಿನಲ್ಲಿ 3 ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ಸುಟ್ಟು ಹೋದ ವಿದ್ಯುತ್ ಪರಿವರ್ತಕಗಳ ವ್ಯಾಪ್ತಿಯಲ್ಲಿನ ಮನೆಗಳಿಗೆ ಶುಕ್ರವಾರ ರಾತ್ರಿಯಿಂದ ಹಿಡಿದು ಶನಿವಾರ ರಾತ್ರಿಯ ವರೆಗೂ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ವಿದ್ಯುತ್ ಇಲ್ಲದಿರುವುದು ಇವುಗಳ ಮಧ್ಯೆ ಜನ ಹೈರಾಣಾಗಿ ಹೋಗಿದ್ದರು. ರಾಮಸಾಗರ ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕು ವಿದ್ಯುತ್ ಕಂಬಗಳು ಬಿದ್ದಿದ್ದು, ಇದರಲ್ಲಿ ಎರಡು ಕಂಬಗಳು ಬಾಗಿದ್ದವು.

ಒಣಗಲು ಹಾಕಿದ್ದ ಭತ್ತಕ್ಕೆ ಮಳೆ ನೀರು: ಪಟ್ಟಣದ ಎಪಿಎಂಸಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಕಟಾವು ಮಾಡಿದ್ದ ಭತ್ತವನ್ನು ರಾಶಿ ಹಾಕಿದ್ದರು. ಶುಕ್ರವಾರ ಬೆಳಗ್ಗೆಯಿಂದಲೂ ಯಾವುದೇ ರೀತಿಯ ಮಳೆಯ ಮುನ್ಸೂಚನೆ ಇರಲಿಲ್ಲ. ಇದರಿಂದ ಭತ್ತಕ್ಕೆ ತಾಡಪಾಲ್ ಹೊದಿಸದೇ ಹಾಗೆ ಬಿಡಲಾಗಿತ್ತು. ಆದರೆ ರಾತ್ರಿ ಇದ್ದಕ್ಕಿದ್ದಂತೆ ಮಳೆ ಸುರಿದ ಪರಿಣಾಮ ಭತ್ತದ ರಾಶಿಗೆ ನೀರು ನುಗ್ಗಿ ಭತ್ತವೆಲ್ಲ ಹಸಿಯಾಗಿದೆ. ಇದರಿಂದ ಭತ್ತಕ್ಕೆ ಕಡಿಮೆ ಬೆಲೆ ದೊರಕುವ ಆತಂಕ ಹೆಚ್ಚಾಗಿದೆ ಎಂದು ರೈತರಾದ ಪ್ರಕಾಶ, ಮಂಜುನಾಥ, ಗುರುರಾಜ, ಮಲ್ಲಯ್ಯ ತಿಳಿಸಿದ್ದಾರೆ.

ಹಗರಿಬೊಮ್ಮನಹಳ್ಳಿಯಲ್ಲಿ ಉತ್ತಮ ಮಳೆ:

ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಹಂಪಸಾಗರ, ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆಯಾಗಿದೆ. ಹಂಪಸಾಗರದಲ್ಲಿ ೪೦.೪ ಮಿಮೀ, ತಂಬ್ರಹಳ್ಳಿ ೨೩.೪ ಮಿಮೀ, ಹಗರಿಬೊಮ್ಮನಹಳ್ಳಿ ೨೬.೬ ಮಿಮೀ, ಮಾಲವಿ ೧೩.೮ ಮಿಮೀ ಮಳೆಯಾಗಿರುವ ವರದಿಯಾಗಿದೆ. ತಾಲೂಕಿನ ಬಾಚಿಗೊಂಡನಹಳ್ಳಿ, ಹಂಪಸಾಗರ, ಮಾಲವಿ, ಬನ್ನಿಕಲ್ಲು ಗ್ರಾಮಗಳಲ್ಲಿ ರೈತರ ಒಟ್ಟು ೧೫ ಹೆಕ್ಟೇರ್ ಭತ್ತದ ಬೆಳೆ ನೆಲಕ್ಕೊರಗಿದೆ. ಚಿಲುಗೋಡು, ನಂದಿಪುರ, ಯಡ್ರಾಮ್ಮನಹಳ್ಳಿ ಭಾಗಗಳಲ್ಲಿ ಹೆಚ್ಚು ಮಳೆ ಸುರಿದಿದ್ದು, ತುಂಗಭದ್ರಾ ಹಿನ್ನೀರು ಪ್ರದೇಶದ ಹಳ್ಳಗಳಿಗೆ ಮಳೆ ನೀರು ರಭಸವಾಗಿ ಹರಿದುಬರುತ್ತಿದೆ.ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಈ ಮಳೆ ಎಲ್ಲೆಡೆ ತಂಪೆರೆದಿದ್ದು, ಬೋರ್‌ವೆಲ್‌ಗಳು ರಿಚಾರ್ಜ್ ಆಗಲು ಪೂರಕವಾಗಿದೆ. ರೈತರು ಭೂಮಿಯನ್ನು ಹದಗೊಳಿಸಲು ಅನುಕೂಲವಾಗಿದೆ ಎನ್ನುತ್ತಾರೆ ರೈತ ಮುಖಂಡ ಹ್ಯಾಟಿ ಆನಂದರೆಡ್ಡಿ.

ಹರಪನಹಳ್ಳಿಯಲ್ಲಿ 192.9 ಮಿಮೀ ಮಳೆ:

ಹರಪನಹಳ್ಳಿ ತಾಲೂಕಿನಾದ್ಯಂತ ಶನಿವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದ್ದು, 192.9 ಮಿಮೀ ಮಳೆಯಾಗಿದೆ. ಹರಪನಹಳ್ಳಿ -35.4 ಮಿಮೀ, ಅರಸೀಕೆರೆ -30.3 ಮಿಮೀ, ಚಿಗಟೇರಿ -30.8 ಮಿಮೀ, ಹಿರೇಮೇಗಳಗೇರಿ -30.2, ಉಚ್ಚಂಗಿದುರ್ಗ -28.6, ತೆಲಿಗಿ -16.4, ಹಲುವಾಗಲು -21.2, ಹೀಗೆ ತಾಲೂಕಿನಲ್ಲಿ 192.9 ಮಿಮೀ ಮಳೆಯಾಗಿದೆ. ಸರಾಸರಿ 27.56 ಮಿಮೀ ಮಳೆಯಾಗಿದೆ ಎಂದು ಕಂದಾಯ ಮೂಲಗಳು ತಿಳಿಸಿವೆ. ರೈತರಿಗೆ ಭೂಮಿ ಸಿದ್ಧತೆ ಮಾಡಿಕೊಳ್ಳಲು ಹದ ಮಳೆಯಾಗಿದೆ. ಆದರೆ ಯಾವುದೇ ಹಾನಿ ವರದಿಯಾಗಿಲ್ಲ. ಬಿಸಿಲಿನ ಧಗೆಯಿಂದ ತತ್ತರಿಸಿದ ಜನತೆಗೆ ಸ್ವಲ್ಪ ಮಟ್ಟಿಗೆ ಈ ಮಳೆ ತಂಪೆರೆದಿದೆ.

ಕೊಟ್ಟೂರಿನಲ್ಲಿ ಶುಕ್ರವಾರ ರಾತ್ರಿ ವ್ಯಾಪಕ ಮಳೆ:

ಕೊಟ್ಟೂರು ಮತ್ತು ತಾಲೂಕಿನಲ್ಲಿ ಶುಕ್ರವಾರ ಮಧ್ಯರಾತ್ರಿ ವ್ಯಾಪಕ ಮಳೆ ಸುರಿದಿದೆ. ಸಿಡಿಲು-ಗುಡುಗು ಆರ್ಭಟದೊಂದಿಗೆ ಮಧ್ಯರಾತ್ರಿ 1 ಗಂಟೆಯಿಂದ ಶನಿವಾರ ಬೆಳಗ್ಗೆ 6.30ರ ವರೆಗೆ ಮಳೆ ಬಂದಿದೆ. ಕೊಟ್ಟೂರಿನಲ್ಲಿ 40.4 ಮಿಲಿಮೀಟರ್ ಮಳೆಯಾದರೆ ಕೋಗಳಿಯಲ್ಲಿ 22.0 ಮಿಲಿಮೀಟರ್ ಮಳೆ ಪ್ರಮಾಣದಲ್ಲಿ ಬಂದಿದೆ. ಮಳೆಯಿಂದಾಗಿ ಪಟ್ಟಣದ ಬಸ್ ನಿಲ್ದಾಣ ಮತ್ತಿತರರ ತಗ್ಗು ಪ್ರದೇಶ ಚರಂಡಿಗಳ ತ್ಯಾಜ್ಯ ನೀರು ಹರಿದು ಬಂದಿದ್ದು ಇದನ್ನು ತೆರವುಗೊಳಿಸುವ ಕಾರ್ಯ ಶನಿವಾರ ಬೆಳಗ್ಗೆ 8 ಗಂಟೆಯ ವರೆಗೂ ನಡೆಯಿತು. ತಾಲೂಕಿನ ಮಂಗಾಪುರ ಗ್ರಾಮದಲ್ಲಿ ಕಪ್ಲಿ ಕೊಟ್ರೇಶಪ್ಪ ಎಂಬವರಿಗೆ ಸೇರಿದ ಮನೆ ಭಾಗಶಃ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸಿಡಿಲು ಬಡಿದು ಎತ್ತು ಸಾವು, ಮೂರು ಮನೆ ಕುಸಿತ:

ಹೂವಿನಹಡಗಲಿ ತಾಲೂಕಿನಲ್ಲಿ ಶನಿವಾರ ಬೆಳಗಿನ ಜಾವದಲ್ಲಿ ಭಾರಿ ಪ್ರಮಾಣದ ಮಳೆ ಗಾಳಿ ಬೀಸಿದ್ದು, ಸಿಡಿಲು ಬಡಿದು ಎತ್ತು ಮೃತಪಟ್ಟಿರುವ ಘಟನೆ ನಡೆದಿದೆ.ತಾಲೂಕಿನ ಮುಸುಕಿನ ಕಲ್ಲಳ್ಳಿ ಗ್ರಾಮದ ಉಚ್ಚೆಂಗೆಮ್ಮ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮೃತಪಟ್ಟಿದೆ. ಜತೆಗೆ ಚಿಕ್ಕ ಕೊಳಚಿ, ಬಿತ್ಯಾನತಾಂಡ ಮತ್ತು ಕಾಗನೂರು ಗ್ರಾಮದಲ್ಲಿ ಒಂದೊಂದು ಮನೆ ಕುಸಿದು ಬಿದ್ದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.ಶನಿವಾರ ಬೆಳಗಿನ ಜಾವ ಸುರಿದ ಮಳೆಯಿಂದ ಅಲ್ಲಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ಹಿರೇಹಡಗಲಿ ಹೋಬಳಿ ವ್ಯಾಪ್ತಿಯಲ್ಲಿ 30 ಮಿ.ಮೀ. ಮಳೆಯಾಗಿದ್ದು, ಹೂವಿನಹಡಗಲಿ ಹೋಬಳಿಯಲ್ಲಿ 26.4 ಮಿ.ಮೀ. ಸೇರಿದಂತೆ ಒಟ್ಟು 28.2 ಮಿ.ಮೀ. ಮಳೆಯಾಗಿದೆ.